ಭಟ್ಕಳ ಬಂದರು ಹೂಳಿನ ಸಮಸ್ಯೆ ನಿವಾರಿಸಲು ಸಿಎಂ ಬೊಮ್ಮಾಯಿಗೆ ಶಾಸಕ ಸುನೀಲ ನಾಯ್ಕ ನೇತೃತ್ವದಲ್ಲಿ
ಮೀನುಗಾರರರು ಮನವಿ ಸಲ್ಲಿಸಿದ್ದಾರೆ
ತಾಲೂಕಿನ ಮಾವಿನಕುರ್ವೆ ಬಂದರಿನಲ್ಲಿ ತುಂಬಿಕೊಂಡಿರುವ ಹೂಳಿನಿಂದಾಗಿ ಮೀನುಗಾರಿಕೆ ನಡೆಸಲು ಕಷ್ಟವಾಗುತ್ತಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಸುನೀಲ ನಾಯ್ಕ ನೇತೃತ್ವದಲ್ಲಿ ಇಲ್ಲಿನ ಮೀನುಗಾರರು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರನ್ನು ಭೇಟಿ ಮಾಡಿ ಆಗ್ರಹಿಸಿದರು.
ಭಟ್ಕಳ ಬಂದರು ಅಳಿವೆ ಭಾಗದಲ್ಲಿ ತುಂಬಿಕೊಂಡಿರುವ ಹೂಳಿನಿಂದಾಗಿ ಬೋಟುಗಳು ಮೀನುಗಾರಿಕೆ ನಡೆಸಿ ದಡದತ್ತ ಬರಲು ಸಾಧ್ಯವಾಗುತ್ತಿಲ್ಲ. ಇದೇ ಹೂಳಿನಿಂದಾಗಿ ಅನೇಕ ಬಾರಿ ಬೋಟುಗಳು ಮುಗುಚಿ ಬಿದ್ದು ಹಾನಿಗೀಡಾಗಿವೆ.
ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಮೀನುಗಾರಿಕೆ ಮುಗಿಸಿ ಬರುವ ಬೋಟುಗಳು ಸಮುದ್ರದ ಉಬ್ಬರಕ್ಕಾಗಿ ಅಳಿವೆಯ ಹೊರಗೆ ಸಮುದ್ರದಲ್ಲಿಯೇ ಒಂದೆರಡು ಗಂಟೆ ಕಾದು ಕುಳಿತುಕೊಳ್ಳಬೇಕಾದ ಪರಿಸ್ಥಿತಿ ಇದೆ. ಆದ್ದರಿಂದ ಹೂಳು ತೆಗೆಯಲು ನಿರಂತರವಾಗಿ ಡ್ರೆಜ್ಜಿಂಗ್ ಕಾಮಗಾರಿ ನಡೆಸಬೇಕು ಎಂದು ಮೀನುಗಾರರು ವಿವರಿಸಿದರು. ಮೀನುಗಾರರ ಮನವಿಯನ್ನು ಸ್ವೀಕರಿಸಿದ ಮುಖ್ಯಮಂತ್ರಿಗಳು ಹೂಳು ತೆಗೆಯಲು ಅಗತ್ಯ ಅನುದಾನ ಒದಗಿಸುವ ಭರವಸೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಭಟ್ಕಳ ಬಿಜೆಪಿ ಮಂಡಲದ ಅಧ್ಯಕ್ಷ ಸುಬ್ರಾಯ ದೇವಾಡಿಗ, ಮಾವಿನಕುರ್ವೆ ಗ್ರಾಮ ಪಂಚಾಯತ ಉಪಾಧ್ಯಕ್ಷ ದಾಸ ನಾಯ್ಕ ತಲಗೋಡು, ರಾಮಾ ಖಾರ್ವಿ, ತಿಮ್ಮಪ್ಪ ಖಾರ್ವಿ, ಶ್ರೀನಿವಾಸ ಖಾರ್ವಿ ಮೊದಲಾದವರು ಉಪಸ್ಥಿತರಿದ್ದರು.
join our WhatsApp group
Leave a Comment