ಹೊನ್ನಾವರ: ತಾಲೂಕಿನಲ್ಲಿ ಹಣ್ಣು- ಹಂಪಲು ಬೆಳೆಯಲು ಸರ್ಕಾರದಿಂದ ಮಂಜೂರಾದ ಜಮೀನನ್ನು ಬೇರೆ ಉದ್ದೇಶಗಳಿಗೆ ಬಳಸುವುದನ್ನು ತಡೆಯಬೇಕು ಎಂದು ಹೊಸಾಕುಳಿ ಗ್ರಾಮದ ರೈತರಾದ ಕೃಷ್ಣ ಎಸ್.ಹೆಗಡೆ ಹಾಗೂ ಶ್ರೀಧರ ಮೊಗೇರ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೃಷ್ಣ ಹೆಗಡೆ, ರೈತರಿಗೆ ಜಮೀನು ಮಂಜೂರಾಗುವಾಗ ಹಣ್ಣು- ಹಂಪಲು ಗಿಡಗಳನ್ನು ಬೆಳೆಸತಕ್ಕದ್ದು ಎನ್ನುವ ಷರತ್ತಿನ ಮೇಲೆ ಈ ಹಿಂದೆ ನೀಡಲಾಗಿತ್ತು. ಹದಿನೈದು ವರ್ಷಗಳ ಷರತ್ತು ಮುಗಿದ ನಂತರ ಅದನ್ನು ಬೇರೆ ಉದ್ದೇಶಗಳಿಗೆ ಬಳಸದೇ ಹಣ್ಣು- ಹಂಪಲು ಬೆಳೆಯುವ ಉದ್ದೇಶವನ್ನು ಉಳಿಸಬೇಕು ಎಂದು ಆಗ್ರಹಿಸಿದರು.
ಹಾಡಿ ಜಮೀನನ್ನು ರೈತರಿಗೇ ಕೊಡಬೇಕು. ಆದರೆ ಹಾಡಿ ಜಮೀನನ್ನು ಯಾವ ಉದ್ದೇಶಗಳಿಗೆ ನೀಡಲಾಗುತ್ತದೆಯೋ ಅದೇ ಉದ್ದೇಶಗಳಿಗೆ ಬಳಸಬೇಕು. ಮಂಜೂರಾತಿ ನೀಡುವುದು ಬೇಡ ಎಂದರು.
ಶ್ರೀಧರ ಮೊಗೇರ ಮಾತನಾಡಿ, ಹೊಸಾಕುಳಿ ಗ್ರಾಮದಲ್ಲಿ ವ್ಯಕ್ತಿಯೊಬ್ಬರಿಗೆ ಹಣ್ಣು- ಹಂಪಲು ಬೆಳೆಸುವ ಷರತ್ತಿಗೊಳಪಟ್ಟು ಜಮೀನು ಮಂಜೂರಾಗಿತ್ತು. 15 ವರ್ಷಗಳ ಶರತ್ತಿನ ಅವಧಿ ಮುಗಿದ ಬಳಿಕ ಅದನ್ನು ಬೇರೆಯವರಿಗೆ ಮಾರಾಟ ಮಾಡಿದ್ದಾರೆ
ಜಮೀನನ ಖರೀದಿ ಮಾಡಿದವರು ಅದನ್ನು ಹಣ್ಣು ಹಂಪಲು ಬೆಳೆಸುವ ಬದಲು ಮಣ್ಣು ತೆಗೆದು ರಿಯಲ್ ಎಸ್ಟೇಟ್ ಮಾಡುತ್ತಿದ್ದಾರೆ. ಈ ಕುರಿತು ಅಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದ್ದು, ಯಾವುದೇ ಸಮರ್ಪಕ ಉತ್ತರ ಕೊಡುತ್ತಿಲ್ಲ. ಮಾಹಿತಿ ಹಕ್ಕಿನಲ್ಲಿ ಕೇಳಿದ ಮಾಹಿತಿಗಳಿಗೂ ಸರಿಯಾದ ಉತ್ತರ ಸಿಗುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಲಿ ಎಂದು ಒತ್ತಾಯಿಸಿದರು.
Leave a Comment