ಒಬ್ಬೊಬ್ಬರಿಗೆ ಎರಡರಿಂದ ಮೂರು ಫಿರ್ಕಾಗಳ ಕಾರ್ಯದಿಂದ ಒತ್ತಡ
ಶಿರಸಿ: ಜಿಲ್ಲೆಯಲ್ಲಿ ಗ್ರಾಮ ಲೆಕ್ಕಾಧಿಕಾರಿಗಳ ಕೊರತೆಯಿಂದಾಗಿ ಕಂದಾಯ ಇಲಾಖೆಗೆ ಸಂಬAಧಿಸಿದ ಸಾರ್ವಜನಿಕರ ಕೆಲಸ ತೀರಾ ವಿಳಂಬವಾಗುತ್ತಿದೆ. ಜಿಲ್ಲೆಯಲ್ಲಿ 102 ಗ್ರಾಮ ಲೆಕ್ಕಾಧಿಕಾರಿಗಳ ಹುದ್ದೆ ಖಾಲಿಯಿದ್ದು ಒಬ್ಬೊಬ್ಬ ಗ್ರಾಮ ಲೆಕ್ಕಾಧಿಕಾರಿ ಎರಡು ಮೂರು ಫಿರ್ಕಾಗಳ ಕಾರ್ಯ ನಿರ್ವಹಿಸುವ ಒತ್ತಡಕ್ಕೆ ಸಿಲುಕಿದ್ದಾರೆ.
ಕಂದಾಯ ಇಲಾಖೆಯ ಕಂದಾಯ ವಸೂಲಿ, ಜಾತಿ, ಆದಾಯ ಪ್ರಮಾಣ ಪತ್ರಗಳನ್ನು ನೀಡುವ ಜವಾಬ್ದಾರಿ ಗ್ರಾಮ ಲೆಕ್ಕಿಗರದ್ದಾಗಿದೆ. ಜಿಲ್ಲೆಗೆ 337 ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳು ಮಂಜೂರಾಗಿವೆ. 235 ಕಡೆಗಳಲ್ಲಿ ಗ್ರಾಮ ಲೆಕ್ಕಿಗರು ಇದ್ದಾರೆ. 102 ಹುದ್ದೆಗಳು ಖಾಲಿ ಇವೆ. ಇರುವ ಗ್ರಾಮಲೆಕ್ಕಿಗರಿಗೆ ಹೆಚ್ಚುವರಿ ಹೊಣೆ ವಹಿಸಲಾಗಿದೆ. ಶೇ. 35ರಷ್ಟು ಹುದ್ದೆಗಳು ಖಾಲಿ ಇರುವುದರಿಂದ ಕಂದಾಯ ಇಲಾಖೆಯ ಕೆಲಸಗಳು ಸಮರ್ಪಕವಾಗಿ ನಡೆಯುತ್ತಿಲ್ಲ.
ಎಂಬ ಆರೋಪ ಜನತೆಯದಾಗಿದೆ. ಅರಣ್ಯದಂಚಿನ ಗ್ರಾಮಗಳೇ ಹೆಚ್ಚು: ಜಿಲ್ಲೆಯಲ್ಲಿ ಅರಣ್ಯ ಪ್ರದೇಶ ಹೆಚ್ಚಾಗಿರುವುದರಿಂದ ಎಲ್ಲ ತಾಲೂಕುಗಳಲ್ಲಿ ಹಲವು ಗ್ರಾಮಗಳು ಕಾಡಿನ ಅಂಚಿನಲ್ಲಿವೆ. ಅದರಲ್ಲೂ ದಾಂಡೇಲಿ, ಜೊಯಿಡಾ, ಯಲ್ಲಾಪುರ, ಶಿರಸಿ ತಾಲೂಕುಗಳ ಬಹುತೇಕ ಗ್ರಾಮಗಳು ಅರಣ್ಯದಂಚಿನಲ್ಲಿ ಇರುವುದರಿಂದ ಸರ್ಕಾರಿ ಯೋಜನೆಗಳು ಸಮರ್ಪಕ ರೀತಿಯಲ್ಲಿ ಜನರಿಗೆ ತಲುಪುತ್ತಿಲ್ಲ. ಇದಕ್ಕೆ ಇಲ್ಲಿ ಸಿಬ್ಬಂದಿ ಕೊರತೆ ಮುಖ್ಯ ಕಾರಣ.
ಕೆಲಸಗಳಿಗೆ ಅಲೆದಾಟ: ಎಲ್ಲ ಗ್ರಾಮ ಲೆಕ್ಕಾಧಿಕಾರಿಗಳಿಗೆ ಕಚೇರಿ ಎಂಬುದಿಲ್ಲ.ಕೆಲವರು ತಮ್ಮ ಫಿರ್ಕಾದ ಮಧ್ಯವರ್ತಿ ಸ್ಥಳದಲ್ಲಿ ಬಾಡಿಗೆ ಕಟ್ಟಡದಲ್ಲಿ ಕಚೇರಿ ಮಾಡಿಕೊಂಡು ವಾರದಲ್ಲಿ ಒಂದೋ ಎರಡೋ ದಿನ ಅಲ್ಲಿ ಲಭ್ಯರಿರುತ್ತಾರೆ. ಹಾಗಾಗಿ, ಇವರು ಸದಾ ಅಲ್ಲಿ ಜನರ ಕೈಗೆ ಸಿಗುವುದಿಲ್ಲ. ಹೋಬಳಿ ಕೇಂದ್ರ, ತಾಲೂಕು ಕೇಂದ್ರಗಳಲ್ಲಿ ಇವರ ಓಡಾಟ ಹೆಚ್ಚು. ಇವರನ್ನು ಭೇಟಿಯಾಗಬೇಕು ಎಂದರೆ, ಅಲ್ಲಿಗೇ ಹೋಗಬೇಕು. ಫೋನ್ ಮೂಲಕ ಸಂರ‍್ಕಿಸಿ, ಅವರು ಸಿಗುವ ಸ್ಥಳಗಳಿಗೆ ತೆರಳಿ ಕೆಲಸ ಮಾಡಿಸಿಕೊಳ್ಳಬೇಕು. ಜನನ ಮತ್ತು ಮರಣ ಪ್ರಮಾಣ ಪತ್ರ, ಬೆಳೆ ಪರಿಹಾರ, ಜಾತಿ ಆದಾಯ ಪ್ರಮಾಣ ಪತ್ರ, ವೃದ್ಧಾಪ್ಯ ಮತ್ತು ಅಂಗವಿಕಲರ ವೇತನ, ಸಂಧ್ಯಾ ಸುರಕ್ಷಾ, ಭೂಸ್ವಾಧೀನ ಮತ್ತು ಭೂ ಪರಿರ‍್ತನೆ ಮೊದಲಾದ ಕೆಲಸ ಮಾಡಿಸಿಕೊಳ್ಳಲು ಅಲೆದು ಅಲೆದು ಸಾಕಾಗುತ್ತದೆ ಎನ್ನುವುದು ಬಹುತೇಕ ಗ್ರಾಮಸ್ಥರ ಮಾತು.
ಪ್ರಸ್ತಾವನೆ ರವಾನೆ
ಜಿಲ್ಲೆಯಲ್ಲಿ 102 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ ಇದೆ. ಆ ಗ್ರಾಮಗಳಲ್ಲಿ ಸರ್ಕಾರಿ ಕೆಲಸಕ್ಕೆ ತೊಂದರೆಯಾಗುವುದು ನಿಜ. ಹುದ್ದೆಗಳ ಭರ್ತಿಗಾಗಿ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಹಣಕಾಸು ಇಲಾಖೆ ಅನುಮೋದನೆ ನಂತರವಷ್ಟೇ ಸ್ಥಾನ ಭರ್ತಿ ಮಾಡಲಾಗುವದು ಎಂಬುದು ಹಿರಿಯ ಅಧಿಕಾರಿಗಳ ಸಮಜಾಯಿಷಿಯಾಗಿದೆ. ಇನ್ನು ಗ್ರಾಮ ಲೆಕ್ಕಿಗರು ಗ್ರಾಮೀಣ ಭಾಗದಲ್ಲಿ ಮಹತ್ತರ ಜವಾಬ್ದಾರಿ ಹೊರುವ ಕಾರಣ ಆದಷ್ಟು ಶೀಘ್ರದಲ್ಲಿ ಎಲ್ಲರ ನೇಮಕಾತಿ ನಡೆಯಲಿ ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ
Leave a Comment