
ಯಲ್ಲಾಪುರ : ಮುಂಬರುವ ಹೋಳಿ ಹಾಗೂ ಯುಗಾದಿ ಹಬ್ಬದ ಪ್ರಯುಕ್ತ ತಾಲೂಕಿನಲ್ಲಿ ಉತ್ತಮ ರೀತಿಯಲ್ಲಿ ಹಬ್ಬವನ್ನು ಆಚರಿಸುವ ಕುರಿತು ಶಾಂತಿ ಸಭೆಯು ಪಟ್ಟಣದ ಅಡಿಕೆ ಭವನದಲ್ಲಿ ತಾಲೂಕಾ ದಂಡಾಧಿಕಾರಿ ಶ್ರೀಕೃಷ್ಣ ಕಾಮ್ಕರ್ ಅವರ ಅಧ್ಯಕ್ಷತೆ ಯಲ್ಲಿ ನಡೆಯಿತು.
ಸಿ.ಪಿ.ಐ. ಸುರೇಶ ಯಳ್ಳೂರ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ , ಹಬ್ಬಗಳನ್ನು ಆಚರಿಸುವಾಗ ಯಾವುದೇ ಕಾರಣದಿಂದ ಅಹಿತಕರ ಘಟನೆಗಳು ನಡೆಯದಂತೆ ಸಂಘಟನೆಗಳು ಎಚ್ಚರವಹಿಸಬೇಕು. ಕೆಲ ಕಿಡಿಗೇಡಿಗಳು ಇಂತಹ ಸಮಯವನ್ನೇ ಬಳಸಿ, ಶಾಂತಿ ಸುವ್ಯವಸ್ಥೆಯನ್ನು ಕೆಡಿಸಲು ಕಾಯುತ್ತಿರುತ್ತಾರೆ. ಅಂತವರ ಮೇಲೆ ನಿಗಾ ವಹಿಸಲು ಪೊಲೀಸರೊಂದಿಗೆ ಸಹಕರಿಸಬೇಕು. ಕಾನೂನಿಗೆ ಬೆಲೆ ಕೊಟ್ಟು, ಮೌಲ್ಯಾಧಾರಿತ ಹಬ್ಬಗಳ ಆಚರಣೆ ಮಾಡುವಂತೆ ಸೂಚಿಸಿದರು.
- ಮಾ.18 ರಂದು ಬೇಡರವೇಶ ಪ್ರದರ್ಶನ
- ಮಾ.19 ರಂದು ಹೋಳೀ ಹಬ್ಬ ಆಚರಣೆ
- ಮಧ್ಯಾಹ್ನ 2 ಗಂಟೆ ವರೆಗೆ ಬಣ್ಣ ಆಡಲು ಅನುಮತಿ
- ಯುಗಾದಿ ಆಚರಣೆಗೆ ಯಾವುದೇ ನಿರ್ಬಂಧವಿಲ್ಲ
- ಅಹಿತಕ ಘಟನೆ ನಡೆಯದಂತೆ ಸಮಿತಿಯವರು ಎಚ್ಚರ ವಹಿಸಲು ಸೂಚನೆ
ತಹಶೀಲ್ದಾರ್ ಶ್ರೀಕೃಷ್ಣ ಕಾಮ್ಕರ್ ಮಾತನಾಡಿ, ತಾಲೂಕಾಡಳಿತದಿಂದ ಹಬ್ಬಗಳ ಆಚರಣೆಗೆ ಯಾವುದೇ ನಿರ್ಬಂಧವಿಲ್ಲ. ಆದರೆ ನಿಮ್ಮ ಆರೋಗ್ಯದ ರಕ್ಷಣೆಗೆ ಆದ್ಯತೆ ನೀಡುವುದು ನಿಮ್ಮ ಕೈಯಲ್ಲಿದೆ. ಶಿರಸಿ ಜಾತ್ರೆಯೂ ಸಹ ಇರುವುದರಿಂದ ಪ್ರಯಾಣಿಕರಿಗೆ ಬಲವಂತವಾಗಿ ಬಣ್ಣ ಬಳಿಯುವಂತಿಲ್ಲ, ಅಶ್ಲೀಲವಾಗಿ ವರ್ತಿಸುವಂತಿಲ್ಲ. ಅಂತವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು.
ಹಿಂದೂ ಸಂಘಟನೆಗಳ ಪ್ರಮುಖರೊಂದಿಗೆ ನಡೆದ ಈ ಸಭೆಯಲ್ಲಿ ಹಬ್ಬಗಳ ಆಚರಣೆ ಕುರಿತು ಸಲಹೆ ಸೂಚನೆಗಳನ್ನಾಧರಿಸಿ, ಕೆಲ ನಿಯಮಾವಳಿಗಳನ್ನು ತಿಳಿಸಲಾಯಿತು. ಪಟ್ಟಣದಲ್ಲಿ ಮಾ.19 ರಂದು ಹೋಳಿ ಹಬ್ಬ ಆಚರಿಸಲಾಗುತ್ತಿದ್ದು, ಮಧ್ಯಾಹ್ನ 2 ಗಂಟೆಯ ವರೆಗೆ ಬಣ್ಣ ಆಡಲು ಹಾಗೂ ಹೆಚ್ಚುವರಿ ಒಂದು ಗಂಟೆ ಸಮಯವನ್ನು ಆಚರಣೆ ನಡೆಸಿದ ಸ್ಥಳವನ್ನು ಸ್ವಚ್ಛಗೊಳಿಸಲು ಅನುಮತಿ ನೀಡಲಾಗಿದೆ. ಈ ಬಾರಿ ಪಟ್ಟಣದ ಶಾರದಾಗಲ್ಲಿ, ರವೀಂದ್ರನಗರ ಹಾಗೂ ಅಂಬೇಡ್ಕರ್‌ನಗರದಿಂದ 3 ಬೇಡರವೇಶ ತಂಡಗಳು ಭಾಗವಹಿಸುತ್ತಿದ್ದು ಮಾ.18 ರ ಸಂಜೆ ನಗರದಲ್ಲಿ ಮೆರವಣಿಗೆ ಹೊರಡಲಿದೆ.
ಯುಗಾದಿ ಉತ್ಸವಕ್ಕೆ ಸಂಬಂಧಿಸಿದಂತೆ ಮಾ. 30 ರಂದು ಪಟ್ಟಣದಲ್ಲಿ ಬೈಕ್ ರಾಲಿ ನಡೆಯಲಿದ್ದು, ಕರ್ಕಷ ಧ್ವನಿ ಮಾಡುವ ಸೈಲೆನ್ಸರ್ ಪೈಪ್, ಹಾರ್ನ್‌ಗಳ ಬಳಕೆ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಯುಗಾದಿಯ ಶೋಭಾಯಾತ್ರೆಗೆ ಸಮಿತಿಯವರು 2 ಡಿ.ಜೆ. ಬಳಸಲು ಅನುಮತಿ ಕೋರಿದ್ದು, ತಮ್ಮ ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ಸೂಚಿಸುವುದಾಗಿ ಸಿ.ಪಿ.ಐ. ಸುರೇಶ ಯಳ್ಳೂರ್ ತಿಳಿಸಿದರು.
ಸಭೆಯಲ್ಲಿ ಪಟ್ಟಣ ಪಂಚಾಯತ ಅಧ್ಯಕ್ಷೆ ಸುನಂದಾ ದಾಸ್, ಉಪಾಧ್ಯಕ್ಷೆ ಶ್ಯಾಮಿಲಿ ಪಾಟಣಕರ, ಮುಖ್ಯಧಿಕಾರಿ ಸಂಗನಬಸಯ್ಯ, ಯಲ್ಲಾಪುರ ಯುಗಾದಿ ಉತ್ಸವ ಸಮಿತಿಯ ಅಧ್ಯಕ್ಷ ಸದಸ್ಯರು, ಕಿರವತ್ತಿಯ ಪ್ರಮುಖರು, ಇತರೆ ಸಮಿತಿಯ ಸದಸ್ಯರು, ಹಿಂದೂ ಪ್ರಮುಖರು ಉಪಸ್ಥಿತರಿದ್ದರು.
Leave a Comment