ಹೊನ್ನಾವರ: ಅಸಂಘಟಿತ ವಲಯದ ಕಾರ್ಮಿಕರ ಶ್ರೇಯೋಭಿವೃದ್ಧಿಗೆ ಅನುಕೂಲವಾಗುವಂತೆ 12 ಅಂಕಿಯ ವಿಶಿಷ್ಟ ಸಂಖ್ಯೆಯನ್ನು ಇ-ಶ್ರಮದಲ್ಲಿ ನೊಂದಾಯಿತರಾದವರಿಗೆ ನೀಡಲಾಗುತ್ತಿದೆ. ವಿವಿಧ ಪ್ರಗತಿಪರ ಸಾಮಾಜಿಕ ಭದ್ರತಾ ಯೋಜನೆಗಳನ್ನು ನೋಂದಾಯಿತರಾದವರು ಇ- ಶ್ರಮದ ಮೂಲಕ ಪಡೆಯಬಹುದಾಗಿದೆ ಎಂದು ಸೌಜನ್ಯತಾ ಸಮಗ್ರ ನಾಗರೀಕ ಹಿತರಕ್ಷಣಾ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ರಾಘವೇಂದ್ರ ಪಾಲನಕರ ತಿಳಿಸಿದ್ದಾರೆ.
ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಅಸಂಘಟಿತ ವಲಯದ ಸುಮಾರು 38 ಕೋಟಿ ಕಾರ್ಮಿಕರಿಗಾಗಿ 12 ಅಂಕಿಯ ಯುನಿವರ್ಸಲ್ ಅಕೌಂಟ್ ನಂಬರ್ (ಯುಎನ್) ಮತ್ತು ಇ-ಶ್ರಮ್ ಕಾರ್ಡ್ ಅನ್ನು ನೀಡಲಾಗುತ್ತಿದೆ. ಇದು ದೇಶಾದ್ಯಂತ ಮಾನ್ಯವಾಗಿರುತ್ತದೆ. ಇ-ಶ್ರಮ್ ಕಾರ್ಡ್ ದೇಶದ ಕೋಟ್ಯಾಂತರ ಅಸಂಘಟಿತ ಕಾರ್ಮಿಕರಿಗೆ ಹೊಸ ಗುರುತನ್ನು ನೀಡುತ್ತದೆ. ಭವಿಷ್ಯದಲ್ಲಿ ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಗಳ ಲಾಭ ಪಡೆಯಲು ಈ ಕಾರ್ಮಿಕ ಕಾರ್ಡ್ ಸಹಾಯಕಾರಿಯಾಗುತ್ತದೆ.
ಇದರಲ್ಲಿ ಕಟ್ಟಡ ಕಾರ್ಮಿಕರು, ವಲಸೆ ಕಾರ್ಮಿಕರು, ಬೀದಿ ವ್ಯಾಪಾರಿಗಳು, ಅಕ್ಕಸಾಲಿಗರು, ಟೇಲರಿಂಗ್, ಕಂಬಾರರು, ಕುಂಬಾರರು, ಕ್ಷೌರಿಕರು ಹಾಗೂ ಜೀವನೋಪಾಯಕ್ಕಾಗಿ ವಿವಿಧ ವೃತ್ತಿ ಕೌಶಲ್ಯದಲ್ಲಿ ತೊಡಗಿರುವವರು ಇನ್ನೂ ಶ್ರಮದಲ್ಲಿ ನೋಂದಾಯಿಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ.
ಅಸಂಘಟಿತ ವಲಯದ ಕಾರ್ಮಿಕರು ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್‌ಧನ್ ಯೋಜನೆ, ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ ಮತ್ತು ಪ್ರಧಾನಮಂತ್ರಿ ಜೀವನಜ್ಯೋತಿ ಬಿಮಾ ಯೋಜನೆಗಳ ಲಾಭವನ್ನು ಇದರಿಂದ ಪಡೆಯಲು ಸಾಧ್ಯವಾಗುತ್ತದೆ.
ಕುಟುಂಬಕ್ಕೆ ವಾರ್ಷಿಕ 5 ಲಕ್ಷ ರೂಪಾಯಿ ಉಚಿತ ಆರೋಗ್ಯ ವಿಮಾ ರಕ್ಷಣೆ ನೀಡಲಾಗುತ್ತದೆ. ಇನ್ನೂ ಶ್ರಮದಲ್ಲಿ ನೊಂದಾಯಿತರಾಗಲು ಆಧಾರ್ ಕಾರ್ಡ್ ಸಂಖ್ಯೆ, ನೊಂದಾಯಿತ ಮೊಬೈಲ್ ಸಂಖ್ಯೆ ಹಾಗೂ ನಾಮನಿರ್ದೇಶಿತ ಸದಸ್ಯರ ವಿವರಗಳೊಂದಿಗೆ 16ರಿಂದ 59 ವರ್ಷಗಳ ವಯೋಮಾನದವರು ಸೌಜನ್ಯತಾ ಸಮಿತಿಯ (ವಾಟ್ಸಪ್) ಸಹಾಯವಾಣಿ ಸಂಖ್ಯೆ: 99864 97452ಗೆ ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ ಸಂಪರ್ಕಿಸಿ ಉಚಿತವಾಗಿ ಇ- ಶ್ರಮದಲ್ಲಿ ನೋಂದಾಯಿಸುವುದರ ಮೂಲಕ ವಿವಿಧ ಪ್ರಗತಿಪರ ಸಾಮಾಜಿಕ ಭದ್ರತಾ ಯೋಜನೆಗಳನ್ನು ಪಡೆಯಬಹುದಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Comment