ಬೆಂಗಳೂರು : ಪ್ರೀತ್ಸು ಎಂದು ದುಂಬಾಲು ಬಿದ್ದ ಯುವಕನ ಪ್ರೀತಿಗೆ ನಿರಾಕರಿಸಿದಳು ಎಂಬ ಕಾರಣಕ್ಕೆ ಬೆಳ್ಳಂಬೆಳಗ್ಗೆ ಆಕೆಯ ಮೇಲೆ ಆಸಿಡ್ ದಾಳಿ ನಡೆಸಿ ಪರಾರಿಯಾಗಿರುವ ಘಟನೆ ಕಾಮಾಕ್ಷಿಪಾಳ್ಯ ಠಾಣೆ ವ್ಯಾಪ್ತಿಯಲ್ಲಿ ಗುರುವಾರ ನಡೆದಿದೆ. ಯುವತಿಯ ಅಕ್ಕನ ಮದುವೆ ಸಂಭ್ರಮದಲ್ಲಿದ್ದ ಆಕೆಯ ಪೋಷಕರು ಈಗ ಕಣ್ಣೀರು ಸುರಿಸುತ್ತಿದ್ದಾರೆ.
ಹೆಗ್ಗನಹಳ್ಳಿ ಕ್ರಾಸ್ ನಿವಾಸಿ 25 ವರ್ಷದ ಯುವತಿಯ ಮೇಲೆ ಈ ದಾಳಿ ನಡೆದಿದ್ದು ಆಕೆಯ ಬೆನ್ನು, ತಲೆ, ಕುತ್ತಿಗೆ ಭಾಗದಲ್ಲಿ ಗಾಯಗಳಾಗಿವೆ. ಸದ್ಯ ಸೇಂಟ್ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಗಾರ್ಮೆಂಟ್ಸ್ ಉದ್ಯೋಗಿ ಯಾಗಿರುವ ಆರೋಪಿ ನಾಗೇಶ್ ತಲೆ ಮರೆಸಿ ಕೊಂಡಿದ್ದಾನೆ. ಯುವತಿ ಎಂ.ಕಾಂ ಪದವೀಧರೆ ಯಾಗಿದ್ದು, ಆಕೆಯ ತಂದೆ ತರಕಾರಿ ಮಾರಿ ಜೀವನ ಸಾಗಿಸುತ್ತಿದ್ದಾರೆ. ಹಲವು ದಿನಗಳಿಂದ ನಾಗೇಶ್ ಯುವತಿಯ ಹಿಂದೆ ಬೆನ್ನು ಹತ್ತಿ ತನ್ನನ್ನು ಪ್ರೀತಿಸುವಂತೆ ಒತ್ತಾಯಿಸುತ್ತಿದ್ದ. ಆದರೆ ಯುವತಿ ಯಾವುದೇ ಕಾರಣಕ್ಕೂ ಪ್ರೀತಿಸುವುದಿಲ್ಲ ಎಂದು ಹೇಳಿದ್ದಾಳೆ. ಪ್ರತಿದಿನವೂ ಇದೇ ರೀತಿ ಮುಂದುವರಿದಾಗ ಕೊನೆಗೆ ಯುವತಿ ತನ್ನ ತಂದೆಗೆ ವಿಷಯ ತಿಳಿಸಿದ್ದಾಳೆ.
ಆಕೆಯ ತಂದೆ ಯುವಕನ ಅಣ್ಣನಿಗೆ ತಿಳಿಸಿದ್ದಾನೆ. ಆತನ ಅಣ್ಣ ನಾಗೇಶನಿಗೆ ಬೈದು ಬುದ್ಧಿ ಹೇಳಿದ. ಸ್ವಲ್ಪದಿನ ಸುಮ್ಮನಿದ್ದ ನಾಗೇಶ್ ಮತ್ತೆ ಯುವತಿಯ ಹಿಂದೆ ಬಿದ್ದು ಪ್ರೀತ್ಸು ಎಂದು ಕೇಳುತ್ತಿದ್ದ. ಆಕೆ ಸುತಾರಾಂ ಒಪ್ಪಲಿಲ್ಲ.
ಇದನ್ನೇ ಮನಸ್ಸಿನಲ್ಲಿಟ್ಟುಕೊಂಡಿದ್ದ ನಾಗೇಶ್ ಬೆಳಗ್ಗೆ 8.30 ರ ಸುಮಾರಿಗೆ ಯುವತಿ ಕೆಲಸ ಮಾಡುವ ಕಟ್ಟಡದ ಕಂಪೌಂಡ್ ಬಳಿ ನಿಂತಿದ್ದ. ಸ್ವಲ್ಪ ಹೊತ್ತಿನಲ್ಲಿಯೇ ಯುವತಿ ತನ್ನ ತ೦ದೆಯ ಬೈಕ್ಮೇಲೆ ಬಂದಿದ್ದಾಳೆ. ಆಕೆಯನ್ನು ಕಚೇರಿಯ ಹೊರಗೆ ಬಿಟ್ಟು ತಂದೆ ಹೋಗಿದ್ದಾರೆ. ನಾಗೇಶ್ ನಿಂತಿರುವುದನ್ನು ಗಮನಿಸದ ಯುವತಿ ತಾನು ಕೆಲಸ ಮಾಡುವ ಮೊದಲ ಮಹಡಿಯಲ್ಲಿರುವ ಕಚೇರಿಗೆ ತೆರಳಲು ಅಲ್ಲಿಯೇ ಇದ್ದ ಮೆಟ್ಟಿಲುಗಳನ್ನು ಹತ್ತುತ್ತಿದ್ದಾಗ ಹೊರಗಿನಿಂದ ಓಡಿಬಂದ ಆರೋಪಿ ನಾಗೇಶ್, ಕೈಯಲ್ಲಿದ್ದ ಡಬ್ಬದ ಮುಚ್ಚಳ ತೆಗೆದು ಆಕೆಯ ಮೇಲೆ ಆ್ಯಸಿಡ್ ಸುರಿದಿದ್ದಾನೆ.
ಆಕೆಯ ಕಿರುಚಾಟ ಕೇಳಿ ಅಕ್ಕಪಕ್ಕದಲ್ಲಿದ್ದ ಜನರು ಕೂಡಲೇ ಸಮೀಪವಿದ್ದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಯುವತಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದರು. ಸದ್ಯ ಹೆಚ್ಚಿನ ಚಿಕಿತ್ಸೆಗಾಗಿ ಆಕೆಯನ್ನು ಸೇಟ್ಜಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಯುವತಿಗೆ ಶೇ 40 ರಿಂದ 50 ರಷ್ಟು ಸುಟ್ಟುಗಾಯಗಳಾಗಿದ್ದು ಸದ್ಯಕ್ಕೆ ಪ್ರಾಣಾಪಾಯವಿಲ್ಲ ಎಂದು ಖಾಸಗಿ ಆಸ್ಪತ್ರೆಯ ವೈದ್ಯ ಡಾ. ಕಾರ್ತಿಕ್ ತಿಳಿಸಿದ್ದಾರೆ.
`ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಆರೋಪಿಯ ಪತ್ತೆಗಾಗಿ ತಂಡವನ್ನು ರಚಿಸಲಾಗಿದೆ, ಆರೋಪಿಯನ್ನು ಬಂಧಿಸಲಾಗುವುದು.
ಡಿಸಿಪಿ ಸಂಜೀವ್ ಪಾಟೀಲ್
ಶೀಘ್ರ ಕ್ರಮ
ಇದೊಂದು ಅಮಾನುಷ ಕೃತ್ಯ. ಶೀಘ್ರ ದಲ್ಲಿಯೇ ಆರೋಪಿಯನ್ನು ಬಂಧಿಸಿ ಕಾನೂನು ರೀತ್ಯ ಶಿಕ್ಷೆ ಕೊಡಬೇಕು ಹಾಗೂ ಇಂತಹ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು ಎಂದು ಪೊಲೀಸರಿಗೆ ಸೂಚಿಸಲಾಗಿದೆ.
ಆಗರ ಜ್ಞಾನೇದ್ರ ಗೃಹಸಚಿವ
Leave a Comment