ಭಟ್ಕಳ: ಚೆಕ್ ಕೇಸೊಂದರ ತನಿಖೆ ನಡೆಸಿದ ಇಲ್ಲಿನ ಹಿರಿಯ ವಿಭಾಗದ ಸಿವಿಲ್ ನ್ಯಾಯಾಧೀಶೆ ರೇಣುಕಾ ರಾಯ್ಕರ್ ಅವರು ಆರೋಪಿಗೆ ದಂಡ, ತಪ್ಪಿದಲ್ಲಿ ಶಿಕ್ಷೆ ಅನುಭವಿಸುವಂತೆ ಆದೇಶ ನೀಡಿ ತೀರ್ಪು ನೀಡಿದ್ದಾರೆ.
ಮುರ್ಡೇಶ್ವರದ ಫಿಶ್ ಇಂಡಿಯಾ ಬೋಟ್ ಮಾಲೀಕರಾದ ಅಬ್ದುಲ್ ಫಯಾಜ್ ಹಾಜೀಬ್ ಇವರು ಮಾವಿನಕುರ್ವೆಯಲ್ಲಿರುವ ಶ್ರೀ ಕುಟುಮೇಶ್ವರ ವಿವಿದೊದ್ದೇಶಗಳ ಸೌಹಾರ್ಧ ಸಹಕಾರಿ ನಿಯಮಿತ ಮಾವಿನಕುರ್ವೆ ಬಂದರು ಇದರಲ್ಲಿ ಸಾಲ ಮಾಡಿದ್ದು ಸಾಲ ಮರುಪಾವತಿಗಾಗಿ ಮುರ್ಡೇಶ್ವರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ತಮ್ಮ ಖಾತೆಯ ಚೆಕ್ ನೀಡಿದ್ದರು.
ಪಿರ್ಯಾದಿ ಸಂಸ್ಥೆಯ ಚೆಕ್ ಬ್ಯಾಂಕಿಗೆ ಸಲ್ಲಿಸಿದಾಗ ಬ್ಯಾಂಕಿನಲ್ಲಿ ನಗದಾಗದೇ ವಾಪಾಸು ಮಾಡಲಾಗಿತ್ತು. ನಂತರ ಸಾಲಗಾರಿಗೆ ನೋಟೀಸು ನೀಡಿ ಸಮಯ ನೀಡಿದರೂ ಹಣ ತುಂಬದೇ ಇರುವುದರಿಂದ ಸಹಕಾರಿ ಸಂಸ್ಥೆಯವರು ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.
ದಾವೆಯನ್ನು ವಿಚಾರಣೆ ಮಾಡಿದ ನ್ಯಾಯಾಧೀಶರು ಆರೋಪಿತ ಅಬ್ದುಲ್ ಫಯಾಜ್ ಹಾಜೀಬ್ ಇವರಿಗೆ ರೂ.11,86,252 ರೂಪಾಯಿಗಳ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ದಂಡದ ಹಣದಲ್ಲಿ ಪಿರ್ಯಾದಿ ಸಂಸ್ಥೆಗೆ ರೂ.11,81,252 ಹಾಗೂ ರೂ.5,000 ವನ್ನು ನ್ಯಾಯಾಲಯದ ಖರ್ಚು ಇತ್ಯಾದಿಗಳಿಗಾಗಿ ನಿಡುವಂತೆಯೂ ಆದೇಶ ಮಾಡಿದ್ದಾರೆ.
ಆರೋಪಿತನು ದಂಡ ತುಂಬಲು ತಪ್ಪಿದಲ್ಲಿ ಆರು ತಿಂಗಳುಗಳ ಸಾದಾ ಶಿಕ್ಷೆಯನ್ನು ಅನುಭವಿಸಬೇಕು ಎಂದೂ ತೀರ್ಪಿನಲ್ಲಿ ಹೇಳಿದ್ದಾರೆ. ಪಿರ್ಯಾದಿ ಸಂಸ್ಥೆಯ ಪರವಾಗಿ ನ್ಯಾಯವಾದಿ ವಿ.ಆರ್. ಸರಾಫ್ ಅವರು ವಾದಿಸಿದ್ದರು.
ಭಟ್ಕಳ ಹಾಗೂ ಸುದ್ದಿಗಾಗಿ ಈ ಗ್ರುಪ್ ಸೇರಿ ; https://chat.whatsapp.com/CCdLQvKCIHJFyLu2WpU4xI
Leave a Comment