ಹೊನ್ನಾವರ: ರಸ್ತೆ ಅಪಘಾತ ಪ್ರಕರಣದಲ್ಲಿ ಆರೋಪಿ ಚಾಲಕನಿಗೆ 2 ವರ್ಷ 3 ತಿಂಗಳು ಜೈಲು ಶಿಕ್ಷೆ ಮತ್ತು ರೂ.2,500 ದಂಡ ವಿಧಿಸಿ ಇಲ್ಲಿನ ಹಿರಿಯ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಲಯ ಆದೇಶಿಸಿದೆ.
ತಾಲೂಕಿನ ಹಳದೀಪುರ ಗ್ರಾಮದ ಸಾಲಿಗೇರಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ 2016ರ ಮಾರ್ಚ್ 26ರಂದು ಅಪಘಾತ ನಡೆದಿತ್ತು. ಹೊನ್ನಾವರ ಕಡೆಯಿಂದ ಕುಮಟಾ ಕಡೆಗೆ ಲಾರಿಯನ್ನು ಅತಿವೇಗವಾಗಿ ಮತ್ತು ನಿಷ್ಕಾಳಜಿಯಿಂದ ಚಲಾಯಿಸಿಕೊಂಡು ಹೋಗಿ ಸಾಲಿಕೇರಿ ಅಶ್ವತ್ಥಕಟ್ಟೆಯ ಹತ್ತಿರ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ವಾಹನಕ್ಕೆ ಓವರ್ ಟೇಕ್ ಮಾಡಲು ಕುಮಟಾ ಕಡೆಯಿಂದ ಹೊನ್ನಾವರ ಕಡೆಗೆ ತೆರಳುತ್ತಿದ್ದ ಮಾರುತಿ ಓಮಿನಿ ವಾಹನಕ್ಕೆ ಡಿಕ್ಕಿ ಹೊಡೆದು, ಮಾರುತಿ ಓಮಿನಿಯಲ್ಲಿದ್ದ ನಳಿನಿ ಭಟ್ ಮತ್ತು ಧ್ರುವ ಹೆಗಡೆ ಅವರ ತಲೆಗೆ ಹಾಗೂ ದೇಹದ ಇತರೆ ಭಾಗಕ್ಕೆ ಗಾಯಗಳಾಗಿತ್ತು. ಓಮಿನಿ ಚಾಲಕ ಗಣಪತಿ ಭಟ್ ಅಪಘಾತದಿಂದ ತಲೆಗೆ ಗಂಭೀರ ಪೆಟ್ಟು ಬಿದ್ದು ಮೃತಪಟ್ಟಿದ್ದರು.
ಈ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯ ಅಂದಿನ ಎಎಸ್ಐ ಗಣೇಶ ಬಿ.ಜೋಗಳೇಕರ ಮತ್ತು ಆಗಿನ ಪೊಲೀಸ್ ನಿರೀಕ್ಷಕ ಕುಮಾರಸ್ವಾಮಿ ಪ್ರಕರಣ ದಾಖಲಿಸಿಕೊಂಡು ಹೋಗಿ ತನಿಖೆ ನಡೆಸಿ, ಆರೋಪಿ ಲಾರಿ ಚಾಲಕ, ಅಂಕೋಲಾ ತಾಲೂಕಿನ ಅಜ್ಜಿಟ್ಟು ಇಸ್ಲಾಂಪುರ ನಿವಾಸಿ ಸಿರಾಜ್ ಅಜಿಮುದ್ದಿನ್ ಶೇಖ್ ವಿರುದ್ಧ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು.
ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ವಕೀಲ ವೆಂಕಟೇಶ ಗೌಡ 12 ಸಾಕ್ಷಿದಾರರನ್ನು ವಿಚಾರಿಸಿ ವಾದಿಸಿದ್ದರು. ಆರೋಪಿತನ ವಿರುದ್ಧ ಆರೋಪ ಸಾಬೀತಾದ ಕಾರಣ ನ್ಯಾಯಾಧೀಶ ಕುಮಾರ ಜಿ. ಅವರು ವಿಚಾರಣೆ ಆರೋಪಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
Leave a Comment