ಕಾರವಾರ: 52ರ ವಯಸ್ಸಿನ ವ್ಯಕ್ತಿಯೊಬ್ಬ 16 ವಯಸ್ಸಿನ ಅಪ್ರಾಪ್ತಿಯನ್ನು 3 ತಿಂಗಳ ಹಿಂದೆ ವಿವಾಹವಾಗಿರುವುದು ಕಾರವಾರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಪೊಲೀಸರು ಪೋಕ್ಸ್ ಪ್ರಕರಣ ದಾಖಲಿಸಿ ವರನನ್ನು ಬಂಧಿಸಿದ್ದು, ಮದುವೆಗೆ ಹಾಜರಾದ 60 ಮಂದಿಗೆ ಅಧಿಕಾರಿಗಳು ನೋಟೀಸ್ ಜಾರಿ ಮಾಡಿದ್ದಾರೆ.
ನಗರದ ದೇವಾಲಯವೊಂದರಲ್ಲಿ ಜುಲೈ 19ರಂದು ಅದ್ದೂರಿಯಾಗಿ ವಿವಾಹವೊಂದು ನಡೆದಿತ್ತು. ವಧು ದೈಹಿಕವಾಗಿ ದಷ್ಟಪುಷ್ಟವಾಗಿದ್ದ ಕಾರಣ 52 ವಯಸ್ಸಿನ, ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡುತ್ತಿದ್ದ ವ್ಯಕ್ತಿಗೆ ವಧುವನ್ನು ವಿವಾಹ ಮಾಡಿಕೊಡಲಾಗಿತ್ತು. ಅದ್ದೂರಿಯಾಗಿಯೇ ನಡೆದಿದ್ದ ವಿವಾಹದಲ್ಲಿ ಸುಮಾರು 60 ಮಂದಿ ಭಾಗವಹಿಸಿದ್ದರು.
ಮದುವೆಯಾಗಿ ಮೂರು ತಿಂಗಳ ಬಳಿಕ ಅಂಗನವಾಡಿ ಕಾರ್ಯಕರ್ತೆಯರ ಖಚಿತ ಮಾಹಿತಿ ಮೇರೆಗೆ ವಧು ಅಪ್ರಾಪ್ತ ಎಂಬ ಮಾಹಿತಿ ಬಹಿರಂಗಗೊಂಡಿದ್ದು, ಕೂಡಲೇ ಎಚ್ಚೆತ್ತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ವಧುವನ್ನ ಪತ್ತೆ ಹಚ್ಚಿ, 52ರ ವ್ಯಕ್ತಿಯನ್ನ ಬಂಧಿಸಲು ಪೊಲೀಸರು ಮುಂದಾಗಿದ್ದಾರೆ.
ಬಂಧನದ ಭೀತಿಯಿಂದ ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಬಳಿಕ ಅಪ್ರಾಪ್ತಿಯನ್ನು ಮದುವೆ ಮಾಡಿದ ಬಗ್ಗೆ ಪೋಕ್ಸ್ ಪ್ರಕರಣ ದಾಖಲಾಗಿದೆ ಎಂಬ ಬಗ್ಗೆ ಎರಡೂ ಕುಟುಂಬದವರಿಗೆ ಪೊಲೀಸರು ಹಾಗೂ ಇತರ ಅಧಿಕಾರಿಗಳು ವಿವರಿಸಿದ ಬಳಿಕ ಎರಡೂ ಕುಟುಂಬ ಕಕ್ಕಾಬಿಕ್ಕಿಯಾಗಿದೆ.
ಅಲ್ಲದೇ ಮದುವೆಗೆ ಹೋಗಿದ್ದ ಸಂಬಂಧಿಕರು ಸೇರಿ ಒಟ್ಟೂ 60 ಜನರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನೋಟಿಸ್ ನೀಡಿದೆ. ಕಾರವಾರ ಮಹಿಳಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸದ್ಯ ವಿವಾಹಿತ ವ್ಯಕ್ತಿಯನ್ನ ಪೊಲೀಸರು ಬಂಧಿಸಿ ಕಾರವಾರ ಜೈಲಿನಲ್ಲಿರಿಸಿದ್ದರೆ, ಅಪ್ರಾಪ್ತ ಸಾಂತ್ವನ ಕೇಂದ್ರದಲ್ಲಿ ಸಂತ್ರಸ್ತೆಯಾಗಿದ್ದಾಳೆ.
Leave a Comment