ಹಳಿಯಾಳ : ಈ.ಐ.ಡಿ ಸಕ್ಕರೆ ಕಾರ್ಖಾನೆ ಹಳಿಯಾಳ ರವರು ಕಬ್ಬುಬೆಳೆಗಾರರ ಸಂಘದ ಬೇಡಿಕೆಯನ್ನು ಈಡೇರಿಸುವವರೆಗೂ ಧರಣಿ ಸತ್ಯಾಗ್ರಹವನ್ನು ಹಿಂದಕ್ಕೆ ತೆಗೆದುಕೊಳ್ಳುವುದಿಲ್ಲ ಎಂದು, ಕಳೆದ ಒಂದು ವಾರದಿಂದ ಹಗಲು ರಾತ್ರಿ ಪ್ರತಿಭಟನೆ ಮಾಡುತ್ತಿರುವ ರೈತರು ಗಟ್ಟಿ ನಿರ್ಧಾರವನ್ನು ತೆಗೆದು ಕೊಂಡಿದ್ದಾರೆ.
ಹಳಿಯಾಳದ ತಹಸೀಲ್ದಾರ ಕಚೇರಿಯ ಆವರಣದಲ್ಲಿ ಬೆಳಗಿನಿಂದಲೇ ಸುತ್ತ ಮುತ್ತಲಿನ ಹಳ್ಳಿಗಳಿಂದ ಸಾವಿರಾರು ರೈತರು ಬಂದು ಜಮಾವಣೆ ಆಗಿದ್ದರು. ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಸಂದೀಪ್ ಕುಮಾರ್ ಬೋಬಾಟಿ ಮಾತನಾಡಿ ನಮ್ಮ ಹೋರಾಟ ಬೇಡಿಕೆ ಈಡೇರುವವರೆಗೆ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ, ಒಂದನೇ ತಾರೀಕಿನಂದು ನಡೆದ ಶಾಂತಿ ಸಂಧಾನ ಸಭೆಯಲ್ಲಿ ಉಪ ವಿಭಾಗಾಧಿಕಾರಿ ಕಾರವಾರ ರವರ ಮುಂದೆ ನಮ್ಮ ಬೇಡಿಕೆಗಳಿಗೆ ಒಪ್ಪಿಕೊಂಡಿದ್ದನ್ನು ಬಿಟ್ಟು, ಆ ಮಾತಿಗೆ ತಪ್ಪಿ ಕಾರ್ಖಾನೆಯನ್ನು ಮತ್ತೆ ಪ್ರಾರಂಭ ಮಾಡಿದ್ದು ನಾಚಿಕೆಗೇಡು ಎಂದು ಆರ್ಭಟಿಸಿದರು.
ಹಳೆಯ ಬಾಕಿ 305 ರೂಪಾಯಿಗಳನ್ನು ನೀಡಬೇಕು ಹಾಗೂ ಈ ಸಲ ಕಬ್ಬಿಗೆ ಹೆಚ್ಚಿನ ದರವನ್ನು ನೀಡಬೇಕು ಎಂದು ಬೆಳಗಿನಿಂದ ಸಂಜೆವರೆಗೆ ಪ್ರತಿಭಟನೆ ಮಾಡಿದಾಗ ಕೊನೆಯಲ್ಲಿ ತಾಲೂಕು ಆಡಳಿತ ಮತ್ತು ಶಿರಸಿ ಉಪ ವಿಭಾಗಾಧಿಕಾರಿಗಳು ಪ್ರತಿಭಟನಾಕಾರರಿಗೆ ಮನವೊಲಿಸುವಲ್ಲಿ ಕೆಲ ಮಟ್ಟಿಗೆ ಸಫಲವಾದರು.
ಇನ್ನು ಕೆಲವೇ ದಿನದಲ್ಲಿ ಸಕ್ಕರೆ ಸಚಿವರೊಂದಿಗೆ ಸಭೆಯನ್ನು ನಡೆಸಿ ಈ ಸಮಸ್ಯೆಗೆ ಶೀಘ್ರವಾಗಿ ಪರಿಹಾರವನ್ನು ಕೊಡುತ್ತೇವೆ ಎಂದು ಭರವಸೆಯನ್ನು ನೀಡಿದರು. ಆದರೂ ಕೂಡ ನಾವು ಪ್ರತಿಭಟನೆಯನ್ನು ಮುಂದುವರೆಸುವುದಾಗಿ ಹಾಗೂ ಸಮಸ್ಯೆ ಬಗೆ ಹರಿಯುವ ವರೆಗೆ ಸಕ್ಕರೆ ಕಾರ್ಖಾನೆಯನ್ನು ಆರಂಭಿಸಲು ಬಿಡುವುದಿಲ್ಲ ಎಂದು ಕಬ್ಬು ಬೆಳಗಾರರ ಸಂಘದವರು ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಉಡಚಪ್ಪ ಬೋಬಾಟಿ, ಎಸ್. ಕೆ ಗೌಡಾ, ಮಲ್ಲಾರಿ ಘಾಡಿ, ಶಂಕರ ಕಾಜಗಾರ, ಅಶೋಕ್ ಮೇಟಿ,ನಾಗೇಂದ್ರ ಜಿವೋಜಿ, ಪ್ರಕಾಶ್ ಪಾಕ್ರೆ, ಸಂದೀಪ ಗೋಡಿಮಣಿ, ಮಂಜುಳಾ ಪಾಟೀಲ ಇನ್ನೂ ಹಲವಾರು ರೈತ ಮುಖಂಡರು, ಸಾವಿರಾರು ರೈತರು ಭಾಗವಹಿಸಿದ್ದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಿಗಿಬಂದೋಬಸ್ತ ಮಾಡಲಾಗಿತ್ತು.
ಹಳಿಯಾಳ
ವರದಿ : ಮಂಜುನಾಥ. ಹ. ಮಾದಾರ
07-10-2022
Leave a Comment