ಬೆಂಗಳೂರು : ವಿವಿಧ ಪ್ರಕರಣಗಳಲ್ಲಿ ಬಂದಿಗಳಾಗಿ ಸಜಾ ಅನುಭವಿಸುತ್ತಿರುವ ಕೈದಿಗಳ ದಿನಗೂಲಿ ಭತ್ಯೆಯಲ್ಲಿ ಭಾರಿ ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಈ ಹಿಂದೆ ನಾಲ್ಕು ಹಂತಗಳಲ್ಲಿ 175 ರೂಗಳಿಂದ 250ರೂಗಳವರೆಗೆ ಕೂಲಿ ನೀಡುತ್ತಿದ್ದ ಸರ್ಕಾರ, ಇನ್ನೂ ಮುಂದೆ 524/- ರೂಗಳಿಂದ 663/- ರೂಗಳವರೆಗೆ ಕೂಲಿದರ ನೀಡುವಂತೆ ಕಟ್ಟಪ್ಪಣೆ ಹೊರಡಿಸಿದೆ.
ಕಾರ್ಮಿಕ ಇಲಾಖೆ, ಕಾರಾಗ್ರಹ ಇಲಾಖೆ ಮತ್ತು ಆರ್ಥಿಕ ಇಲಾಖೆಯ ಸಮಿತಿ ಮಾಡಿರುವ ಶಿಫಾರಸ್ಸಿನ ಮೇರೆಗೆ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಪರಪ್ಪನ ಅಗ್ರಹಾರ ಸೇರಿದಂತೆ, ಮೈಸೂರು, ಬೆಳಗಾವಿ, ಧಾರವಾಡ, ವಿಜಯಪುರ, ಕಲಬುರಗಿ, ಬಳ್ಳಾರಿ ಮತ್ತು ಶಿವಮೊಗ್ಗ ಸಹಿತ ಎಂಟು ಕೇಂದ್ರ ಕಾರಾಗೃಹ ಮತ್ತು ಜಿಲ್ಲಾ ಕಾರಾಗೃಹಗಳು ಸೇರಿ ರಾಜ್ಯದಲ್ಲಿ ಒಟ್ಟು 52 ಜೈಲುಗಳಲ್ಲಿ 15 ಸಾವಿರಕ್ಕೂ ಅಧಿಕ ಕೈದಿಗಳಿದ್ದು, ಇದರಲ್ಲಿ ಸುಮಾರು 7 ಸಾವಿರ ಕೈದಿಗಳು ಸಜಾಬಂದಿಗಳಾಗಿದ್ದಾರೆ ಎಂದು ಕಾರಾಗೃಹ ಇಲಾಖೆಯ ಮೂಲಗಳು ತಿಳಿಸಿವೆ.
ಹೊರರಾಜ್ಯಗಳ ಬಂದಿಖಾನೆಗಳ ಕೈದಿ ಕಾರ್ಮಿಕರಿಗೆ ನೀಡುತ್ತಿರುವ ದಿನಗೂಲಿಗೆ ಹೋಲಿಸಿದರೆ, ರಾಜ್ಯದಲ್ಲಿಕಡಿಮೆ ಕೂಲಿ ನೀಡಲಾಗುತ್ತಿದ್ದು, ತನ್ನ ದಿನಗೂಲಿ ಭತ್ಯೆಯನ್ನು ಹೆಚ್ಚಿಸಬೇಕೆಂಬ ಕೂಗು ರಾಜ್ಯ ಬಂದಿಖಾನೆ ಕೈದಿಗಳಿಂದ ಆಗಾಗ್ಗೆ ಕೇಳಿಬರುತ್ತಿದ್ದ ಹಿನ್ನಲೆಯಲ್ಲಿ, ಕಾರ್ಮಿಕ ಇಲಾಖೆ, ಕಾರಾಗೃಹ ಇಲಾಖೆ ಮತ್ತು ಆರ್ಥಿಕ ಇಲಾಖೆ ಹೊರ ರಾಜ್ಯಗಳ ಕೈದಿಗಳ ಕೂಲಿ ಕಾರ್ಮಿಕ ದರವನ್ನು ಕೂಲಕಂಷವಾಗಿ ಅಧ್ಯಯನ ನಡೆಸಿಸರ್ಕಾರಕ್ಕೆ ವರದಿಸಲ್ಲಿಸಿತ್ತು.
ಈ ವರದಿಯನ್ನಾಧರಿಸಿ ಒಟ್ಟು ನಾಲ್ಕು ವಿಭಾಗಗಳಲ್ಲಿ ದಿನಗೂಲಿ ಭತ್ತೆಯನ್ನು ಹೆಚ್ಚು ಮಾಡಲಾಗಿದೆ ಎಂದು ಕಾರಾಗೃಹ ಇಲಾಖೆಯ ಮೂಲಗಳು ತಿಳಿಸಿವೆ.
Leave a Comment