ಬೆಂಗಳೂರು: ಪೊಲೀಸ್ ಕಾನ್ಸ್ಟೆಬಲ್ ಹುದ್ದೆಗಳಿಗೆ ನಿಗದಿಪಡಿಸಿರುವ ಗರಿಷ್ಠ ವಯೋಮಿತಿಯನ್ನು ಒಂದು ಬಾರಿಗೆ ಮಾತ್ರ ಎರಡು ವರ್ಷಗಳಿಗೆ ಹೆಚ್ಚಿಸಿ ಕರ್ನಾಟಕ ಸರಕಾರ ಆದೇಶ ಹೊರಡಿಸಿದೆ.
ಕೊವಿಡ್ನಿಂದಾಗಿ ನಿಯಮಿತವಾಗಿ ನೇಮಕಾತಿ ನಡೆಯದ ಪ್ರಯುಕ್ತ ಆಕಾಂಕ್ಷಿತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ ವಂಚಿತವಾಗಿರುವುದರಿಂದ ವಯೋಮಿತಿಯಲ್ಲಿ 2 ವರ್ಷಗಳ ವಿನಾಯಿತಿ ನೀಡುವಂತೆ ಹಲವಾರು ಮನವಿ ಸಲ್ಲಿಕೆಯಾಗಿತ್ತು.
ಹೀಗಾಗಿ 2022-23ನೇ ಸಾಲಿನಲ್ಲಿ ಕರೆದಿರುವ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳಿಗೆ ಎರಡು ವರ್ಷ ವಯೋಮಿತಿ ಹೆಚ್ಚಿಸಲಾಗಿದೆ. ಮತ್ತು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ಒಂದು ವಾರಗಳ ಕಾಲ ವಿಸ್ತರಿಸುವಂತೆ ಸೂಚನೆ ನೀಡಲಾಗಿದೆ.
ಗೃಹ ಸಚಿವಾಲಯ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ, ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗೆ ಸಾಮಾನ್ಯ ವರ್ಗಕ್ಕೆ ಗರಿಷ್ಠ ವಯೋಮಿತಿಯನ್ನು 25 ರಿಂದ 27 ವರ್ಷ ಹಾಗೂ ಎಸ್ ಸಿ ಹಾಗೂ ಹಿಂದುಳಿದ ವರ್ಗಗಳಿಗೆ 27ರಿಂದ 29 ವರ್ಷಳಿಗೆ ಹಾಗೂ ಬುಡಕಟ್ಟು ಜನಾಂಗದ ಅಭ್ಯರ್ಥಿಗಳಿಗೆ 32 ವರ್ಷಗಳಿಗೆ ಹೆಚ್ಚಿಸಲಾಗಿದೆ. ಸೇವಾ ನಿರತ ಅಭ್ಯರ್ಥಿಗಳ ವಯೋಮಿತಿಯಲ್ಲಿ ಎಸ್ಸಿ, ಎಸ್ಟಿ ಅಭ್ಯರ್ಥಿಗಳ ವಯಸ್ಸಿಗೆ 35 ಹಾಗೂ ಇತರೆ ಅಭ್ಯರ್ಥಿಗಳಿಗೆ 33 ವರ್ಷಗಳಿಗೆ ಹೆಚ್ಚಿಸಲಾಗಿದೆ.
ಸಶಸ್ತ್ರ ಪಡೆಯ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳಿಗೆ ಶೇ. 10 ರಷ್ಟು ಮೀಸಲಾತಿಯನ್ನು ಕಲ್ಪಿಸಿ ಗರಿಷ್ಠ ವಯೋಮಿತಿಯನ್ನು ಸಾಮಾನ್ಯ ವರ್ಗಕ್ಕೆ 31 ವರ್ಷ ಹಾಗೂ ಎಸ್ಸಿ, ಎಸ್ಟಿ ಹಾಗೂ ಇತರ ಹಿಂದುಳಿದ ವರ್ಗಗಳಿಗೆ 33 ವರ್ಷ ನಿಗದಿ ಮಾಡಲಾಗಿದೆ.
Leave a Comment