ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಕಾರ್ಯಾಲಯದಲ್ಲಿ ಹುತಾತ್ಮರ ದಿನಾಚರಣೆ ಒಡೆದ ಮನಸ್ಸುಗಳನ್ನು ಬೆಸೆಯುವಲ್ಲಿ ರಾಹುಲ್ ನೇತ್ರತ್ವದ ಭಾರತ್ ಜೋಡೋ ಯಶಸ್ವಿ -ಜಗದೀಪ್ ಎನ್ ತೆಂಗೇರಿ
ಹೊನ್ನಾವರ : ಕಳೆದ ಎಂಟು ವರ್ಷಗಳ ಹಿಂದೆ ಕೇಂದ್ರದಲ್ಲಿ ಅಧಿಕಾರಕ್ಕೆ ಏರಿದ ಮೋದಿ ಸರಕಾರ ದೇಶದಲ್ಲಿ ಜಾತಿ, ಧರ್ಮಗಳ ನಡುವೆ ಕಂದಕ ಸೃಷ್ಠಿಸಿ, ಪರಸ್ಪರರಲ್ಲಿ ಜಾತಿಯ ವಿಷಬೀಜ ಬಿತ್ತುತ್ತಿದ್ದರೇ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತ್ರತ್ವದ ಭಾರತ್ ಜೋಡೋ ಪಾದಯಾತ್ರೆ ದೇಶದಲ್ಲಿ ಒಡೆದ ಮನಸ್ಸುಗಳನ್ನು ಪುನಃ ಬೆಸೆಯುವಲ್ಲಿ ಯಶಸ್ವಿಯಾಗಿದೆ ಎಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ್ ಎನ್ ತೆಂಗೇರಿ ಹೇಳಿದರು.
ಅವರು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಸಮಿತಿ, ಪಕ್ಷದ ಕಾರ್ಯಾಲಯದಲ್ಲಿ ಏರ್ಪಡಿಸಿದ ಹುತಾತ್ಮರ ದಿನಾಚರಣೆಯ ಸಭೆಯಲ್ಲಿ ಮನವತಾವಾದಿ, ಶಾಂತಿದೂತ ಮಹಾತ್ಮಾ ಗಾಂಧಿಯವರ ಬಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ನಂತರ, ನೆರೆದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ರಾಹುಲ್ ಗಾಂಧಿ ನೇತ್ರತ್ವದ ಭಾರತ್ ಜೋಡೋ ಕಾರ್ಯಕ್ರಮದ ಮೊದಲನೇ ಹಂತದ ಕೊನೆಯ ದಿನವಾದ ಇಂದು ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ನಡೆಯುತ್ತಿರುವ ಕಾರ್ಯಕ್ರಮವನ್ನು ಸ್ಮರಿಸುತ್ತಾ, ರಾಹುಲ್ ಗಾಂಧಿಯವರು ಮಳೆ,ಗಾಳಿ,ಚಳಿ ಯಾವುದನ್ನು ಲೆಕ್ಕಿಸದೇ, ಪ್ರಾಣದ ಹಂಗನ್ನು ತೊರೆದು ಕಳೆದ ಸೆಪ್ಟೆಂಬರ್ 7ರಿಂದ ತಮಿಳುನಾಡಿನ ಪೆರಂಬದೂರಿನಿಂದ ಆರಂಭಿಸಿದ ಪಾದಯಾತ್ರೆ ಸತತ ಐದು ತಿಂಗಳು ನಢೆದಿದ್ದು, ಇದು ರಾಹುಲ್ ಗಾಂಧಿಯವರ ಬದ್ಧತೆಗೆ ಹಿಡಿದ ಕೈಗನ್ನಡಿಯಾಗಿದೆ.
ದೇಶದ ಐಕ್ಯತೆ, ಸಮಗ್ರತೆ ಮತ್ತು ಪರಸ್ಪರರಲ್ಲಿ ಪ್ರೀತಿ, ವಿಶ್ವಾಸ ಮೂಡಿಸಿ, ದ್ವೇಷದ ಬಾವನೆಯನ್ನು ಕೊನೆಗಾಣಿಸಲು, ದೇಶದ ಹನ್ನೆರಡು ರಾಜ್ಯಗಳಾದ ತಮಿಳುನಾಡು, ಕೇರಳ,ಕರ್ನಾಟಕ, ಆಂದ್ರಪ್ರದೇಶ, ಮಹಾರಾಷ್ಟ್ರ ಮಧ್ಯಪ್ರದೇಶ, ಹರಿಯಾಣ, ರಾಜಸ್ಥಾನ, ಉತ್ತರ ಪ್ರದೇಶ, ದೆಹಲಿ ಮೂಲಕ ಕಾಶ್ಮೀರ ರಾಜ್ಯವನ್ನು ತಲುಪಿ, ಸುಮಾರು 3,570 ಕಿ.ಮೀ. ಕಾಲ್ನಡಿಗೆಯಲ್ಲಿ ಕ್ರಮಿಸಿದ ಶ್ರೇಯಸ್ಸು ರಾಹುಲ್ ಗಾಂಧಿಯವರಿಗೆ ಸಲ್ಲುತ್ತದೆ ಎಂದರು.
ಮುಂಜಾನೆ 10ಗಂಟೆಗೆ ಶ್ರೀನಗರದ ಕಾಂಗ್ರೆಸ್ ಭವನದಲ್ಲಿ ರಾಷೃಧ್ವಜಾರೋಹಣ ಮಾಡುವ ಮೂಲಕ ಮೊದಲನೇ ಹಂತದ ಪಾದಯಾತ್ರೆ ಮುಗಿಸುವ ರಾಹುಲ್ ಗಾಂಧಿಯವರಿಗೆ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಪರವಾಗಿ ಜಗದೀಪ್ ಎನ್ ತೆಂಗೇರಿ ಅಭಿನಂದನೆ ಸಲ್ಲಿಸಿದರು.
ಜಿಲ್ಲಾ ಕಾಂಗ್ರೆಸ್ ಕಿಸಾನ್ ವಿಭಾಗದ ಅಧ್ಯಕ್ಷ ಶಿವಾನಂದ ಹೆಗಡೆ,ಕಡ್ತೋಕಾ ಮಾತನಾಡುತ್ತಾ ದೇಶದ ಪ್ರಧಾನಿ ನರೇಂದ್ರ ಮೋದಿ ಯುವಕರಲ್ಲಿ ಅನೇಕ ಬರವಸೆಗಳನ್ನು ಬಿತ್ತಿ ಅಧಿಕಾರಕ್ಕೆ ಬಂದರು.ಆದರೆ ಬರವಸೆಗಳು ಬರವಸೆಯಾಗಿಯೇ ಉಳಿಯಿತು ಬಿಟ್ಟರೆ ಇದುವರೆಗೂ ಒಂದನ್ನು ಈಡೇರಿಸಿಲ್ಲಾ.ಯುವಕರಿಗೆ ಪ್ರತಿ ವರುಷ 2ಕೋಟಿ ಉದ್ಯೋಗ ನೀಡುವ ಬರವಸೆ ನೀಡಿದ್ದರು.
ಆದರೆ ಯಾವುದನ್ನು ಈಡೇರಿಸದೆ ಸರಕಾರಿ ಸ್ವಾಮ್ಯದ ಎಲ್ಲಾ ಉದ್ಯಮಗಳನ್ನು ಖಾಸಗಿಯವರಿಗೆ ಮಾರುತ್ತಿರುವುದನ್ನು ಕಂಡರೆ ಮುಂದೊಂದು ದಿನ ದೇಶವನ್ನು ಮಾರುವುದರಲ್ಲಿ ಸಂಶಯವಿಲ್ಲಾ ಎಂದು ವ್ಯಂಗ್ಯವಾಡಿದರು. ರಾಹುಲ್ ಗಾಂಧಿಯವರ ಭಾರತ ಜೋಡೋ ಯಶಸ್ಸು ದೇಶದ ಯುವಕರಿಗೆ ಸಲ್ಲುತ್ತದೆ ಎಂದರು.
ಹಿರಿಯ ಕಾಂಗ್ರೆಸ್ ಮುಖಂಡ ಡಾ.ವಿಷ್ಣು ಸಭಾಹಿತ್ ಮಾತನಾಡುತ್ತಾ ಸಾವಿರಾರು ಕೋಟಿ ರೂಪಾಯಿ ವೈಭವಯುತವಾದ ವಿಮಾನದಲ್ಲಿ ಪ್ರಪಂಚ ಪರ್ಯಟನೆ ಮಾಡುತ್ತಾ, ಮೈ ಮೇಲೆ ಕೋಟ್ಯಾಂತರ ರೂಪಾಯಿ ಬಟ್ಟೆಗಳನ್ನು ಧರಿಸುವ ಪ್ರಧಾನಿಯಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ ಎಂದು ಅಣಕಿಸಿದರು.
ಕೇವಲ ಸುಳ್ಳು ಬರವಸೆಗಳನ್ನು ನೀಡಿ, ಜನರ ಬಾವನೆಗಳನ್ನು ಕೆರಳಿಸಿ ಮತ ಪಡೆಯುವುದೊಂದೆ ಇವರ ಕುತಂತ್ರವಾಗಿದೆ ಎಂದರು. ತನ್ನ ತಂದೆ ರಾಜೀವ ಗಾಂಧಿ ಮತ್ತು ಅಜ್ಜಿ ಇಂದೀರಾ ಗಾಂಧಿ ತನ್ನ ಕಣ್ಣೆದುರೇ ಹಂತಕರ ಕುಕೃತ್ಯಕ್ಕೆ ಬಲಿಯಾಗಿದ್ದರು, ಅದನ್ನು ಲೆಕ್ಕಿಸದೇ ದೇಶದ ಒಳಿತಿಗಾಗಿ ಬಾರತ್ ಜೋಡೋ ಪಾದಯಾತ್ರೆಯನ್ನು ಯಶಸ್ವಿಯಾಗಿ ಪೂರೈಸಿದ ರಾಹುಲ್ ಗಾಂಧಿಯವರ ದಿಟ್ಟತನವನ್ನು ಡಾ.ಸಭಾಹಿತ್ ಕೊಂಡಾಡಿದರು.
ಸಭೆಯಲ್ಲಿ ಕೆ.ಪಿ.ಸಿ.ಸಿ.ಸದಸ್ಯ ಎಮ್.ಎನ್.ಸುಬ್ರಮಣ್ಯ, ಜಿಲ್ಲಾ ರಾಜೀವ ಗಾಂಧಿ ಗ್ರಾಮೀಣಾಭಿವೃಧ್ಧಿ ಸಂಘಟನೆಯ ಅಧ್ಯಕ್ಷ ವಿನೋದ ನಾಯ್ಕ, ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಕೃಷ್ಣ ಹರಿಜನ, ಸೇವಾದಳದ ಅಧ್ಯಕ್ಷ ಮೋಹನ್ ಆಚಾರಿ, ಅಲ್ಪಸಂಖ್ಯಾತ ಅಧ್ಯಕ್ಷ ಜಕ್ರಿಯ್ಯಾ ಶೇಖ, ಇಂಟೆಕ್ ಅಧ್ಯಕ್ಷ ಆಗ್ನೇಲ್ ಡಯಾಸ್, ಜಿಲ್ಲಾ ಇಂಟೆಕ್ ಪ್ರಧಾನ ಕಾರ್ಯದರ್ಶಿ ಕೇಶವ ಮೇಸ್ತ, ನಗರ ಘಟಕದ ಅಧ್ಯಕ್ಷ ಚಂದ್ರಶೇಖರ ಚಾರೋಡಿ, ಜಿಲ್ಲಾ ಸೇವಾದಳದ ಪ್ರಧಾನ ಕಾರ್ಯದರ್ಶಿ ಕೃಷ್ಣ ಮಾರಿಮನೆ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಾಮೋದರ ನಾಯ್ಕ, ಪಕ್ಷದ ಪ್ರಮುಖ ಮುಖಂಡರಾದ ಮಂಜುನಾಥ ಮುಕ್ರಿ, ಮನ್ಸೂರ್ ಶೇಖ, ಶಂಕರ ಮೇಸ್ತ, ಬ್ರಾಝಿಲ್ ಪಿಂಟೊ, ಮಂಜು ಖಾರ್ವಿ, ಪಾತ್ರೊನ್ ಪರ್ನಾಂಡಿಸ್, ಹನೀಪ್ ಶೇಖ ಇನ್ನೂ ಹಲವಾರು ಮುಖಂಡರು ಪಾಲ್ಗೋಂಡಿದ್ದರು.
Leave a Comment