ಕಡಲ ಒಡಲು ಶುಚಿಯಾಗಿರಿಸಿ – ಕಮಾಂಡರ್ ದೀಪಕ್ ಮಿಶ್ರಾ
ಹೊನ್ನಾವರ: ಪರಿಸರ ಸಂರಕ್ಷಣೆಗಾಗಿ ಹುಟ್ಟಿಕೊಂಡಿರುವ ಹೊನ್ನಾವರ ಫೌಂಡೇಶನ್ ನಿಂದ ಆರಂಭವಾಗಿರುವ ‘ಸಮುದ್ರಕ್ಕಾಗಿ ಶನಿವಾರ’ ಎಂಬ ಆಲೋಚನೆ ಉತ್ತಮವಾಗಿದೆ. ಕಡಲ ಒಡಲನ್ನು ಶುಚಿಯಾಗಿಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಭಾರತೀಯ ನೌಕಾಪಡೆಯ ಅಧಿಕಾರಿ ಕಮಾಂಡರ್ ದೀಪಕ್ ಮಿಶ್ರಾ ಹೇಳಿದರು.
ಅವರು ತಾಲೂಕಿನ ಕಾಸರಕೋಡ ಟೊಂಕಾದ ಕಡಲತೀರದಲ್ಲಿ ಹೊನ್ನಾವರ ಫೌಂಡೇಶನ್ ಆಯೋಜಿಸಿದ್ದ ‘ಸಮುದ್ರಕ್ಕಾಗಿ ಶನಿವಾರ’ ಎಂಬ ವಿನೂತನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸಾಗರ ಜೀವಶಾಸ್ತ್ರಜ್ಞರಾದ ಪ್ರಕಾಶ್ ಮೇಸ್ತ ವಿಶೇಷ ಉಪನ್ಯಾಸ ನೀಡಿ, ಪ್ರವಾಸೋದ್ಯಮ ಅಭಿವೃದ್ಧಿಯಾದಂತೆ ಕಡಲ ಒಡಲು ಸೇರುವ ಪ್ಲಾಸ್ಟಿಕ್ ಪ್ರಮಾಣ ದಿನೇದಿನೇ ಹೆಚ್ಚುತ್ತಿದೆ. ಇದರಿಂದ ಜಲಚರಗಳಿಗೆ ವಿಪರೀತ ತೊಂದರೆಯಾಗುತ್ತಿದೆ. ಇದಕ್ಕೆ ಆದಷ್ಟು ಬೇಗ ಕಡಿವಾಣ ಹಾಕಬೇಕು. ಪರಿಸರ ವಿರೋಧಿ ಚಟುವಟಿಕೆಗಳನ್ನು ಸರಕಾರ ತಡೆಯಬೇಕು ಎಂದರು.
ಕರಾವಳಿ ಕಾವಲು ಪಡೆಯ ಪೊಲೀಸ್ ನಿರೀಕ್ಷಕರಾದ ವಿಠ್ಠಲ್ ವಡವಾನಿ ಮಾತನಾಡಿ, ಪ್ಲಾಸ್ಟಿಕ್ ಗೆ ಪರ್ಯಾಯ ವಸ್ತುಗಳನ್ನು ಬಳಸಬೇಕು. ಹೊನ್ನಾವರ ಫೌಂಡೇಶನ್ ಕನಸಿಗೆ ಹೊನ್ನಾವರದ ನಾಗರಿಕರು ಮುಕ್ತವಾಗಿ ಕೈಜೋಡಿಸಬೇಕು ಎಂದರು.
ಕಡಲ ಒಡಲು ಶುಚಿಯಾಗಿರಿಸಿ – ಕಮಾಂಡರ್ ದೀಪಕ್ ಮಿಶ್ರಾ

ವೇದಿಕೆಯಲ್ಲಿ ರಾಜೇಶ್ ತಾಂಡೇಲ್, ಭಾಸ್ಕರ್ ತಾಂಡೇಲ್, ಜಗದೀಶ್ ತಾಂಡೇಲ್, ರೇಣುಕಾ ತಾಂಡೇಲ್ ಉಪಸ್ಥಿತರಿದ್ದರು.
ಹೊನ್ನಾವರ ಫೌಂಡೇಶನ್ ಸಂಸ್ಥಾಪಕರಾದ ಸಂದೀಪ್ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಪ್ರೊ. ಪ್ರಶಾಂತ ಮೂಡಲಮನೆ ನಿರೂಪಿಸಿದರು.
ಸಭಾ ಕಾರ್ಯಕ್ರಮದ ನಂತರ ಟೊಂಕಾ ನಾಗರಿಕರು, ಪ್ರವಾಸಿಗರು ಮತ್ತು ಹೊನ್ನಾವರ ಫೌಂಡೇಶನ್ ಸದಸ್ಯರು ಕಡಲತೀರದಲ್ಲಿನ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸಿ ಕಡಲತೀರವನ್ನು ಶುಚಿಗೊಳಿಸಿದರು

Leave a Comment