ಕುಮಟಾ: ತಾಲೂಕಿನ ದೇವಗಿರಿಯ ಹೊರಭಾಗದಲ್ಲಿ ನಡೆಯುತ್ತಿರುವ ಅನಧಿಕೃತ ಸಿಗಡಿ ಕೃಷಿಯನ್ನು ಸ್ಥಗಿತಗೊಳಿಸುವಂತೆ ಆಗ್ರಹಿಸಿ ಸ್ಥಳೀಯ ಮೀನುಗಾರರು ಉಪವಿಭಾಗಾಧಿಕಾರಿಗಳ ಮೂಲಕ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿದರು. ತಾಲೂಕಿನ ದೇವಗಿರಿ ಗ್ರಾಪಂ ಜನಪ್ರತಿನಿಧಿಗಳ ನೇತೃತ್ವದಲ್ಲಿ ಹೊರಭಾಗದ ಹರಿಕಾಂತ ಸಮಾಜದ ಮೀನುಗಾರರು ಉಪವಿಭಾಗಾಧಿಕಾರಿಗಳ ಕಚೇರಿಗೆ ತೆರಳಿ, ಅನಧಿಕೃತ ಸಿಗಡಿ ಕೃಷಿಯಿಂದಾಗುವ ಸಮಸ್ಯೆಗಳ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು.
ದೇವಗಿರಿಯ ಹೊರಭಾಗದಲ್ಲಿ ಸಿಗಡಿ ಕೃಷಿ ಮಾಡುತ್ತಿರುವ ಖಾಸಗಿ ಕಂಪನಿಯು ಪಂಚಾಯತ್ ವಿಧಿಸಿದ ಶರತ್ತುಗಳನ್ನು ಉಲ್ಲಂಘಿಸಿ ಅನಧಿಕೃತವಾಗಿ ಸಿಗಡಿ ಕೃಷಿ ಮಾಡುತ್ತಿದೆ. ಇದರಿಂದ ಸ್ಥಳೀಯ ಮೀನುಗಾರರು ಸಾಂಪ್ರದಾಯಿಕ ಮೀನುಗಾರಿಕೆಗೂ ತೊಂದರೆಯಾಗಿದೆ. ಸಮುದ್ರ ದಡದಲ್ಲಿದ್ದ ಮರಳು ದಿಬ್ಬಗಳನ್ನು ಸಿಆರ್ಝಡ್ ಕಾನೂನು ಉಲ್ಲಂಘಿಸಿ ಸಮತಟ್ಟುಗೊಳಿಸಿದ್ದರಿಂದ ಮಳೆಗಾಲದಲ್ಲಿ ಸಮುದ್ರದ ನೀರು ಸ್ಥಳೀಯ ಜನವಸತಿ ಪ್ರದೇಶಗಳಿಗೆ ನುಗ್ಗಿ ತೊಂದರೆ ಉಂಟಾಗುವ ಆತಂಕ ಎದುರಾಗಿದೆ. ಸಿಗಡಿ ಕೃಷಿಯ ತ್ಯಾಜ್ಯ ನೀರನ್ನು ಶುದ್ದೀಕರಿಸದೇ ಬಿಡುವುದರಿಂದ ದುರ್ವಾಸನೆಗೆ ಕಾರಣವಾಗುವ ಜೊತೆಗೆ ಸ್ಥಳೀಯ ಆರೋಗ್ಯಕರ ವಾತಾವರಣೆ ಹಾಳಾಗುವ ಸಾಧ್ಯತೆ ಅಧಿಕವಾಗಿದೆ. ಅಲ್ಲದೇ ಸ್ಥಳೀಯ ನೀರಿನ ಮೂಲಗಳು ಕೂಡ ಉಪ್ಪಾಗುವ ಆತಂಕ ಎದುರಾಗಿದ್ದು, ಕೃಷಿಗೂ ಮಾರಕವಾಗಲಿದೆ. ಹಾಗಾಗಿ ಅನಧಿಕೃತ ಸಿಗಡಿ
ಕೃಷಿಯನ್ನು ಸ್ಥಗಿತಗೊಳಿಸುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ. ಮನವಿಯನ್ನು ಎಸಿ ಕಚೇರಿಯ ಶಿರಸ್ತೆದಾರ್ ವಸಂತ ಶಾನಭಾಗ ಅವರ ಮೂಲಕ ಜಿಲ್ಲಾಧಿಕಾರಿಯವರಿಗೆ ಮನವಿ ರವಾನಿಸಲಾಯಿತು.
ಈ ಮನವಿ ಸಲ್ಲಿಕೆಯಲ್ಲಿ ಹೊರಭಾಗ ಹರಿಕಾಂತ ಸಮಾಜದ ಅಧ್ಯಕ್ಷ ರಾಮಚಂದ್ರ ಶೇರುಗಾರ, ಗ್ರಾಪಂ ಸದಸ್ಯರಾದ ರತ್ನಾ ಹರಿಕಾಂತ, ಪಾಂಡುರಂಗ ಪಟಗಾರ, ಮೀನುಗಾರ ಪ್ರಮುಖರಾದ ಸುರೇಶ ಹರಿಕಾಂತ, ಮಾದೇವ ಹರಿಕಾಂತ, ಚಂದ್ರಹಾಸ್ ಹರಿಕಾಂತ, ಹೊನ್ನಪ್ಪ ಹರಿಕಾಂತ, ರಾಜೇಶ್ವರಿ ಹರಿಕಾಂತ, ಶ್ರೀಧರ ಹರಿಕಾಂತ, ಶಿವಾನಂದ ಹರಿಕಾಂತ, ಉಮಾ ಹರಿಕಾಂತ, ದೇವಕಿ ಹರಿಕಾಂತ, ಪುಷ್ಪಾ ಹರಿಕಾಂತ, ಶಂಕರ ಹರಿಕಾಂತ ಸೇರಿದಂತೆ ಆ ಭಾಗದ ಮೀನುಗಾರರು ಇದ್ದರು.
Leave a Comment