ಹೊನ್ನಾವರ:
ಇಲ್ಲಿಯ ಎಂಪಿಇ ಸೊಸೈಟಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜಿಗೆ ನ್ಯಾಕ್ ಸಮಿತಿ ‘ಎ’ ಗ್ರೇಡ್ ಮಾನ್ಯತೆ ನೀಡಿದೆ.
ಸತತ ಮೂರನೇ ಬಾರಿಗೆ ಕಾಲೇಜು ‘ಎ’ ಗ್ರೇಡ್ ಮಾನ್ಯತೆ ಪಡೆದಿದ್ದು ಈ ಕುರಿತಂತೆ ಕಾಲೇಜಿನ ಪ್ರಾಚಾರ್ಯ ಪ್ರೊ.ಎಸ್.ಎಸ್.ಹೆಗಡೆ ಕಾಲೇಜಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದರು.
‘ವಿವಿಧ ಮೂಲಭೂತ ಸೌಕರ್ಯಗಳು ಸೇರಿದಂತೆ ಕಾಲೇಜಿನ ಶೈಕ್ಷಣಿಕ ಸಾಮಥ್ರ್ಯಕ್ಕೆ ಸಂಬಂಧಿಸಿದ ಒಟ್ಟೂ 7 ವಿಭಾಗಗಳನ್ನು ಕೂಲಂಕುಶವಾಗಿ ಪರಿಶೀಲಿಸಿದ ನ್ಯಾಕ್ ಸಮಿತಿ ಉತ್ತಮ ಅಂಕದೊಂದಿಗೆ ಕಾಲೇಜಿಗೆ “ಎ’ ಗ್ರೇಡ್ ಕಾಲೇಜು ಎಂಬ ಮಾನ್ಯತೆ ನೀಡಿದೆ.ಸತತ ಮೂರನೆ ಬಾರಿಗೆ ‘ಎ’ ಗ್ರೇಡ್ ಮಾನ್ಯತೆ ಪಡೆದು ಕಾಲೇಜು ಈ ಸಾಧನೆಗೈದ ಜಿಲ್ಲೆಯ ಪ್ರಥಮ ಕಾಲೇಜು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಮುಂದಿನ 5 ವರ್ಷಗಳ ವರೆಗೆ ಈ ‘ಎ’ ಗ್ರೇಡ್ ಮಾನ್ಯತೆಯ ಅವಧಿ ಇರಲಿದ್ದು ನಂತರ ಕಾಲೇಜು ಮತ್ತೆ ಮರುಮೌಲ್ಯಾಂಕನ ಪ್ರಕ್ರಿಯೆಗೆ ಒಳಗಾಗಲಿದೆ.ಕಾಲೇಜಿನ ಶೈಕ್ಷಣಿಕ ಗುಣಮಟ್ಟದ ಇನ್ನಷ್ಟು ಸುಧಾರಣೆಗೆ ನ್ಯಾಕ್ ಸಮಿತಿ ನೀಡಿದ ಸಲಹೆ-ಸೂಚನೆಗಳನ್ನು ಕಾರ್ಯರೂಪಕ್ಕೆ ತರಲು ಎಲ್ಲ ಪ್ರಯತ್ನ ಕೈಗೊಳ್ಳಲಾಗುವುದು.
ಕಾಲೇಜು ‘ಎ’ ಮಾನ್ಯತೆ ಪಡೆಯುವಲ್ಲಿ ಆಡಳಿತ ಮಂಡಳಿ,ಪಾಲಕರು,ಕಾಲೇಜಿನ ಪೂರ್ವ ವಿದ್ಯಾರ್ಥಿಗಳು,ಹಾಲಿ ವಿದ್ಯಾರ್ಥಿಗಳು,ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಗಳು ಎಲ್ಲರ ಸಹಕಾರ ಗಮನಾರ್ಹವಾಗಿದೆ’ ಎಂದು ಅವರು ಹೇಳಿದರು.
ಕಾಲೇಜಿನಲ್ಲಿ ಬರುವ ಶೈಕ್ಷಣಿಕ ವರ್ಷದಲ್ಲಿ ಬಿಸಿಎ ಹಾಗೂ ಫ್ಯಾಶನ್ ಡಿಸೈನಿಂಗ್ ಕೋರ್ಸಗಳನ್ನು ಆರಂಭಿಸಲಾಗುವುದು’ ಎಂದು ಅವರು ತಿಳಿಸಿದರು.
ನ್ಯಾಕ್ ಕೋಆರ್ಡಿನೇಟರ್ ಡಾ.ವಿ.ಎಂ.ಭಂಡಾರಿ,ವಿವಿಧ ವಿಭಾಗಗಳ ಮುಖ್ಯಸ್ಥರಾದ ಡಾ.ವಿಜಯಲಕ್ಷ್ಮೀ ನಾಯ್ಕ,ಪ್ರೊ.ಪಿ.ಡಿ.ನಾಯ್ಕ,ಪ್ರೊ.ಎಂ.ಜಿ.ಹೆಗಡೆ,ಪ್ರೊ.ಸುರೇಶ ಎಸ್. ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
Shiv says
nice