ಹೊನ್ನಾವರ:
ಹೊನ್ನಾವರ ಎ. 06 : ವಿಭೂತಿ ಪುರುಷರೆಂದು ದೇಶದಲ್ಲಿ ಪ್ರಸಿದ್ಧಿಗಳಿಸಿದ್ದ ಶ್ರೀ ಶ್ರೀಧರ ಸ್ವಾಮಿಗಳ ಪ್ರವಚನಗಳ ಶ್ರೀಧರ ವಚನಾಮೃತ ಧಾರೆಯ 14, 15ನೇ ಕೊನೆಯ ಕಂತು ದಿನಾಂಕ 13ರಂದು ಗುರುವಾರ ರಾಮತೀರ್ಥದ ಶ್ರೀಧರ ಪಾದುಕಾ ಮಂದಿರದಲ್ಲಿ ಲೋಕಾರ್ಪಣೆಯಾಗಲಿದ್ದು, ಶ್ರೀಧರರ ಆರಾಧನಾ ಮಹೋತ್ಸವ ಅಂದು ನಡೆಯಲಿದೆ.
ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ದೇಗಲೂರಿನಲ್ಲಿ 7-12-1908ರಲ್ಲಿ ಜನಿಸಿದ ಶ್ರೀಧರರು ಆಧ್ಯಾತ್ಮದ ಒಲವಿನಿಂದ ಸಮರ್ಥ ರಾಮದಾಸರ ಸಮಾಧಿಗೆ ಸೇವೆ ಸಲ್ಲಿಸಲು ಆರಂಭಿಸಿದರು. ಅಲ್ಲಿಂದ ಪ್ರೇರಿತರಾಗಿ ಉತ್ತರ ಕನ್ನಡದ ಸಿರ್ಸಿ ಸೀಗೆಹಳ್ಳಿಗೆ ಬಂದು ಸನ್ಯಾಸ ಸ್ವೀಕರಿಸಿ, ಆಸೇತು ಹಿಮಾಚಲ ಸಂಚರಿಸಿ, ಆಧ್ಯಾತ್ಮ ಸಂದೇಶ ನೀಡಿದರು. ತಮ್ಮ ಕೊನೆಯ ದಿನಗಳಲ್ಲಿ ಸಾಗರದ ವರದಹಳ್ಳಿಗೆ ಬಂದು ನೆಲೆಸಿದ್ದರು. 19-04-1973ರಂದು ಇಹಲೋಕ ತ್ಯಜಿಸಿದರು.
1955ರಲ್ಲಿ ಅವರ ಶಿಷ್ಯೆಯಾಗಿ ಸೇವೆಗೆ ತೊಡಗಿಕೊಂಡ ಸಿದ್ಧಾಪುರದ ಜಾನಕಮ್ಮ ಮತ್ತು 1960ರಲ್ಲಿ ಶ್ರೀಧರರ ಆಪ್ತ ಶಿಷ್ಯರಾಗಿ ಸೇವೆಗೆ ತೊಡಗಿಕೊಂಡ ಹೊನ್ನಾವರ ಸಾಲ್ಕೋಡಿನ ಜನಾರ್ಧನ ಭಟ್ ಶ್ರೀಧರರ ಜೀವಿತದ ಕೊನೆಯವರೆಗೂ ಅವರ ಸೇವೆಯಲ್ಲಿದ್ದರು. ನಂತರ ಹೊನ್ನಾವರ ರಾಮತೀರ್ಥಕ್ಕೆ ಬಂದು ಅಲ್ಲಿ ಅರ್ಚಕರಾಗಿದ್ದ ಸುಬ್ಬಾ ಭಟ್ಟರ ನೆರವಿನಿಂದ ಶ್ರೀಧರರು ಹಿಂದೆ ಉಳಿದುಕೊಂಡಿದ್ದ ಕುಟೀರದಲ್ಲಿ ಉಳಿದುಕೊಂಡರು. ಶ್ರೀಧರರ ಪಾದುಕೆಯನ್ನಿಟ್ಟು ನಿರಂತರ ಅಭಿಷೇಕ, ಪೂಜೆ ಮಾಡುತ್ತಾ ತಮ್ಮಷ್ಟಕ್ಕೆ ಉಳಿದುಕೊಂಡರು. ಈ ಅವಧಿಯಲ್ಲಿ ಅವರು ಶ್ರೀಧರರ ಚಿಂತನೆಗಳು ಶಾಶ್ವತವಾಗಿ ಉಳಿಯುವಂತೆ ಪುಸ್ತಕ ರೂಪದಲ್ಲಿ ಪ್ರಕಟಿಸುವ ಮಹತ್ಕಾರ್ಯ ಮಾಡಿದ್ದು, ಕೊನೆಯ ಕೃತಿಗಳು 13ರಂದು ಲೋಕಾರ್ಪಣೆಯಾಗಲಿವೆ. 18ವರ್ಷಗಳಲ್ಲಿ ಧ್ವನಿ ರೂಪದಲ್ಲಿದ್ದ ಶ್ರೀಧರರ ಪ್ರವಚನಗಳನ್ನು ಕೃತಿ ರೂಪದಲ್ಲಿ ತಂದ ಮಹಾಮಹೋಪಾಧ್ಯಾಯ ಶ್ರೀ ಸೋ.ತಿ. ನಾಗರಾಜ ಮತ್ತು ಅವರಿಗೆ ಸಹಕರಿಸಿದ ವೆಂಕಟ್ರಮಣ ಟಿ. ಭಟ್ಟ ಮತ್ತು ವೆಂಕಟ್ರಮಣ ಡಿ. ಭಟ್ಟ, ಮುದ್ರಿಸಿದ ಬಿ.ಎನ್. ನಟರಾಜ ಇವರ ಶ್ರಮ, ದಾನಿಗಳ ಕೊಡುಗೆ, ಜನಾರ್ಧನ ಮತ್ತು ಜಾನಕಮ್ಮ ಇವರ ತ್ಯಾಗದಿಂದಾಗಿ ಶ್ರೀಧರ ವಾಙ್ಮಯ ಶಾಶ್ವತವಾಗಿ ಉಳಿಯುವಂತಾಗಿದೆ
Leave a Comment