ಹೊನ್ನಾವರ:
ಕುಟುಂಬವನ್ನು ಸರಿದೂಗಿಸುವ ಮಹಿಳೆಗೆ ಯಾವುದೇ ಸಮಸ್ಯೆಯನ್ನು ಎದುರಿಸುವ ಮನೋ ಶಕ್ತಿ ಇರುತ್ತದೆ. ಆದ್ದರಿಂದ ಸಮಾಜದ ಮುಖ್ಯ ವಾಹಿನಿಗೆ ಬರಲು ಮಹಿಳೆಗೆ ಕೀಳಿರಿಮೆ ಇರಬಾರದು ಎಂದು ನಿವೃತ್ತ ಮುಖ್ಯ ಶಿಕ್ಷಕಿ ಗಿರಿಜಾ ನಾಯ್ಕ ಅಭಿಪ್ರಾಯಪಟ್ಟರು.
ಅವರು ಮುಗ್ವಾ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಾರ್ಷಿಕೋತ್ಸವ ಮತ್ತು ವಿವಿಧ ಮಹಿಳಾ ಸಂಘಟನೆಗಳು ಹಾಗೂ ಊರ ನಾಗರಿಕರು ಮಹಿಳೆ ದಿನಾಚರಣೆಯ ಅಂಗವಾಗಿ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಸನ್ಮಾನಿತರಾಗಿ ಮಾತನಾಡುತ್ತಿದ್ದರು.
ನಾಲ್ಕೈದು ದಶಕಗಳ ಹಿಂದಿನ ದುಡಿಯುವ ಮಹಿಳೆಯ ಮನೋಸ್ಥಿತಿಗೂ ಮತ್ತು ಇಂದಿನ ದುಡಿಯುವ ಮಹಿಳೆಯ ಮನೋಸ್ಥಿತಿಯನ್ನು ವಿಶ್ಲೇಷಿಸಿದ ಅವರು ಮಹಿಳಾ ಪರ ಇರುವ ಅವಕಾಶಗಳನ್ನು ಕಾನೂನುಗಳನ್ನು ಬಳಸಿಕೊಂಡು ನಮ್ಮ ನಾಡು, ನುಡಿ, ಸಂಸ್ಕøತಿಯ ಪ್ರೀತಿಯೊಂದಿಗೆ ನೈತಿಕತೆಯನ್ನು ಅಳವಡಿಸಿಕೊಂಡು ಬದುಕಿದಾಗ ಪುರುಷರ ಬೆಂಬಲವು ದೊರೆಯುತ್ತದೆ, ಬದುಕು ಹಸನಾಗುತ್ತದೆ, ಸಮಾಜಕ್ಕೆ ಒಳಿತಾಗುತ್ತದೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿ.ಪಂ. ಸದಸ್ಯೆ ಶ್ರೀಕಲಾ ಶಾಸ್ತ್ರೀ ಮಾತನಾಡಿ ಮನೆಯ ಹೆಣ್ಣುಮಕ್ಕಳಿಗೆ ಸಂಸ್ಕಾರವನ್ನು ಹೇಳಿಕೊಟ್ಟಾಗ ಅಂತಹ ಹೆಣ್ಣುಮಕ್ಕಳು ಬದುಕಿನ ಸವಾಲುಗಳನ್ನು ಸಮರ್ಥವಾಗಿ ಎದುರಿಸುತ್ತಾರೆ. ಅದರಲ್ಲಿ ತಾಯಂದಿರ ಪಾತ್ರ ಹಿರಿದಾದದ್ದು ಎಂದರು.
ಇದೇ ಸಂದರ್ಭದಲ್ಲಿ ಶತಮಾನಗಳಿಂದ ರಸ್ತೆ ವಂಚಿತವಾದ ಬಂಕನಹಿತ್ಲು ಕೇರಿಗೆ ರಸ್ತೆಗಾಗಿ ತಮ್ಮ ತೋಟವನ್ನೇ ಕಡೆದು ಸ್ಥಳದಾನ ಮಾಡಿದ ಹಿರಿಯರಾದ ಶಿವರಾಮ ನಾಯ್ಕ, ಜನಾರ್ಧನ ನಾಯ್ಕ, ನಾಗೇಶ ವಾಸು ನಾಯ್ಕರನ್ನು ವೇದಿಕೆಯ ಪರವಾಗಿ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾ.ಪಂ. ಮುಗ್ವಾದ ಅಧ್ಯಕ್ಷ ಟಿ.ಎಸ್. ಹೆಗಡೆ ಕೊಂಡಕೆರೆ ವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್. ಭಟ್ ವಿವಿಧ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಿದರು. ತಾ.ಪಂ. ಸದಸ್ಯೆ ಲಲಿತಾ ನಾಯ್ಕ, ಕ್ಷೇತ್ರ ಸಮನ್ವಯಾಧಿಕಾರಿ ಜಿ.ಎಸ್. ನಾಯ್ಕ, ಶಿಕ್ಷಕ ಸಂಘದ ಅಧ್ಯಕ್ಷ ಎನ್.ಎಸ್. ನಾಯ್ಕ, ಬಿ.ಆರ್.ಪಿ.ಯ ವಿ.ಆರ್. ನಾಯ್ಕ, ಸುರೇಶ ನಾಯ್ಕ, ಎಸ್.ಕೆ. ಹೆಗಡೆ, ಮುಗ್ವಾ ಗ್ರಾ.ಪಂ. ಸದಸ್ಯರು, ಎಸ್.ಡಿ.ಎಂ.ಸಿ. ಸದಸ್ಯರುಗಳು, ವಿವಿಧ ಮಹಿಳಾ ಸಂಘಟನೆಯ ಸದಸ್ಯರು ಪಾಲ್ಗೊಂಡಿದ್ದರು.
ಮುಗ್ವಾ ನಾಮಧಾರಿ ಸಂಘದ ಅಧ್ಯಕ್ಷ ನಿವೃತ್ತ ಶಿಕ್ಷಕ ಎನ್.ಎಂ. ನಾಯ್ಕ ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಸುಬ್ರಹ್ಮಣ್ಯ ನಾಯ್ಕ ಕಾರ್ಯಕ್ರಮ ನಿರ್ವಹಿಸಿ, ಮುಕ್ತಾ ನಾಯ್ಕ ವಂದಿಸಿದರು
Leave a Comment