ಹೊನ್ನಾವರ:
`ಬದುಕಿನಲ್ಲಿ ಸಹಿಸಲಾಗದ ಅಪಮಾನ, ನೋವುಗಳನ್ನು ಅನುಭವಿಸಿದರೂ ಡಾ. ಬಿ.ಆರ್. ಅಂಬೇಡ್ಕರ್ ಅವರು ಸಮಾಜಕ್ಕೆ ನೈತಿಕತೆಯ ಶಿಕ್ಷಣ ಕೊಟ್ಟು ಅಜರಾಮರರಾಗಿದ್ದಾರೆ’ ಎಂದು ನಿವೃತ್ತ ಸಿಪಿಐ, ದಲಿತ ಮುಖಂಡ ಎನ್.ಆರ್.ಮುಕ್ರಿ ಹೇಳಿದರು.
ಪಟ್ಟಣದ ಸೋಶಿಯಲ್ ಕ್ಲಬ್ ಸಭಾಭವನದಲ್ಲಿ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮೀಸಲಾತಿ ರಕ್ಷಣಾ ವೇದಿಕೆ ಜಿಲ್ಲಾ ಘಟಕ ಆಶ್ರಯದಲ್ಲಿ ಶುಕ್ರವಾರ ನಡೆದ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ 126ನೇ ಜನ್ಮದಿನೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅಸ್ಪ್ರಶ್ಯತೆ ನಿವಾರಣೆಯಾಗದು ಎಂದು ಅರಿತ ಅಂಬೇಡ್ಕರ್ ಸಂವಿಧಾನದಲ್ಲಿ ಅಸ್ಪ್ರಶ್ಯತೆಯನ್ನು ಅಳಿಸಿ ಹಾಕುವ ನಿಯಮ ಸೇರಿಸಿದರು. ಅವರ ಗಟ್ಟಿ ನಿಲುವಿನಿಂದಾಗಿ ರಾಜ್ಯಾಂಗ ರಚನಾ ಸಭೆ ಸಂವಿಧಾನದ ಕರಡನ್ನು ಒಪ್ಪಿಕೊಂಡಿತು. ಅದರಂತೆ ಅಸ್ಪ್ರಶ್ಯತೆ ನಿವಾರಣೆಯಾದರೂ ಇಂದಿನ ಕಾಲಘಟ್ಟದಲ್ಲಿ ಅದು ಕಣ್ಣಿಗೆ ಕಾಣದ ರೀತಿಯಲ್ಲಿ ಈಗಲೂ ಇದೆ. ಅಸ್ಪ್ರಶ್ಯರ ಹಕ್ಕಿಗಾಗಿ ಹೋರಾಟ ಪ್ರಾರಂಭಿಸಿದ ಡಾ. ಬಿ.ಆರ್. ಅಂಬೇಡ್ಕರ್ ಅವರ ಜೀವನವೇ ಒಂದು ಆದರ್ಶ. ಅವರ ಸಮಾನತೆಯ ತತ್ವವನ್ನು ಅಳವಡಿಸಿಕೊಂಡು ಮುನ್ನಡೆಯೋಣ ಎಂದರು.
ಹಿರಿಯ ಪತ್ರಕರ್ತ ಜಿ.ಯು.ಭಟ್ಟ ಮಾತನಾಡಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನಕ್ಕೆ ಬದ್ಧವಾದ ಹಕ್ಕುಗಳನ್ನು ಕೊಟ್ಟಿದ್ದಾರೆ. ಜೀವನದುದ್ದಕ್ಕೂ ಅವಮಾನ, ಸೋಲುಗಳನ್ನು ಅನುಭವಿಸಿ ಮಹಾನ್ ಮಾನವತಾವಾದಿ. ಅವರ ಓದು, ಆತ್ಮಸ್ಥೈರ್ಯ, ಪ್ರೀತಿ ಎಲ್ಲರಿಗೂ ಮಾದರಿಯಾಗಿದೆ. ಶೋಷಿತ ವರ್ಗದವರು ಉತ್ತಮ ಶಿಕ್ಷಣ ಪಡೆದು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದರು.
ಉಪನ್ಯಸಕರಾಗಿ ಪಾಲ್ಗೊಂಡಿದ್ದ ಪ್ರಾಧ್ಯಾಪಕ ಡಾ. ಎಂ.ಆರ್.ನಾಯಕ ಮಾತನಾಡಿ ಡಾ. ಬಿ.ಆರ್. ಅಂಬೇಡ್ಕರ್ ಅವರಲ್ಲಿರುವ ಹೋರಾಟದ ಬದುಕು, ಕರ್ತೃತ್ವ ಶಕ್ತಿ, ಅಧ್ಯಯನಶೀಲತೆ ಅವರನ್ನು ಮೇರುವ್ಯಕ್ತಿತ್ವವನ್ನು ರೂಪಿಸಿತು. ಅವರು ಪಡೆದ ಪಾಂಡಿತ್ಯಕ್ಕೆ ಅವರ ಶಿಕ್ಷಣವೇ ಪ್ರೇರಕವಾಗಿತ್ತು. ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆಯ ಸಾಧನೆಯನ್ನು ಅವಲೋಕಿಸಿದಾಗ ತೃಪ್ತಿಕರವಾಗಿಲ್ಲ ಎಂಬುದು ಕಂಡುಬರುತ್ತದೆ. ಇಂದು ಬ್ರಷ್ಟಾಚಾರ, ಜಾತಿಪದ್ದತಿ, ಅಸಮಾನತೆ ತಾಂಡವವಾಡುತ್ತಿದೆ. ಇವೆಲ್ಲವನ್ನು ಹೋಗಲಾಡಿಸಲು ಶಿಕ್ಷಣ ಬಹುಮುಖ್ಯ ಪಾತ್ರವಹಿಸುತ್ತದೆ. ಎಲ್ಲರೂ ಸಂಘಟಿತರಾಗಿ ಹೋರಾಡಿದಾಗ ಮಾತ್ರ ಸಮಾನತೆ ಮತ್ತು ಹಕ್ಕು ಪಡೆಯಲು ಸಾಧ್ಯ ಎಂದರು.
ವಕೀಲ ಎಚ್.ಉದಯ್ ನಾಯ್ಕ, ಮಾಜಿ ಜಿ.ಪಂ ಸದಸ್ಯ ಕೃಷ್ಣ ಗೌಡ, ಪ.ಪಂ ಸದಸ್ಯೆ ಮಹಾಲಕ್ಷ್ಮೀ ಹರಿಜನ್, ಅಭಿಯಂತರ ಎಂ.ಜಿ ಸಿಂಧೆ, ಪ್ರೊ.ಬಿ.ಕೃಷ್ಣ, ಈಶ್ವರ ಮಠದಕೇರಿ, ಕಮಲಾಕರ ಮುಕ್ರಿ, ಭಾಷಾ ಅಹ್ಮದ್ ಪಟೇಲ್, ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ತುಳಸಿದಾಸ ಪಾವಸ್ಕರ್, ಪ್ರಧಾನ ಕಾರ್ಯದರ್ಶಿ ಕಿರಣ ಶಿರೂರು ಇತರರು ಉಪಸ್ಥಿತರಿದ್ದರು. ಈಶ್ವರ ಮುಕ್ರಿ ಸ್ವಾಗತಿಸಿದರು
Leave a Comment