ಕಾರವಾರ:
ಉತ್ತರ ಕನ್ನಡ ಜಿಲ್ಲಾ ವಿಜ್ಞಾನ ಕೇಂದ್ರ ತನ್ನ ಅಸ್ಥಿತ್ವ ಉಳಿಸಿಕೊಳ್ಳಲು ಪರದಾಡುತ್ತಿದೆ. ಇಲ್ಲಿನ ಜಿಲ್ಲಾಡಳಿತವೂ ವಿಜ್ಞಾನ ಕೇಂದ್ರವನ್ನು ಆಕ್ರಮಿಸಿಕೊಳ್ಳಲು ಯತ್ನಿಸಿದ್ದು, ಇದರಿಂದ ತಪ್ಪಿಸಿಕೊಳ್ಳಲಿಕ್ಕಾಗದ ಪರಿಸ್ಥಿತಿಯಲ್ಲಿ ವಿಜ್ಞಾನ ಕೇಂದ್ರವಿದೆ.
ಈಗಿರುವ ಜಿಲ್ಲಾ ವಿಜ್ಞಾನ ಕೇಂದ್ರವನ್ನು ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ವಿಲೀನಗೊಳಿಸುವ ವಿಚಾರವಾಗಿ ಜಿಲ್ಲಾಡಳಿತ ಹಾಗೂ ವಿಜ್ಞಾನ ಕೇಂದ್ರದ ಆಡಳಿತ ಮಂಡಳಿಯ ನಡುವೆ ಭಿನ್ನಾಭಿಪ್ರಾಯ ಉಂಟಾಗಿದೆ. ಕೋಡಿಬಾಗದ ಜಿಲ್ಲಾ ವಿಜ್ಞಾನ ಕೇಂದ್ರವನ್ನು ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರವನ್ನಾಗಿ ರೂಪಾಂತರಿಸಲು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ಕಾರವಾರ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ಗೆ ಸೂಚಿಸಿದೆ. ಅದರಂತೆ ಮೊದಲ ಹಂತವಾಗಿ ಉಪಕೇಂದ್ರಕ್ಕೆ ಸಿಬ್ಬಂದಿ ನೇಮಕಕ್ಕೆ ಸಂದರ್ಶನ ನಡೆಸಲಾಗಿದೆ. ಈ ವಿಚಾರವಾಗಿ ಮಾತುಕತೆ ನಡೆಸಲಾಗಿದೆಯಾದರೂ ವಿಲೀನಕ್ಕೆ ಜಿಲ್ಲಾ ವಿಜ್ಞಾನ ಕೇಂದ್ರದ ಆಡಳಿತ ಮಂಡಳಿಗೆ ಒಪ್ಪಿಗೆಯಿಲ್ಲ.
ಜಿಲ್ಲೆಯಲ್ಲಿ ವಿಜ್ಞಾನ ಅಧ್ಯಯನಕ್ಕೆ ಒಂದು ಸೂಕ್ತ ಕೇಂದ್ರ ಬೇಕು ಎಂದು ಜಿಲ್ಲೆಯ ವಿಜ್ಞಾನ ಶಿಕ್ಷಕರೆಲ್ಲ ಸೇರಿ 2003ರಲ್ಲಿ ಜಿಲ್ಲಾ ವಿಜ್ಞಾನ ಕೇಂದ್ರವನ್ನು ಸರ್ಕಾರೇತರ ಸಂಸ್ಥೆ ಎಂದು ನೋಂದಣಿ ಮಾಡಿಕೊಂಡರು. ಕಾರವಾರದ ಕೋಡಿಬಾಗದಲ್ಲಿದ್ದ ಕೈಗಾ ಅಣು ವಿದ್ಯುತ್ ನಿಗಮದ ಕಟ್ಟಡವನ್ನು ಕೈಗಾ ಯೋಜನಾ ನಿರ್ದೇಶಕರು 2005ರಲ್ಲಿ ವಿಜ್ಞಾನ ಕೇಂದ್ರಕ್ಕೆ ನೀಡಿದ್ದರು. ಬಳಿಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯಿಂದ 1.30 ಕೋಟಿ ಅನುದಾನ ಮಂಜೂರಾಗಿತ್ತು. ಅದರಲ್ಲಿ ಉಪಕೇಂದ್ರ ವೆಚ್ಚ ಮಾಡಿ ಎನ್ಪಿಸಿಐಎಲ್ ಕಟ್ಟಡವನ್ನು 2010ರಲ್ಲಿ ನವೀಕರಿಸಲಾಯಿತು. ನೂತನ ವಿಜ್ಞಾನ ಕೇಂದ್ರದ ಕಟ್ಟಡವನ್ನು ಆಗಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸಿದ್ದರು.
ನಡುವೆ 2011ರಲ್ಲಿ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು `ಜಿಲ್ಲಾ ವಿಜ್ಞಾನ ಕೇಂದ್ರವು ಸರ್ಕಾರೇತರ ಸಂಸ್ಥೆಯಾಗಿದ್ದು, ಇದಕ್ಕೆ ಯಾವುದೇ ಅಧೀಕೃತ ಮಾನ್ಯತೆ ಇಲ್ಲ. ಹೀಗಾಗಿ ಸರ್ಕಾರದ ಅನುದಾನವನ್ನು ಬಳಸಿಕೊಳ್ಳಬಾರದು ಎಂದು ಆದೇಶಿಸಿತು. ಇದರಿಂದಾಗಿ ಸರ್ಕಾರದಿಂದ ಬಂದ ಅನುದಾನದಲ್ಲಿ 43 ಲಕ್ಷ ಜಿಲ್ಲಾಧಿಕಾರಿ ಖಾತೆಯಲ್ಲಿಯೇ ಉಳಿದುಕೊಂಡಿತು. ಹೀಗಿದ್ದರೂ ಇಲ್ಲಿಯವರೆಗೆ ವಿಜ್ಞಾನ ಕೇಂದ್ರವನ್ನು ಅಚ್ಚುಕಟ್ಟಾಗಿ ಮುಂದುವರೆಸಿಕೊಂಡು ಬರಲಾಗಿದೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಅರಣ್ಯ ಇಲಾಖೆಗಳು ಇಲ್ಲಿ ಕಾರ್ಯಕ್ರಮ ನಡೆಸುತ್ತಿವೆ. 138 ಅಜೀವ ಸದಸ್ಯರು ಹಾಗೂ 103 ಶಾಲೆಗಳನ್ನು ಈ ಕೇಂದ್ರ ಸದಸ್ಯರನ್ನಾಗಿ ಮಾಡಿಕೊಂಡಿದೆ.
ಕೆಎಸ್ಟಿಎಫ್ಎಸ್ ಮಾರ್ಗಸೂಚಿಯ ಅನ್ವಯ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಸಿಬ್ಬಂದಿ ಹಾಗೂ ಅಧಿಕಾರಿಗಳ ನೇಮಕ ಪ್ರಕಿಯೆ ನಡೆದಿದ್ದು, ಈಗಿರುವ ಗೌರವ ಹುದ್ದೆಗಳ ವಿಚಾರವೂ ಚರ್ಚೆಯಲ್ಲಿದೆ. ಜಿಲ್ಲಾ ವಿಜ್ಞಾನ ಕೇಂದ್ರವನ್ನು ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರವನ್ನಾಗಿ ಮಾಡುವದಾದಲ್ಲಿ ಆಜೀವ ಸದಸ್ಯರನ್ನು ಹಾಗೂ ಶಾಲೆಗಳ ಸದಸ್ಯತ್ವವನ್ನು ಉಳಿಸಿಕೊಳ್ಳುವದರ ಜೊತೆ ಈಗಿರುವ ಸಿಬ್ಬಂದಿಯನ್ನು ಮುಂದುವರೆಸಬೇಕು ಎಂದು ಕೇಂದ್ರದ ಮೇಲ್ವಿಚಾರಕರು ಶರತ್ತು ಮಂಡಿಸಿದ್ದರು. ಇದಕ್ಕೆ ಜಿಲ್ಲಾಳಿತ ಸಮ್ಮತಿ ಸೂಚಿಸಿಲ್ಲ.
Leave a Comment