ಕಾರವಾರ:
2016-17 ಸಾಲಿನ ಆಯವ್ಯದಲ್ಲಿ ಸರಕಾರ ಜನತಾ ಚಿತ್ರ ಮಂದಿರಗಳ ನಿರ್ಮಾಣಕ್ಕೆ ಪ್ರೋತ್ಸಾಹಧನ ನೀಡಲು ಘೋಷಿಸಿದ್ದು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಜನತಾ ಚಲನಚಿತ್ರಮಂದಿರಗಳ ನೋಂದಣಿಗೆ ಅರ್ಜಿ ಆಹ್ವಾನಿಸಿದೆ.
ಜನತಾ ಚಿತ್ರಮಂದಿರವನ್ನು ಹೊಸದಾಗಿ ನಿರ್ಮಿಸಲು ಇಚ್ಚಿಸುವರು ಅಥವಾ ಹಾಲಿ ಚಿತ್ರಮಂದಿರವನ್ನು ಜನತಾ ಚಿತ್ರಮಂದಿರವಾಗಿ ಪರಿವರ್ತಿಸಲು ಇಚ್ಚಿಸುವರು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕರ ಕಛೇರಿಯಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು. ರಾಜ್ಯದ ಯಾವುದೇ ಭಾಗದಲ್ಲಿ ಕನಿಷ್ಠ 200 ಆಸನಗಳುಳ್ಳ, ಏಕಪರದೆಯ ಅಥವಾ ಕನಿಷ್ಠ 150 ಆಸನಗಳನ್ನು ಒಳಗೊಂಡ ಬಹು ಪರದೆಯ ಆಧುನಿಕ ತಂತ್ರಜ್ಞಾನ ಸೌಲಭ್ಯಗಳನ್ನು ಒಳಗೊಂಡ ಚಿತ್ರಮಂದಿರಗಳನ್ನು ನಿರ್ಮಿಸಿ, ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಂದ ನಿರಾಕ್ಷೇಪಣಾ ಪತ್ರವನ್ನು ಪಡೆದು ಪೂರ್ಣ ಪ್ರಮಾಣದಲ್ಲಿ ಪ್ರದರ್ಶನಕ್ಕೆ ಮುಕ್ತಗೊಳಿಸಿದ ಚಿತ್ರಮಂದಿಗಳು ಪ್ರೋತ್ಸಾಹಧನಕ್ಕೆ ಅರ್ಹತೆ ಹೊಂದಿರುತ್ತವೆ. ಜನತಾ ಚಿತ್ರಮಂದಿರ ನಿರ್ಮಾಣಕ್ಕೆ ಸರಕಾರದಿಂದ ಪ್ರೋತ್ಸಾಹಧನ ಪಡೆದ ಚಿತ್ರಮಂದಿರಗಳಲ್ಲಿ, ಪ್ರೋತ್ಸಾಧನ ಪಡೆದ ದಿನದಿಂದ ಶೇ.100%ರಷ್ಟು ಕನ್ನಡ ಚಲನಚಿತ್ರಗಳನ್ನು ಮಾತ್ರ ಪ್ರದರ್ಶಿಸತಕ್ಕದ್ದು. ಒಂದು ಚಿತ್ರಮಂದಿರಕ್ಕೆ ಒಂದು ಬಾರಿ ಮಾತ್ರ ಸಹಾಯಧನ ಮಂಜೂರು ಮಾಡಲಾಗುವದು. ಹೆಚ್ಚಿನ ಮಾಹಿತಿಗಾಗಿ ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ವಾರ್ತಾಸೌಧ 17 ಭಗವಾನ ಮಹಾವೀರ ರಸ್ತೆ, ಬೆಂಗಳೂರು ಇವರನ್ನು ಸಂಪರ್ಕಿಸಬಹುದಾಗಿದೆ.
Leave a Comment