ದಾಂಡೇಲಿ:
ಕರ್ನಾಟಕ ರಾಜ್ಯ ಸರ್ಕಾರಿ ದಿನಗೂಲಿ ನೌಕರರ ಮಹಾಮಂಡಳಿಯ ನೇತೃತ್ವದಲ್ಲಿ ರಾಜ್ಯದ 22 ಜಿಟಿ & ಟಿಸಿ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲ ಗುತ್ತಿಗೆ ತರಬೇತುದಾರರು, ಉಪನ್ಯಾಸಕರು, ಅತಿಥಿ ಉಪನ್ಯಾಸಕರು ಬೆಂಗಳೂರಿನಲ್ಲಿರುವ ಜಿಟಿ & ಟಿಸಿ ವ್ಯವಸ್ಥಾಪಕ ನಿರ್ದೇಶಕರ ಕಛೇರಿಯ ಎದುರು ಜೂ.14 ರಂದು ಬೆಳಿಗ್ಗೆಯಿಂದಲೇ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದೆ.
ಜಿಟಿ & ಟಿಸಿ ಕೇಂದ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರ ಖಾಯಂಗೊಳಿಸುವಿಕೆ, ಸಮಾನ ಕೆಲಸಕ್ಕೆ ಸಮಾನ ವೇತನ, ಭವಿಷ್ಯ ನಿಧಿ ಹಾಗೂ ನೌಕರರ ರಾಜ್ಯ ವಿಮೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದೆ.
ಈಗಾಗಲೆ ಬೇಡಿಕಗಳ ಕುರಿತು ಜೂ.9ರೊಳಗಾಗಿ ಮಹಾಮಂಡಳಿಯ ಪದಾಧಿಕಾರಿಗಳ ಜೊತೆ ಸಭೆ ನಡೆಸಿ ಬೇಡಿಕೆ ಈಡೇರಿಸುವಂತೆ ವ್ಯವಸ್ಥಾಪಕ ನಿರ್ದೇಶಕರಲ್ಲಿ ವಿನಂತಿಸಲಾಗಿತ್ತು. ಅದಕ್ಕೆ ಸ್ಪಂದಿಸದ ಹಿನ್ನೆಲೆಯಲ್ಲಿ ಈ ಮುಷ್ಕರವನ್ನು ಹಮ್ಮಿಕೊಳ್ಳಲಾಗಿದೆ. ಮುಷ್ಕರ ದಿನದಂದು ಜಿಟಿ & ಟಿಸಿ ಗುತ್ತಿಗೆ ಹಾಗೂ ಅತಿಥಿ ಸಿಬ್ಬಂದಿಗಳು ತಪ್ಪದೇ ಭಾಗವಹಿಸಬೇಕು ಎಂದು ಮಹಾಮಂಡಳಿಯ ಅಧ್ಯಕ್ಷ ಡಾ.ಕೆ.ಎಸ್.ಶರ್ಮಾ ಕರೆಕೊಟ್ಟಿದ್ದು, ಇದನ್ನು ಬೆಂಬಲಿಸಿ ಮುಷ್ಕರದಲ್ಲಿ ಭಾಗವಹಿಸಲಾಗುವುದೆಂದು ನಗರದ ಜಿಟಿ & ಟಿಸಿ ಕೇಂದ್ರದ ಗುತ್ತಿಗೆ ತರಬೇತುದಾರರು, ಉಪನ್ಯಾಸಕರು, ಅತಿಥಿ ಉಪನ್ಯಾಸಕರು ಪತ್ರಿಕೆಗೆ ತಿಳಿಸಿದ್ದಾರೆ.
Leave a Comment