ಕಾರವಾರ:
ಸಾಂಕ್ರಾಮಿಕ ರೋಗಗಳನ್ನು ನಿರ್ಮೂಲನೆ ಮಾಡುವಲ್ಲಿ ಜನಪ್ರತಿನಿದಿಗಳ ಸಹಕಾರ ಅತ್ಯಗತ್ಯವಾಗಿದ್ದು, ಆರೋಗ್ಯ ಇಲಾಖೆಯೊಂದಿಗೆ ಜನಪ್ರತಿನಿದಿಗಳು ಕೈ ಜೋಡಿಸಿ ಜಿಲ್ಲೆಯನ್ನು ಮಲೇರಿಯಾ ಮುಕ್ತ ಜಿಲ್ಲೆಯನ್ನಾಗಿ ಮಾಡಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಎಲ್.ಚಂದ್ರಶೇಖರ ನಾಯಕ ಹೇಳಿದರು.
ಅವರು ಶುಕ್ರವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಛೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತಾಲೂಕ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಮಲೇರಿಯಾ ನಿರ್ಮೂಲನೆ ಕುರಿತು ಜನಪ್ರತಿನಿದಿಗಳಿಗೆ ಮಾಹಿತಿ ಶಿಬಿರ ಹಾಗೂ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಸಂಕ್ರಾಮಿಕ ರೋಗಗಳನ್ನು ತಡೆಗಟ್ಟುವದರ ಬಗ್ಗೆ ಸಾಮಾನ್ಯ ಜ್ಞಾನವಿದ್ದರೆ ಸಂಕ್ರಾಮಿಕ ರೋಗಗಳನ್ನು ನಿರ್ಮೂಲನೆ ಮಾಡಲು ಸಾದ್ಯವಾಗುತ್ತದೆ. ಶಿಬಿರದ ಸದುಪಯೋಗವನ್ನು ಪಡೆದು ಸೊಳ್ಳೆಗಳಿಂದ ಬರುವಂತಹ ಕಾಯಿಲೆಗಳನ್ನು ನಿಯಂತ್ರಿಸಲು ಎಲ್ಲಾ ಜನಪ್ರತಿನಿದಿಗಳು ಸಹಕಾರ ನೀಡಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾರವಾರ ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ ಮಾತನಾಡಿ ಮಲೇರಿಯಾ ನಿರ್ಮೂಲನೆ ಮಾಹಿತಿ ಶಿಬಿರದಿಂದ ಜನಪ್ರತಿದಿಗಳು ಜನರಲ್ಲಿ ರೋಗಗಳ ಬಗ್ಗೆ ಅರಿವು ಮೂಡಿಸಲು ಸಾದ್ಯವಾಗುತ್ತದೆ. ಆರೋಗ್ಯ ಇಲಾಖೆಯೊಂದಿಗೆ ಜನಪ್ರತಿನಿದಿಗಳು ಕೂಡಿ ಮಲೇರಿಯಾ ನಿರ್ಮೂಲನೆ ಮಾಡಿ ಬದ್ದತೆ ತೋರಬೇಕು ಎಂದರು.
ನಗರಸಭೆ ಉಪಾದ್ಯಕ್ಷೆ ಲಿಲಾಬಾಯಿ ಠಾಣೆಕರ ಪ್ರಸ್ತಾವಿಕವಾಗಿ ಮಾತನಾಡಿ ಶಿಬಿರದಲ್ಲಿ ಪಡೆದ ಮಾಹಿತಿಯಿಂದ ಜನಪ್ರತಿನಿದಿಗಳು ಸ್ವಯಂ ಪ್ರೇರಿತರಾಗಿ ಜನರಲ್ಲಿ ಸಾಂಕ್ರಾಮಿ ರೋಗಗಳ ಬಗ್ಗೆ ಅರಿವು ಮೂಡಿಸಬೇಕು ಎಂದು ಹೇಳಿದರು. ಮಾಹಿತಿ ಶಿಬಿರದಲ್ಲಿ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಕ್ಯಾಪ್ಟನ್ ರಮೇಶ ರಾವ್ ಮಲೇರಿಯಾ ರೋಗದ ಲಕ್ಷಣಗಳು, ತಡೆಗಟ್ಟುವ ಕ್ರಮಗಳ ಕುರಿತು ಮಾಹಿತಿ ನೀಡಿದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಜಿ..ನಾಯ್ಕ ನಿರೂಪಿಸಿದರು. ಜಿಲ್ಲಾ ಆರೋಗ್ಯ ಸರ್ವೇಕ್ಷಣಾಧಿಕಾರಿ ವಿನೋದ ಭೂತಿ, ಕಾರವಾರ ತಾಲೂಕು ಆರೋಗ್ಯಧಿಕಾರಿ ಡಾ.ಸೂರಜ್ ನಾಯ್ಕ ವೇದಿಕೆ ಮೇಲೆ ಉಪಸ್ಥಿತರಿದ್ದರು. ನಗರಸಭೆ, ತಾಲೂಕ ಪಂಚಾಯತ್ ಪ್ರತಿನಿದಿಗಳು ಶಿಬಿರದಲ್ಲಿ ಭಾಗವಹಿಸಿದ್ದರು. ಮಲೇರಿಯ ರೋಗವು ಪ್ಲಾಸ್ಮೋಡಿಯಂ ಎಂಬ ಪರಾವಲಂಬಿ ಸೂಕ್ಷ್ಮಾಣುವಿನಿಂದ ಉಂಟಾಗುತ್ತವೆ ಮನುಷ್ಯನಲ್ಲಿ ಕಂಡುಬರುವ ಮಲೇರಿಯ ಪ್ಲಾಸ್ಮೋಡಿಯಂ ಪರಾವಲಂಬಿಗಳಲ್ಲಿ ನಾಲ್ಕು ಪ್ರಭೇದಗಳಿವೆ. ಪ್ಲಾಸ್ಮೋಡಿಯಂ ವೈವ್ಯಾಕ್ಸ್ (ಪಿವಿ), ಪ್ಲಾಸ್ಮೋಡಿಯಂ ಫಾಲ್ಸಿಫಾರಂ (ಪಿಎಫ್), ಪ್ಲಾಸ್ಮೋಡಿಯಂ ಓವಲೆ (ಪಿಒ) ಮತ್ತು ಪ್ಲಾಸ್ಮೋಡಿಯಂ ಮಲೇರಿಯ (ಪಿಎಂ). ಭಾರತ ದೇಶದಲ್ಲಿ ಪಿ.ವಿ., ಪಿ.ಎಫ್. ಮತ್ತು ಪಿ.ಎಂ ಪ್ರಬೇಧಗಳು ಕಂಡು ಬರುತಿದ್ದು ಕರ್ನಾಟಕದಲ್ಲಿ ಪಿ.ವಿ. ಮತ್ತು ಪಿ.ಎಫ್. ಮಲೇರಿಯ ಪ್ರಬೇಧಗಳು ಸಧ್ಯಕ್ಕೆ ಕಂಡು ಬರುತ್ತಿವೆ. ಸೋಂಕು ಹೊಂದಿದ ಹೆಣ್ಣು ಅನಾಫೆಲೀಸ್ ಸೊಳ್ಳೆಗಳು ಮಲೇರಿಯ ರೋಗವನ್ನು ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತವೆ.
ಮಲೇರಿಯಾ ರೋಗದ ವಸ್ತು ಸ್ಥಿತಿ : ಅನಾದಿ ಕಾಲದಿಂದಲೂ ಮಲೇರಿಯಾ ಕಾಯಿಲೆಯು ಮಾನವ ಕುಲಕ್ಕೆ ಪ್ರಮುಖ ಆರೋಗ್ಯ ಸಮಸ್ಯೆಯಾಗಿರುತ್ತದೆ. ವಿಶ್ವದ 99 ದೇಶಗಳಲ್ಲಿ ಮಲೇರಿಯಾ ನೆಲೆಯೂರಿದ್ದು ಸುಮಾರು 3.2 ಬಿಲಿಯನ್ (ವಿಶ್ವದ 1/2 ದಷ್ಟು) ಮಲೇರಿಯಾ ರೋಗದ ಸಮಸ್ಯೆಗೊಳಗಾಗಿರುತ್ತದೆ. ವಿಶ್ವದ 40% ಕ್ಕಿಂತ ಹೆಚ್ಚು ಜನಸಂಖ್ಯೆ ಮಲೇರಿಯಾ ಸಮಸ್ಯಾತ್ಮಕ ಪ್ರದೇಶಗಳಲ್ಲಿ ವಾಸಿಸುತ್ತಿದ್ದು, ಪ್ರತಿ ವರ್ಷ 4 ಲಕ್ಷಕ್ಕೂ ಹೆಚ್ಚು ಜನರು ಮಲೇರಿಯಾ ರೋಗದಿಂದ ಮರಣ ಹೊಂದುತ್ತಿದ್ದಾರೆ. ರಾಜ್ಯದಲ್ಲಿ : ರಾಜ್ಯದಲ್ಲಿ 70ರ ದಶಕದಲ್ಲಿ ಮಲೇರಿಯಾ ಉಲ್ಬಣ ಪರಿಸ್ಥಿತಿಯಲ್ಲಿದ್ದು, ಸುಮಾರು 6 ಲಕ್ಷ ಪ್ರಕರಣಗಳು ವರದಿಯಾಗಿದ್ದು, ಕ್ರÀಮೇಣ ಇಳಿಮುಖವಾಗಿ 90ರ ದಶಕದಲ್ಲಿ 50 ಸಾವಿರ ಪ್ರಕರಣಗಳು ವರದಿಯಾಗಿರುತ್ತವೆ. 2004ರಿಂದ ಮಲೇರಿಯಾ ಬಾಗಲಕೋಟೆ, ಗದಗ, ಹಾವೇರಿ, ಕಲಬುರ್ಗಿ, ಯಾದಗಿರಿ, ಉಡುಪಿ ಹಾಗೂ ದಕ್ಷಿಣ ಕನ್ನಡಗಳಲ್ಲಿ ಹೆಚ್ಚಾಗಿ ವ್ಯಾಪಿಸಿರುತ್ತದೆ.2016ರಲ್ಲಿ ಒಟ್ಟು 10617 (ಪಿವಿ 8914, ಪಿಎಫ್ 1703) ಮಲೇರಿಯಾ ಪ್ರಕರಣಗಳು ವರದಿಯಾಗಿದ್ದು ಇದರಲ್ಲಿ 6409 ಪ್ರಕರಣಗಳು ದಕ್ಷಿಣ ಕನ್ನಡ ಜಿಲ್ಲೆÉಯಲ್ಲಿ ವರದಿಯಾಗಿವೆ. 2016ರಲ್ಲಿ ಮಲೇರಿಯಾದಿಂದ ಯಾವುದೇ ಮರಣ ವರದಿಯಾಗಿರುವುದಿಲ್ಲ. ಜಿಲ್ಲೆಯಲ್ಲಿ ಕಳೆದ 3-4 ವರ್ಷಗಳಿಂದ ಮಲೇರಿಯಾ ಪ್ರಕರಣಗಳು ಇಳಿಮುಖವಾಗುತ್ತಿದ್ದು, 2015ರ ಸಾಲಿನಲ್ಲಿ 64 ಪ್ರಕರಣಗಳು ಪತ್ತೆಯಾಗಿದ್ದು (60 ಪಿ. ವಿ. ಹಾಗೂ 4 ಪಿ. ಎಫ್), ಈ ವರ್ಷ ಜಿಲ್ಲೆಯಲ್ಲಿ ಇದುವರೆಗೆ 14 ( ಎಲ್ಲಾ ಪಿ.ವಿ.)ಪ್ರಕರಣಗಳು ಮಾತ್ರ ಪತ್ತೆಯಾಗಿವೆ. ಜಿಲ್ಲೆಯಲ್ಲಿ ಹೆಚ್ಚಾಗಿ ನೆರೆಯ ಸಮಸ್ಯಾತ್ಮಕ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಹಾಗೂ ಗೋವಾ ರಾಜ್ಯಗಳಲ್ಲಿ ಕಾರ್ಯನಿರ್ವಹಿಸುವ ವಲಸೆ ಕಾರ್ಮಿಕರಲ್ಲಿ ವರದಿಯಾಗುತ್ತಿದೆ ಎಂದು ಸಭೆಯಲ್ಲಿ ಅಧಿಕಾರಿಗಳು ತಿಳಿಸಿದರು.
Leave a Comment