ಹೊನ್ನಾವರ: ಸಂವಿಧಾನದ ಮೂಲ ಅಂತಸತ್ವಗಳ ರಕ್ಷಣೆ ಮತ್ತು ಗೌರವವೇ ನಾವು ದೇಶಕ್ಕೆ ನೀಡುವ ಬಹು ದೊಡ್ಡ ಸೇವೆ ಎಂದು ಹೊನ್ನಾವರ ಹಿರಿಯ ಸಿವಿಲ್ ನ್ಯಾಯಾಧೀಶ ಎಮ್.ವಿ. ಚೆನ್ನಕೇಶವ ರೆಡ್ಡಿ ಅಭಿಪ್ರಾಯಪಟ್ಟರು.
ಅವರು ಹೊನ್ನಾವರ ನ್ಯಾಯಾಲಯದಲ್ಲಿ ಧ್ವಜಾರೋಹಣ ನಡೆಸಿ ವಕೀಲರ ಸಂಘ ಏರ್ಪಡಿಸಿದ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಸ್ವಾತಂತ್ರ್ಯ ಸೇನಾನಿಗಳು ದೇಶಕ್ಕೆ ದೊರಕಿಸಿ ಕೊಟ್ಟ ಸ್ವಾತಂತ್ರ್ಯ ಮೌಲ್ಯಗಳು ಸಂವಿಧಾನದಲ್ಲಿ ಅನಾವರಣಗೊಂಡಿವೆ. ಅವುಗಳ ಪಾಲನೆಯೇ ನಾವು ದೇಶಕ್ಕೆ ಕೊಡುವ ಬಹು ದೊಡ್ಡ ಗೌರವ. ಜೀವನದ ಪ್ರತಿ ಹಂತದಲ್ಲಿಯೂ ಮೌಲ್ಯಗಳನ್ನು ಕಳೆದುಕೊಳ್ಳುತ್ತಿರುವ ನಾವು ಸಾಮಾಜೀಕ ಅವನತಿಗೆ ಕಾರಣರಾಗುತ್ತಿದ್ದೇವೆ ಎಂದರು.
ವಕೀಲರ ಸಂಘದ ಅಧ್ಯಕ್ಷ ಕೆ.ವಿ. ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ವಕೀಲ ಡಿ.ಎ. ಕಾಮತ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಪ್ರಧಾನ ಸಿವಿಲ್ ನ್ಯಾಯಾಧೀಶ ಮಧುಕರ ಪಿ. ಭಾಗ್ವತ, ಸರ್ಕಾರಿ ಅಭಿಯೋಜಕ ಭದರಿನಾಥ ನಾಯರಿ ಕೆ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಕೀಲರ ಸಂಘದ ಕಾರ್ಯದರ್ಶಿ ಸೂರಜ್ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.
Leave a Comment