ಕಾರವಾರ:ಶಿರವಾಡದಲ್ಲಿ ನೂತನವಾಗಿ ಪ್ರಾರಂಭಿಸಲಾದ ಸರಕಾರಿ ಪದವಿ ಪೂರ್ವ ಕಾಲೇಜು ಹಾಗೂ ಸರಕಾರಿ ಪ್ರೌಢ ಶಾಲೆಯ ಹೊಸ ಆರ್.ಎಂ.ಎಸ್.ಎ. ಕಟ್ಟಡಗಳ ಉದ್ಘಾಟನೆ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಸತೀಶ ಸೈಲ್ ತಾಲೂಕಿನ ಕಡವಾಡದಲ್ಲಿ ಕಳೆದ ವರ್ಷ ಪದವಿ ಪೂರ್ವ ಕಾಲೇಜನ್ನು ಪ್ರಾರಂಭಿಸಲಾಗಿತ್ತು. ಆದರೆ ನಿವೇಶನವನ್ನು ಪಡೆದು ಸ್ವಂತ ಕಟ್ಟಡ ನಿರ್ಮಾಣ ಮಾಡಬೇಕಿತ್ತು. ಆದರೆ ಗೇರು ಅಭಿವೃದ್ಧಿ ನಿಗಮದವರು ತಮ್ಮ ಜಾಗವನ್ನು ನೀಡಲು 1 ಕೋಟಿ ರೂ ಬೆಲೆಯನ್ನು ನಿಗದಿ ಪಡಿಸಿದ್ದರಿಂದ ಅದು ಸಾಧ್ಯವಾಗಲಿಲ್ಲ. ಆದ್ದರಿಂದ ಮುಂದೆ ಕಾಲೇಜನ್ನು ಜಿಲ್ಲೆಯಿಂದಲೇ ವರ್ಗಾಯಿಸಲು ಸರಕಾರ ತೀರ್ಮಾನಿಸಿತ್ತು ಎಂದರು. ಆ ಸಂದರ್ಭದಲ್ಲಿ ತಾಲೂಕಿನಲ್ಲಿಯೇ ಹೆಚ್ಚಿನ ಮಕ್ಕಳು ಶಿರವಾಡದಲ್ಲಿ ಕಾಲೇಜು ಶಿಕ್ಷಣ ಪಡೆಯುತ್ತಾರೆ ಎಂಬ ವಿಷಯ ತಿಳಿದು ಸರ್ವರೂ ಪ್ರಯತ್ನಿಸಿ ಕಾಲೇಜನ್ನು ಇಲ್ಲಿ ಸ್ಥಳಾಂತರಿಸಿ ಕೊಳ್ಳಲು ಸಫಲರಾಗಿದ್ದೇವೆ. ಕಾಲೇಜಿಗೆ ಉತ್ತಮ ಕಟ್ಟಡವನ್ನು ಮಂಜೂರಿ ಮಾಡಿಸಲು ಪ್ರಯತ್ನಿಸಲಾಗುತ್ತದೆ.
ಕೊಂಕಣ ರೈಲ್ವೇ ನಿಗಮದವರು ಸಿ.ಎಸ್.ಆರ್. ಫಂಡ್ ನಲ್ಲಿ ಕನಿಷ್ಟ 2 ಕೊಠಡಿಗಳನ್ನು ನಿರ್ಮಿಸಿ ಕೊಡಲು ಅವರಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು. ಕ್ರೀಡಾಂಗಣ ನಿರ್ಮಾಣದ ಕುರಿತು ಯೋಚನೆ ಮಾಡಲಾಗಿದ್ದು ಅರಣ್ಯ ಇಲಾಖೆಯ ಜಾಗವನ್ನು ಅಕ್ರಮ ಸಕ್ರಮ ಯೋಜನೆ ಅಡಿಯಲ್ಲಿ 2 ಎಕರೆ ಜಾಗವನ್ನು ಪಡೆಯಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ರಾಮಕೃಷ್ಣ ನಾಯಕ ಮಾತನಾಡಿ ಕಡವಾಡದಲ್ಲಿನ ಪಪೂ ಕಾಲೇಜನ್ನು ವಿದ್ಯಾರ್ಥಿಗಳ ಅಭಾವದಿಂದಾಗಿ ಹಾಗೂ ನಿವೇಶನದ ಸಮಸ್ಯೆಯಿಂದ ಜಿಲ್ಲೆಯಿಂದಲೇ ಬೇರೆ ಜಿಲ್ಲೆಗೆ ವರ್ಗಾಯಿಸಲು ತೀರ್ಮಾನಿಸಲಾಗಿತ್ತು. ಅಂತಹ ಸಂದರ್ಭದಲ್ಲಿ ಅಧಿಕಾರಿಗಳು ಹಾಗೂ ಗಣ್ಯ ವ್ಯಕ್ತಿಗಳು ಸೇರಿ ಅದನ್ನು ಶಿರವಾಡಕ್ಕೆ ಸ್ಥಳಾಂತರಿಸಲು ಯಶಸ್ವಿಯಾಗಿದ್ದಾರೆ ಎಂದರು. ಶಾಲಾ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ ಹಾಗೂ ಶೂ ಬಾಗ್ಯ ಯೋಜನೆಯ ಅಡಿ ಶೂಗಳನ್ನು ವಿತರಿಸಿಲಾಯಿತು. ಶಿರವಾಡ ಗ್ರಾಪಂ ಅಧ್ಯಕ್ಷೆ ಗಂಗಾ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿಪಂ ಸದಸ್ಯೆ ಚೈತ್ರಾ ಕೊಠಾರಕರ, ಪತ್ರಕರ್ತ ಗಂಗಾಧರ ಹಿರೇಗುತ್ತಿ, ತಾಪಂ ಸದಸ್ಯ ಮಾರುತಿ ನಾಯ್ಕ, ಕಡವಾಡ ಗ್ರಾಪಂ ಅಧ್ಯಕ್ಷ ಸುಧೀರ ಸಾಳಸ್ಕರ, ಶಿರವಾಡ ಗ್ರಾಪಂ ಉಪಾಧ್ಯಕ್ಷ ಜಗದೀಶ ಬಾಂದೇಕರ, ಕೊಂಕಣ ರೈಲ್ವೇ ರೀಜನಲ್ ಮ್ಯಾನೇಜರ್ ಎಂ.ಆಸೀಮ್ ಸುಲೇಮಾನ್, ಕರ್ನಾಟಕ ಕೃಷಿ ಕಾಂಪೋಸ್ಟ್ ಅಭಿವೃದ್ಧಿ ನಿಗಮದ ನಿರ್ದೇಶಕ ಸಮೀರ ನಾಯ್ಕ, ಪ.ಪೂ.ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಕೆ.ಟಿ.ಭಟ್, ತಾಪಂ ಸಿ,ಇ,ಓ. ಶ್ರೀಕಾಂತ ಹೆಗಡೆ ಪಾಲ್ಗೊಂಡಿದ್ದರು.
ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಅಂಜಲಿ ಬಾಂದೇಕರ ಸ್ವಾಗತಿಸಿದರು. ಪ್ರೌಢ ಶಾಲೆಯ ಮುಖ್ಯಾಧ್ಯಾಪಕಿ ವರಲಕ್ಷ್ಮೀ ಮೋದಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಳೆದ 33 ವರ್ಷಗಳಿಂದ ಶಾಲೆಯು ನಡೆದು ಬಂದ ದಾರಿಯ ಕುರಿತು ಸಹ ಶಿಕ್ಷಕ ವಾಸುದೇವ ನಾಯಕ ವರದಿ ವಾಚಿಸಿದರು. ಸಹ ಶಿಕ್ಷಕ ದಿನೇಶ ಕಿನ್ನರಕರ ನಿರೂಪಿಸಿದರು. ದೈಹಿಕ ಶಿಕ್ಷಕ ರಾಜು ನಾಯ್ಕ ವಂದಿಸಿದರು.
Leave a Comment