ಭಟ್ಕಳ: ಬಕ್ರೀದ್ ಹಬ್ಬದ ಪ್ರಯುಕ್ತ ಗೋವುಗಳ ಹತ್ಯೆ ನಡೆಯುತ್ತಿದ್ದು, ಪೊಲೀಸ್ ಇಲಾಖೆ ಇದನ್ನು ತಡೆಯಬೇಕು ಎಂದು ಆಗ್ರಹಿಸಿ ಹಿಂದೂ ಜಾಗರಣ ವೇದಿಕೆ ಹಾಗೂ ಬಿಜೆಪಿ ಕಾರ್ಯಕರ್ತರು ಪ್ರವಾಸಿ ಮಂದಿರದ ಎದುರಿನ ಹೆದ್ದಾರಿಯಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.
ಭಟ್ಕಳದಲ್ಲಿ ಮೂರು ಪೊಲೀಸ್ ಚೆಕ್ ಪೋಸ್ಟ್ಗಳಿದ್ದರೂ ಗೋವುಗಳ ಸಾಗಾಟ ನಿರಾತಂಕವಾಗಿ ನಡೆದು ವಧೆ ನಡೆಯುತ್ತಿರುವ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು ಕ್ರಮ ಕೈಗೊಳ್ಳುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ ಎಂದು ಆರೋಪಿಸಿ ರಸ್ತೆ ನಡೆಸಿದಾಗ ಪೊಲೀಸರು ಅವರನ್ನು ಅಲ್ಲಿಂದ ಬಲವಂತವಾಗಿ ಎಬ್ಬಿಸಿದರು. ಈ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳಿಗೂ ಮತ್ತು ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರ ಮಧ್ಯೆ ವಾಗ್ವಾದವೂ ನಡೆಯಿತು. ಗೋ ಹತ್ಯೆ ತಡೆಯುವಂತೆ ಹಾಗೂ ವಧೆಗೆ ತರಲಾದ ಗೋವುಗಳ ರಕ್ಷಣೆ ಮಾಡುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಪೊಲೀಸ್ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ. ಆದರೆ ಈ ಬಗ್ಗೆ ಭಟ್ಕಳದಲ್ಲಿ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ಭಟ್ಕಳದಲ್ಲಿ ಗೋ ಹತ್ಯೆ ನಡೆಯುತ್ತಿದ್ದರೂ ಯಾಕೆ ಸುಮ್ಮನಿದ್ದೀರಿ? ಇಂತಹ ಕಡೆ ಗೋ ಹತ್ಯೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದರೂ ಕ್ರಮ ಕೈಗೊಳ್ಳುತ್ತಿಲ್ಲ. ಚೆಕ್ಪೋಸ್ಟಗಳು ಸರಿಯಾಗಿ ಕಾರ್ಯನಿರ್ವಹಿಸಿದ್ದರೆ ಗೋವುಗಳ ಸಾಗಾಟ ಆಗುತ್ತಿರಲಿಲ್ಲ ಎಂದು ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರು ಸಿಪಿಐ, ಡಿವೈಎಸ್ಪಿ, ಪಿಎಸೈ ಬಳಿ ಆಕ್ರೋಶ ವ್ಯಕ್ತಪಡಿಸಿದರು.
ಭಟ್ಕಳಕ್ಕೆ ಕೂಡಲೇ ಎಸ್ಪಿ ಆಗಮಿಸಿ ನಮಗೆ ಸೂಕ್ತ ಉತ್ತರ ನೀಡಬೇಕು ಹಾಗೂ ಗೋಹತ್ಯೆಯನ್ನು ತಡೆಯಬೇಕು ಎಂದು ಪಟ್ಟು ಹಿಡಿದರು. ಡಿವೈಎಸ್ಪಿ ಶಿವಕುಮಾರ ಹಾಗೂ ಇತರ ಅಧಿಕಾರಿಗಳು ಸಮಾಧಾನಿಸಲು ಯತ್ನಿಸಿದರೂ ಪಟ್ಟುಬಿಡದ ಪ್ರತಿಭಟನಾಕಾರರು ನಗರ ಠಾಣೆಗೆ ಮೆರವಣಿಗೆಯಲ್ಲಿ ತೆರಳಿ ಧರಣಿ ಕುಳಿತರು. ನಂತರ ಕಾರವಾರದಿಂದ ಹೆಚ್ಚುವರಿ ಎಸ್ಪಿ ಗೋಪಾಲ ಬ್ಯಾಕೋಡ ಆಗಮಿಸಿ ಪ್ರತಿಭಟನಾಕಾರರ ಬಳಿ ತೆರಳಿದರೂ ಸ್ಥಳಕ್ಕೆ ಖುದ್ದು ಎಸ್ಪಿ ಅವರೇ ಬರಬೇಕು ಎಂದು ಪಟ್ಟು ಹಿಡಿದರು. ಮಧ್ಯಾಹ್ನ 2 ಗಂಟೆಗೆ ಎಸ್ಪಿ ವಿನಾಯಕ ಪಾಟೀಲ್ ಆಗಮಿಸಿದಾಗ ಪ್ರತಿಭಟನಾಕಾರರ ಪರವಾಗಿ ಮಾತನಾಡಿದ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಗೋವಿಂದ ನಾಯ್ಕ, ಭಟ್ಕಳದಲ್ಲಿ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ನೂರಾರು ಗೋವುಗಳನ್ನು ಹತ್ಯೆ ಮಾಡಲಾಗುತ್ತಿದೆ. ಇದನ್ನು ತಕ್ಷಣ ನಿಲ್ಲಿಸುವಂತಾಗಬೇಕು. ಚೆಕ್ಪೋಸ್ಟಗಳಿದ್ದರೂ ಗೋ ಸಾಗಾಟ ನಡೆದಿದೆ. ಗೋ ಹತ್ಯೆ ತಡೆಯಿರಿ ಎಂದು ಪೊಲೀಸ್ ಮಹಾನಿರ್ದೇಶಕರೇ ಸೂಚಿಸಿದ್ದಾರೆ. ಆದರೆ ಎಲ್ಲಿಯೂ ಕ್ರಮ ಕೈಗೊಂಡಿಲ್ಲ ಎಂದಾಗ ಎಸ್ಪಿಯವರು ಗೋ ಹತ್ಯೆ ತಡೆಯಲು ಕ್ರಮ ಕೈಗೊಳ್ಳಲಾಗುವುದು. ಎಲ್ಲಾ ಕಡೆಗಳಲ್ಲಿಯೂ ಅಧಿಕಾರಿಗಳನ್ನು ಗಸ್ತಿಗೆ ಕಳುಹಿಸಲಾಗುವುದು. ಚೆಕ್ಪೋಸ್ಟಗಳಲ್ಲಿ ತೀವ್ರ ನಿಗಾ ಇಡಲಾಗುವುದು ಎಂದರು. ಉಪಸ್ಥಿತರಿದ್ದ ಸಹಾಯಕ ಆಯುಕ್ತ ಎಂ. ಎನ್. ಮಂಜುನಾಥ ಅವರ ಬಳಿಯೂ ಗೋ ಹತ್ಯೆ ನಿಷೇಧಕ್ಕೆ ಕ್ರಮ ಕೈಗೊಳ್ಳುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಹಿಂದೂ ಜಾಗರಣಾ ವೇದಿಕೆಯ ತಾಲೂಕು ಸಂಚಾಲಕ ದಿನೇಶ ಮೊಗೇರ, ರಾಘವೇಂದ್ರ ನಾಯ್ಕ, ತುಳಸಿದಾಸ ನಾಯ್ಕ, ಬಿಜೆಪಿಯ ಅಧ್ಯಕ್ಷ ರಾಜೇಶ ನಾಯ್ಕ, ಪ್ರಮುಖರಾದ ಕೃಷ್ಣಾ ನಾಯ್ಕ, ದಿನೇಶ ನಾಯ್ಕ, ಸುನೀಲ್ ನಾಯ್ಕ, ಈಶ್ವರ ನಾಯ್ಕ, ಪರಮೇಶ್ವರ ದೇವಾಡಿಗ, ದತ್ತಾತ್ರಯ ನಾಯ್ಕ, ಈಶ್ವರ ದೊಡ್ಮನೆ, ರವಿ ನಾಯ್ಕ, ಮಂಜು ನಾಯ್ಕ, ದಾಸಾ ನಾಯ್ಕ ಸೇರಿದಂತೆ ಬಿಜೆಪಿ ಹಾಗೂ ಹಿಂದೂ ಜಾಗರಣಾ ವೇದಿಕೆಯ ಹಲವು ಕಾರ್ಯಕರ್ತರು ಪಾಲ್ಗೊಂಡಿದ್ದರು.
Leave a Comment