ಭಟ್ಕಳ: ದಕ್ಷಿಣ ಭಾರತದ ಬಹದೊಡ್ಡ ಧಾರ್ಮಿಕ ಶಿಕ್ಷಣ ಸಂಸ್ಥೆಯಾದ ಹೆಬಳೆಯ ಜಾಮೀಯಾ ಇಸ್ಲಾಮಿಯಾ ಇದರ ಸಂಸ್ಥಾಪಕ ಹಾಗೂ ತಂಝೀಂ ಸಂಸ್ಥೆಯ ಪೋಷಕ ಡಾ. ಅಲಿ ಮಲ್ಪಾ ಸಾಹೇಬ (100) ಶುಕ್ರವಾರ ರಾತ್ರಿ ತಮ್ಮ ಸ್ವಗೃಹದಲ್ಲಿ ನಿಧನರಾದರು.
ತಮ್ಮ ಜೀವನದುದ್ದಕ್ಕೂ ಶಿಕ್ಷಣ ಹಾಗೂ ಸಮುದಾಯದ ಅಭಿವೃದ್ಧಿಗಾಗಿ ಶ್ರಮಿಸಿದ್ದ ಅವರು ಇತ್ತೀಚಿನ ದಿನಗಳಲ್ಲಿ ತೀವ್ರ ಅನಾರೋಗ್ಯಕ್ಕೀಡಾಗಿದ್ದರು. ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತಾದರೂ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಾಣದ ಹಿನ್ನೆಲೆಯಲ್ಲಿ ಮನೆಗೆ ಕರೆ ತಂದು ಚಿಕಿತ್ಸೆ ನೀಡಲಾಗುತ್ತಿತ್ತು. ಸಹಜ ಅನಾರೋಗ್ಯದಿಂದ ಶುಕ್ರವಾರ ರಾತ್ರಿ ನಿದನರಾದರು.
ಮೃತರು ಐದು ಮಂದಿ ಪುತ್ರರು ಹಾಗೂ ಐದು ಮಂದಿ ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಶುಕ್ರವಾರ ರಾತ್ರಿ ಇವರ ನಿಧನದ ಸುದ್ದಿ ತಿಳಿದ ತಕ್ಷಣ ತಂಡೋಪತಂಡವಾಗಿ ಜನರು ಇವರ ಮನೆಗೆ ಆಗಮಿಸಿ ಮೃತರ ಅಂತಿಮ ದರ್ಶನ ಪಡೆದರು. ತಂಝೀಂ ಅಧ್ಯಕ್ಷ ಮುಜಾಮಿಲ್ ಖಾಜೀಯಾ, ಉಪಾಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, ಪ್ರಧಾನ ಕಾರ್ಯದರ್ಶಿ ಅಲ್ತಾಪ್ ಖರೂರಿ ಸೇರಿದಂತೆ ವಿವಿಧ ಶಿಕ್ಷಣ ಸಂಸ್ಥೆಗಳ ಪ್ರಮುಖರು, ಪದಾಧಿಕಾರಿಗಳು, ಹಲವು ಗಣ್ಯರು ಮೃತರ ಮನೆಗೆ ಭೇಟಿ ನೀಡಿ ಶೋಕ ವ್ಯಕ್ತಪಡಿಸಿದರು. ಶನಿವಾರ ನವಾಯತ್ ಕಾಲೋನಿಯ ಜಾಮೀಯಾ ಮಸೀದಿಯಲ್ಲಿ ನಮಾಝ್ ನಿರ್ವಹಿಸಿ ಮೃತದೇಹವನ್ನು ಸನಿಹದ ಖಬರಸ್ಥಾನದಲ್ಲಿ ಧಪನ ಮಾಡಲಾಯಿತು.
Leave a Comment