ಕಾರವಾರ:
ತೋಟಗಾರಿಕೆ ನಡೆಸಲು ಆಸಕ್ತಿ ಇದ್ದರೂ ಜಾಗದ ಸಮಸ್ಯೆಯಿಂದ ಕೃಷಿ ಕಾರ್ಯದಿಂದ ದೂರ ಇರುವ ನಗರ ಪ್ರದೇಶದ ಜನರಿಗೆ ತಮ್ಮ ಮನೆಯ ಅಂಗಳದಲ್ಲಿ ಕೈತೋಟ ಹಾಗೂ ಛಾವಣಿಯ ಮೇಲೆ ತಾರಸಿ ತೋಟ ನಿರ್ಮಾಣಕ್ಕೆ ತೋಟಗಾರಿಕೆ ಇಲಾಖೆಯು ಪ್ರೋತ್ಸಾಹ ನೀಡುವ ಯೋಜನೆಯೊಂದನ್ನು ಸಿದ್ಧ ಪಡಿಸಿದೆ. ತಮಗೆ ಅಗತ್ಯ ಇರುವ ರಾಸಾಯನಿಕ ರಹಿತ ಹಣ್ಣು ಹಾಗೂ ತರಕಾರಿಗಳನ್ನು ಜನರು ತಾವೇ ಬೆಳೆದುಕೊಳ್ಳುವಂತೆ ಇಲಾಖೆಯು ಸಹಕಾರ ನೀಡಲಿದೆ.
ರಾಜ್ಯ ಸರಕಾರವು 2017-18ನೇ ಸಾಲಿನ ಬಜೆಟ್‍ನಲ್ಲಿ ಘೋಷಿಸಿರುವ ಸಮಗ್ರ ತೋಟಗಾರಿಕಾ ಅಭಿವೃದ್ಧಿ ಯೋಜನೆ ಅಡಿಯಲ್ಲಿ ನಗರದಲ್ಲಿ ವಾಸಿಸುವ ಜನರಿಗೆ ಈ ಯೋಜನೆಯ ಉಪಯೋಗ ಲಭಿಸಲಿದೆ. ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಈ ಯೋಜನೆಯು ಜಾರಿಯಾಗುತ್ತಿದ್ದು ಪ್ರಾರಂಭದ ಹಂತವಾಗಿ ಕಾರವಾರ, ಸಿದ್ದಾಪುರ ಹಾಗೂ ಯಲ್ಲಾಪುರದ ನಗರವಾಸಿಗಳಿಗೆ ಯೋಜನೆಯ ಲಾಭ ದೊರೆಯಲಿದೆ. ಆಯ್ಕೆಯಾದ ಫಲಾನುಭವಿಗಳಿಗೆ ತರಬೇತಿ ನೀಡುವುದರೊಂದಿಗೆ ಅಗತ್ಯ ಪರಿಕರಗಳನ್ನು ಒದಗಿಸಿ ತಮ್ಮ ಆಹಾರ ತಾವೇ ತಯಾರಿಸಿಕೊಳ್ಳುವುದರ ಜೊತೆಗೆ ಪರಿಸರ ರಕ್ಷಣೆಯ ಜಾಗೃತಿ ಮೂಡಿಸಲಿದೆ.
ಮೊದಲಿನಿಂದಲೂ ತೋಟಗಾರಿಕೆ ಮಾಡುವುದು ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಿತ್ತು. ಆದರೆ ಕಾಲ ಕ್ರಮೇಣ ವಿವಿಧ ಕಾರಣಗಳಿಂದ ಜನರು ಅದರಿಂದ ಹಿಂದೆ ಸರಿಯುತ್ತ ಬಂದರು. ಅಲ್ಲದೆ ಮಾರುಕಟ್ಟೆಯಲ್ಲಿ ಸುಲಭವಾಗಿ ಸಿಗುತ್ತಿದ್ದ ರಾಸಾಯನಿಕಯುಕ್ತ ತರಕಾರಿ, ಹಣ್ಣು, ಇತರ ಬೆಳೆಗಳಿಗೆ ಮಾರುಹೋಗಲಾರಂಭಿಸಿದರು. ಆದರೆ ಇದು ವಿವಿಧ ರೀತಿಯ ಕಾಯಿಲೆಗಳಾದ ರಕ್ತದೊತ್ತಡ, ಹೃದಯ ಸಂಬಂಧಿ ತೊಂದರೆÀಗಳಿಗೆ ಕಾರಣವಾಗತೊಡಗಿದೆ. ಆದ್ದರಿಂದ ಈ ಎಲ್ಲ ಸಮಸ್ಯೆಗಳಿಂದ ಮುಕ್ತಿ ಹೊಂದಲು ಸಾವಯವ ಪದ್ಧತಿಗೆ ಸಹಕಾರ ನೀಡುವ ಮೂಲಕ ಪರಿಸರ ಕಾಳಜಿ, ಪೌಷ್ಠಿಕ ಆಹಾರ, ದೈಹಿಕ ಹಾಗೂ ಮಾನಸಿಕ ಆರೋಗ್ಯ, ನೀರು, ತ್ಯಾಜ್ಯ, ಕಸ-ಕಡ್ಡಿಗಳ ಬಳಕೆಯ ಕುರಿತು ಮಾಹಿತಿಯನ್ನು ಯೋಜನೆಯಲ್ಲಿ ಒದಗಿಸಲಾಗುವುದು.
ತಾರಸಿ ತೋಟದ ಫಲಾನುಭವಿಗಳಿಗೆ 2 ಸಾವಿರ ಮೌಲ್ಯದ 10 ಕೆ.ಜಿ. ಬಯೋಮಿಕ್ಸ್, ಕುಂಡ ಅಥವಾ ಟ್ರೇ ಸೇರಿದಂತೆ ಇನ್ನಿತರ ಸಲಕರಣಗಳಿರುವ ಕಿಟ್ ವಿತರಿಸಲಾಗುತ್ತದೆ. ಜತೆಗೆ ಕೈತೋಟ ಹಾಗೂ ತಾರಸಿ ತೋಟದ ಫಲಾನುಭವಿಗಳಿಗೆ 750 ರೂ ಮೌಲ್ಯದ ತರಕಾರಿ ಬೀಜ, ಸಸಿಗಳನ್ನು ತರಬೇತಿ ಸಮಯದಲ್ಲಿ ವಿತರಣೆ ಮಾಡಲಾಗುತ್ತದೆ. ಒಂದೊಮ್ಮೆ ಹೆಚ್ಚಿನ ಪರಿಕರಗಳು ಬೇಕಾದಲ್ಲಿ ಇಲಾಖೆ ಆಯ್ಕೆ ಮಾಡಿದ ಸಂಸ್ಥೆಗಳಿಂದ ಕಡಿಮೆ ಬೆಲೆ ನೀಡಿ ಫಲಾನುಭವಿಗಳು ತಮ್ಮ ಸ್ವಂತ ಖರ್ಚಿನಲ್ಲಿಯೇ ಪಡೆಯಬಹುದಾಗಿದೆ. ಒಟ್ಟಿನಲ್ಲಿ ಇಷ್ಟು ದಿನ ವಿಷಯುಕ್ತ ಹಣ್ಣು, ತರಕಾರಿ ಇತರೆÀ ಬೆಳೆಗಳನ್ನು ತಿಂದು ಹಣದ ಜತೆಗೆ ಉತ್ತಮ ಆರೋಗ್ಯವನ್ನು ಕಳೆದುಕೊಂಡಿರುವವರಿಗೆ ತೋಟಗಾರಿಕೆ ಇಲಾಖೆಯ ಈ ಹೊಸ ಯೋಜನೆಯಿಂದ ಸಹಾಯವಾಗಲಿದೆ. ಮನೆಯಲ್ಲಿ ಖಾಲಿ ಇರುವ ಬದಲು ಸ್ವಲ್ಪ ಸಮಯವನ್ನು ಮೀಸಲಿಟ್ಟು ದಿನಕ್ಕೊಮ್ಮೆ ಗಮನ ಹರಿಸಿದರು ಉತ್ತಮ ಪರಿಸರ, ಸೌಂದರ್ಯದ ಜೊತೆಗೆ ಆರೋಗ್ಯಕರ ಬೆಳೆಗಳನ್ನು ಬೆಳೆಯಲು ಇದು ಸಹಕಾರಿಯಾಗಿದೆ.
ಪ್ರಸ್ತುತ ಯೋಜನೆಯನ್ನು ಸರಕಾರ ಘೋಷಣೆ ಮಾಡಿ, ಜಿಲ್ಲೆಯ ತೋಟಗಾರಿಕಾ ಇಲಾಖೆಗಳಿಗೆ ಸುತ್ತೋಲೆ ಕಳುಹಿಸಿದೆಯಾದರೂ, ಅನುದಾನ ಬಿಡುಗಡೆಯಾಗಿಲ್ಲ. ಯೋಜನೆಯಲ್ಲಿ ಜಿಲ್ಲೆಯ ಮೂರು ತಾಲೂಕುಗಳ ನಗರ ಹಾಗೂ ಪಟ್ಟಣಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಆದರೆ ಸದ್ಯ ಮಳೆಗಾಲವಿರುವುದರಿಂದ ಜಿಲ್ಲೆಯಲ್ಲಿ ತೋಟಗಾರಿಕ ಬೆಳೆಗಳನ್ನು ಬೆಳೆಯಲು ಸಾಧ್ಯವಿಲ್ಲ. ಆದ್ದರಿಂದ ಅನುದಾನ ಬಂದ ಬಳಿಕವೇ ಯೋಜನೆಯ ಲಾಭ ಜನರಿಗೆ ದೊರೆಯಲಿದೆ.
****************
ಫಲಾನುಭವಿಗಳ ಆಯ್ಕೆ:
ಕೈತೋಟ ಇಲ್ಲವೇ ತಾರಸಿ ತೋಟದ ಫಲಾನುಭವಿಗಳಾಗುವವರು ಸ್ವಂತ ಮನೆಯನ್ನು ಹೊಂದಿರಬೇಕಾದುದು ಕಡ್ಡಾಯವಾಗಿದೆ. ಇದಕ್ಕೆ ದಾಖಲೆಯಾಗಿ ಮನೆಯ ಯಜಮಾನರ ಎರಡು ಭಾವಚಿತ್ರಗಳು, ವಿದ್ಯುತ್ ಪಾವತಿಸಿದ ಬಿಲ್ ಹಾಗೂ ಮನೆಕರದ ಪಾವತಿ ನೀಡಬೇಕು. ಮನೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಒಳ್ಳೆಯ ಜಾಗವಿದ್ದಲ್ಲಿ ಅಲ್ಲಿ ಕೈತೋಟ ನಿರ್ಮಿಸಲು ಒಟ್ಟು 100 ಜನರಿಗೆ ಪ್ರೋತ್ಸಾಹ ನೀಡಲಾಗುತ್ತದೆ. ಇದರ ಹೊರತಾಗಿ ಜಾಗವೇ ಇಲ್ಲದಿರುವವವರಿಗೆ ಮನೆಯ ಛಾವಣಿ ಮೇಲೆ ಹೂ, ಹಣ್ಣು, ತರಕಾರಿಗಳನ್ನು ಬೆಳೆಯಲು ಇಚ್ಚಿಸುವ ಒಟ್ಟು 200 ಮಂದಿಗೆ ತಾರಸಿತೋಟದ ಕಿಟ್ ವಿತರಿಸಲಾಗುತ್ತದೆ. ಹೀಗೆ ಜಾಗದ ಲಭ್ಯತೆ ಆಧಾರದ ಮೇಲೆ ಫಲಾನುಭವಿಗಳನ್ನು ಆಯ್ಕೆ ಮಾಡಿದ ಬಳಿಕ ಅವರಿಗೆ ಒಂದು ದಿನದ ಅಗತ್ಯ ತರಬೇತಿಯನ್ನು ಕೂಡ ನೀಡಲಾಗುತ್ತದೆ.
******************** ಕೋಟ್
ಕೈತೋಟ ಅಥವಾ ತಾರಸಿ ತೋಟಗಳ ಮೂಲಕ ಅವಶ್ಯವಿರುವ ಬೆಳೆಗಳನ್ನು ಬೆಳೆಯಲು ಸರಕಾರ ಪ್ರೋತ್ಸಾಹ ನೀಡಲು ಮುಂದಾಗಿದೆ. ಈಗಾಗಲೇ ಜಿಲ್ಲೆಗೆ ಯೋಜನೆ ಘೋಷಣೆಯಾಗಿದ್ದು, ಅನುದಾನ ಬಿಡುಗೆಯಾಗುವುದು ಬಾಕಿ ಇದೆ. ಇನ್ನೆರಡು ತಿಂಗಳಿನಲ್ಲಿ ಅನುದಾನ ಬಿಡುಗಡೆಯಾಗುವ ನಿರೀಕ್ಷೆ ಇದೆ.
-ದಯಾನಂದ, ಸಹಾಯಕ ತೋಟಗಾರಿಕೆ ಇಲಾಖೆ ಅಧಿಕಾರಿ,ಕಾರವಾರ
Leave a Comment