ಕಾರವಾರ: ಸರ್ಕಾರಿ ಇಂಜಿನಿಯರಿಂಗ್ ಕಾಲೇಜನ್ನು ನೂತನ ಕಟ್ಟಡಕ್ಕೆ ಸ್ಥಳಾಂತರಿಸುವಂತೆ ಆಗ್ರಹಿಸಿ ಕಾಲೇಜು ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಿದರು.
ಅವ್ಯವಸ್ಥೆಯಿಂದ ಕೂಡಿರುವ ಕಾಲೇಜಿನಲ್ಲಿ 700ಕ್ಕೂ ಅಧಿಕ ವಿದ್ಯಾರ್ಥಿಗಳಿದ್ದು, ಅವಷ್ಯವಿರುವ ಕೊಠಡಿ, ಪ್ರಯೋಗಾಲಯ, ಗೃಂಥಾಲಯ ಮೊದಲಾದ ಸೌಕರ್ಯಗಳಿಂದ ಕಾಲೇಜು ವಂಚಿತವಾಗಿದೆ. 2009ರಲ್ಲಿ ಸ್ಥಾಪನೆಯಾದ ಕಾಲೇಜಿಗೆ ಈವರೆಗೂ ಯಾವದೇ ಕನಿಷ್ಟ ಮೂಲಭುತ ಸೌಕರ್ಯವೂ ದೊರೆತಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು. ಕಾರವಾರ ಹಾಗೂ ಇಲ್ಲಿನ ಗ್ರಾಮೀಣ ಭಾಗದಲ್ಲಿ ಅನೇಕ ಬಡ ವಿದ್ಯಾರ್ಥಿಗಳು ವಾಸವಾಗಿದ್ದು, ಅವರೆಲ್ಲರೂ ಸರ್ಕಾರಿ ಕಾಲೇಜನ್ನು ಅವಲಂಭಿಸಿದ್ದಾರೆ. ಆದರೆ, ಮೂಲಭೂತ ಸೌಕರ್ಯಗಳ ಕೊರತೆಯಿಂದ ಕಾಲೇಜು ಅಭಿವೃದ್ದಿಯಾಗಿಲ್ಲ. ಮಕ್ಕಳಿಗೆ ಯೋಗ್ಯ ಶಿಕ್ಷಣವೂ ದೊರೆಯುತ್ತಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು. ಸ್ವಂತ ಕಟ್ಟಡವೂ ಇಲ್ಲದ ಕಾಲೇಜು ಪಾಲಿಟೆಕ್ನಿಕ್ ಕಾಲೇಜು ಆವರಣದಲ್ಲಿ ನಡೆಯುತ್ತಿದೆ. ವಿದ್ಯಾರ್ಥಿಗಳಿಗೆ ಕೂರಲು ಸರಿಯಾದ ಆಸನ ವ್ಯವಸ್ಥೆಯೂ ಇಲ್ಲಿಲ್ಲ. ನಾಲ್ಕೈದು ಕೊಠಡಿಗಳಲ್ಲಿಯೇ ತರಗತಿ ನಡೆಸಬೇಕಾದ ಪರಿಸ್ಥಿತಿ ಇದೆ ಎಂದು ವಿವರಿಸಿದರು.
ಬೆಳಗ್ಗೆ 8ರಿಂದ ಸಂಜೆ 5ರ ವರೆಗೆ ವಸತಿ ನಿಲಯದಲ್ಲಿ ತರಗತಿ ನಡೆಸಲಾಗುತ್ತದೆ. ವಸತಿ ನಿಲಯದಲ್ಲಿ ವಾಸ ವಿರುವ ವಿದ್ಯಾರ್ಥಿಗಳ ಸ್ನಾನ ಹಾಗೂ ಇತರೆ ಚಟುವಟಿಕೆಗಳಿಗೂ ಸ್ಥಳಾವಕಾಶವಿಲ್ಲದಂತಾಗಿದೆ. ವಸತಿ ನಿಲಯದಲ್ಲಿಯೇ ತರಗತಿ ನಡೆಸುವದರಿಂದ ಕಾಲೇಜಿಗೆ ಬರುವವರು ಮುಜುಗರಕ್ಕೊಳಗಾಗುತ್ತಿದ್ದಾರೆ ಎಂದು ವಿವರಿಸಿದರು. ವಿದ್ಯಾರ್ಥಿನಿಯರಿಗೆ ಶೌಚಾಲಯ ವ್ಯವಸ್ಥೆಯಿಲ್ಲ. ತರಗತಿಗಳು ಸರಿಯಾಗಿ ನಡೆಯುತ್ತಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು. ಕೂಡಲೇ ಹೊಸ ಕಟ್ಟಡಕ್ಕೆ ಕಾಲೇಜು ಸ್ಥಳಾಂತರಿಸಬೇಕು ಎಂದು ಆಗ್ರಹಿಸಿದರು. ಈ ಕುರಿತು ಜಿಲ್ಲಾಧಿಕಾರಿಗಳಿಗೆ ವಿದ್ಯಾರ್ಥಿಗಳು ಮನವಿ ಸಲ್ಲಿಸಿದರು.
Leave a Comment