ಹೊನ್ನಾವರ:
ಪಟ್ಟಣ ಪಂಚಾಯತಿಯಿಂದ ಸರಬರಾಜಾಗುವ ನೀರು ಕಲುಷಿತ ಹಾಗೂ ಸೀಮೆಎಣ್ಣೆ ಮಿಶ್ರಿತವಾಗಿ ಸರಬರಾಜಾಗುತ್ತಿದ್ದು ಅಲ್ಲಿನ ಸಾವಿರಾರು ನಿವಾಸಿಗರು ಆತಂಕಕ್ಕೊಳಗಾಗಿದ್ದಾರೆ. ಈ ಭಾಗದಲ್ಲಿ ನೆಲದಲ್ಲಿ ಹೂಳಲಾದ ನೀರು ಸರಬರಾಜು ಮಾಡುವ ಪೈಪ್ ಪಟ್ಟಣ ಪಂಚಾಯತಿಯವರ ನಿಷ್ಕಾಳಜಿಯಿಂದಾಗಿ ಬೇಸಿಗೆಯ ಮೊದಲೇ ನೀರಿಗಾಗಿ ಹಾಹಾಕಾರವೆದ್ದಿದೆ.
ಹೊನ್ನಾವರ ಪಟ್ಟಣದ ಯಾವ ಭಾಗದಲ್ಲೂ ಇರದಷ್ಟು ಜನಸಂಖ್ಯೆ ಪಟ್ಟಣದ ಪ್ರಭಾತನಗರ ಹಾಗೂ ಗಾಂಧೀನಗರ ಭಾಗದಲ್ಲಿದೆ. ಸರಿಸುಮಾರು 2 ಸಾವಿರಕ್ಕೂ ಹೆಚ್ಚು ಕುಟುಂಬಗಳು ಇಲ್ಲಿ ನೆಲೆಸಿವೆ. ಶುದ್ಧ ಕುಡಿಯುವ ನೀರಿಗಾಗಿ ಆ ಭಾಗದ ಸಾವಿರಾರು ಜನರು ಒಂದಿಲ್ಲೊಂದು ಸಮಸ್ಯೆ ಎದುರಿಸುತ್ತಲೇ ಬಂದಿದ್ದಾರೆ. ಪ್ರಭಾತನಗರ ವ್ಯಾಪ್ತಿಯಲ್ಲಿ ವಾರಕ್ಕೆ 4 ದಿನ ಮಾತ್ರ ನೀರು ಬಿಡಲಾಗುತ್ತಿದ್ದು, ನೀರಿನ ಪೈಪ್ಗಳು ಒಡೆದು ನೀರು ಪೂರೈಕೆ ಸರಿಯಾಗಿ ಆಗುತ್ತಿಲ್ಲ. ಕುಡಿಯುವ ನೀರಿನಲ್ಲಿ ಸೀಮೆಎಣ್ಣೆ ಹಾಗೂ ಪೆಟ್ರೋಲ್ ಮಿಶ್ರಿತ ವಾಸನೆ ಬರುತ್ತಿದೆ. ಕಲುಷಿತ ನೀರು ಪೂರೈಕೆಯಾಗುತ್ತಿರುವುದರಿಂದ ಆ ಭಾಗದ ನಿವಾಸಿಗರಿಗೆ ನೀರಿನ ಸೇವನೆಯಿಂದ ರೋಗ ರುಜಿನಗಳ ಭಯ ಕಾಡುತ್ತಿದೆ. ನೀರಿನ ಬಿಲ್ ಪಾವತಿಗೆ ಒಂದೆರಡು ದಿನ ವಿಳಂಬವಾದರೆ ಸಹಿಸುವ ಶಕ್ತಿ ಅವರಿಗಿಲ್ಲ. ನಮ್ಮ ಕಷ್ಟವನ್ನು ಯಾರಲ್ಲಿ ಹೇಳುವುದು. ಹಣವಿದ್ದವರು ಖಾಸಗೀ ಟ್ಯಾಂಕರ್ಗಳಿಂದ ಗಾಡಿಯೊಂದಕ್ಕೆ 300 ರಿಂದ 500 ರೂ. ರವರೆಗೆ ಹಣ ನೀಡಿ ನೀರು ತರಿಸಿಕೊಳ್ಳುತ್ತಿದ್ದಾರೆ. ಆದರೆ ಬಡವರು ನೀರಿಗಾಗಿ ಪರಿತಪಿಸುವ ಕಾಲ ಬಂದೊದಗಿದೆ ಎಂದು ಅಲ್ಲಿನ ನೂರಾರು ಮಹಿಳೆಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಸಿಬ್ಬಂದಿಗಳ ನಿಷ್ಕಾಳಜಿ: ಪಟ್ಟಣದ ಪ್ರಭಾತನಗರ, ಗಾಂಧಿನಗರ, ಫಾರೆಸ್ಟ್ ಕಾಲನಿಗಳಲ್ಲಿ ನೀರು ಸರಬರಾಜು ಮಾಡುವ ಪೈಪ್ ಒಡೆದು ಕೆಲ ದಿನಗಳಿಂದ ನೀರು ಪೋಲಾಗುತ್ತಿತ್ತು. ಟ್ಯಾಂಕ್ಗೆ ನೀರು ಸರಬರಾಜು ಮಾಡುವ ಪೈಪ್ ಒಡೆದು ಸಾವಿರಾರು ಲೀಟರ್ ನೀರು ಪೋಲಾಗಿದೆ. ಪ್ರಭಾತನಗದಲ್ಲಿ ಕೆಲವೆಡೆ ನೆಲದಲ್ಲಿ ಹೂಳಲಾದ ಪೈಪುಗಳು ಒಡೆದಿದ್ದು, ಒಡೆದ ಪೈಪುಗಳಿಂದ ದಿನಕ್ಕೆ ಸಾವಿರಾರು ಲೀಟರು ನೀರು ಪೊಲಾಗುತ್ತಿದೆ. ಮನೆಗಳಿಗೆ ನೀರು ಸರಿಯಾಗಿ ಪೂರೈಕೆಯಾಗದೇ ಜನರು ಪರದಾಡುತ್ತಿದ್ದಾರೆ.
ಪ್ರಭಾತನಗರ, ಗಾಂಧಿನಗರ, ಫಾರೆಸ್ಟ್ ಕಾಲನಿ ಸೇರಿದಂತೆ ಹಲವೆಡೆ ಪೈಪ್ಲೈನ್ಗಳಲ್ಲಿ ಉಂಟಾದ ದೋಷವನ್ನು ಸರಿಪಡಿಸಬೇಕು. ವರ್ಷದಲ್ಲಿ ಹಲವು ಬಾರಿ ಬೇರೆಬೇರೆ ಕಾರಣಗಳಿಂದ ರಿಪೇರಿಗೆ ಒಳಗಾಗುವ ಪೈಪ್ಲೈನ್ಗಳಿಂದ ಜನ ಪರದಾಡುವುದನ್ನು ತಪ್ಪಿಸಬೇಕು. ಈ ಬಗ್ಗೆ ಗಮನ ಹರಿಸಿ ಸಮಸ್ಯೆಗೆ ಪರಿಹಾರ ಸೂಚಿಸಬೇಕಾದ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಹಾಗೂ ಸಂಬಂಧಿಸಿದ ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ. ಆದಷ್ಟು ಶೀಘ್ರಗತಿಯಲ್ಲಿ ಶುದ್ಧ ಕುಡಿಯುವ ನೀರನ್ನು ಒದಗಿಸಿಕೊಡಬೇಕು. ಇಲ್ಲವಾದಲ್ಲಿ ಪ್ರಭಾತನಗರ ವ್ಯಾಪ್ತಿಯ ಸಾರ್ವಜನಿಕರು ಸೇರಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಸಾರ್ವಜನಿಕರಾದ ಅಬು ಬಕರ್ ಸಾಬ್, ಇಬ್ರಾಹಿಂ ಸಾಬ್, ಗೀತಾ, ಸಾನ್ವಿ ಹಾಗೂ ಆ ಭಾಗದ ನೂರಾರು ಮಹಿಳೆಯರು ಎಚ್ಚರಿಸಿದ್ದಾರೆ.
Leave a Comment