“ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಗುಣಮಟ್ಟದ ತರಬೇತಿ’
ಹೊನ್ನಾವರ:’ಮೆಡಿಕಲ್,ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿ ಕೋರ್ಸಗಳಿಗೆ ಪ್ರವೇಶ ಪರೀಕ್ಷೆ ಹಾಗೂ ಬ್ಯಾಂಕಿಂಗ್,ರೇಲ್ವೆ ಮೊದಲಾದ ಉದ್ಯೋಗಳಿಗೆ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳಿಗೆ ಸೂಕ್ತ ಹಾಗೂ ಗುಣಮಟ್ಟದ ತರಬೇತಿ ನೀಡುವ ನಿಟ್ಟಿನಲ್ಲಿ ಇಲ್ಲಿಯ ಪ್ರತಿಷ್ಠಿತ ಎಂ.ಪಿ.ಇ. ಸೊಸೈಟಿಯ ವತಿಯಿಂದ “ಡಾ.ಎಂ.ಪಿ.ಕರ್ಕಿ ಇನಸ್ಟಿಟ್ಯೂಟ್ ಆಫ್ ಎಕ್ಸಲೆನ್ಸ್’ ಎಂಬ ಸಂಸ್ಥೆಯನ್ನು ಆರಂಭಿಸಲಾಗುತ್ತಿದೆ’ ಎಂದು ಎಂ.ಪಿ.ಇ.ಸೊಸೈಟಿಯ ಉಪಾಧ್ಯಕ್ಷ ಕೃಷ್ಣಮೂರ್ತಿ ಭಟ್ಟ ಶಿವಾನಿ ತಿಳಿಸಿದರು.
ಗುರುವಾರ ಸಂಸ್ಥೆಯ ವತಿಯಿಂದ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಜಿಲ್ಲೆಯಲ್ಲಿ ಪ್ರತಿಭಾನ್ವಿತರ ಸಂಖ್ಯೆ ಬಹಳಷ್ಟಿದ್ದು ಅವರಿಗೆ ಸ್ಥಳೀಯವಾಗಿ ಉತ್ತಮ ತರಬೇತಿ ನೀಡುವ ನಿಟ್ಟಿನಲ್ಲಿ ತರಬೇತಿ ಸಂಸ್ಥೆಯೊಂದನ್ನು ಸ್ಥಾಪಿಸುವ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಹೇಳಿದರು.
ಪಿಯುಸಿ ನಂತರ ಸಿಇಟಿ,ನೀಟ್,ಜೀ ಮೇನ್ ಮೊದಲಾದ ಪರೀಕ್ಷೆಗಳಿಗೆ ತರಬೇತಿ ಪಡೆಯಲು ವಿದ್ಯಾರ್ಥಿಗಳು ಬೇರೆ ಜಿಲ್ಲೆಗಳಿಗೆ ಹೋಗಬೇಕಾದ ಪರಿಸ್ಥಿತಿಯಿದ್ದು ಪ್ರಸ್ತುತ ಸಂಸ್ಥೆ ವಿದ್ಯಾರ್ಥಿಗಳ ಈ ಅಗತ್ಯವನ್ನು ಪೂರೈಸಲಿದೆ.ಜೊತೆಗೆ ಸ್ನಾತಕೋತ್ತರ ತರಗತಿಗಳ ಪ್ರವೇಶಕ್ಕೆ ಹಾಗೂ ಬ್ಯಾಂಕಿಂಗ್ ಮೊದಲಾದ ಪರೀಕ್ಷೆಗಳಿಗೂ ಸಂಸ್ಥೆಯಲ್ಲಿ ತರಬೇತಿ ನೀಡಲಾಗುವುದು.ಒಂದೇ ಜಾಗದಲ್ಲಿ ಹಲವು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉತ್ತಮ ಶಿಕ್ಷಕರಿಂದ ಗುಣಮಟ್ಟದ ತರಬೇತಿ ನೀಡಲಾಗುವುದು.
ಎಂ.ಪಿ.ಇ ಸೊಸೈಟಿಯಲ್ಲಿ ಕಳೆದ 35 ವರ್ಷಗಳಿಂದ ಸಾಮಾಜಿಕ ಕಳಕಳಿಯೊಂದಿಗೆ ನಿರಂತರವಾಗಿ ಪ್ರಾಮಾಣಿಕ ಸೇವೆ ಸಲ್ಲಿಸುತ್ತ ಬಂದಿರುವ ಮಾಜಿ ಶಾಸಕ ಡಾ.ಎಂ.ಪಿ.ಕರ್ಕಿ ಅವರ ಹೆಸರನ್ನು ಈ ತರಬೇತಿ ಸಂಸ್ಥೆಗೆ ಇಡಲಾಗಿದ್ದು ಬರುವ ಅಕ್ಟೋಬರ್ನಿಂದಲೆ ಸಂಸ್ಥೆ ತನ್ನ ಕಾರ್ಯ ಆರಂಭಿಸಲಿದೆ’ ಎಂದು ಅವರು ತಿಳಿಸಿದರು.
ಮಾಜಿ ಶಾಸಕ ಡಾ.ಎಂ.ಪಿ.ಕರ್ಕಿ,ಡಾ.ವಿಜಯಲಕ್ಷ್ಮೀ ನಾಯ್ಕ,ಪಿಯು ಕಾಲೇಜಿನ ಪ್ರಾಚಾರ್ಯ ಎಂ.ಎಚ್.ಭಟ್ಟ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
Leave a Comment