ಕಾರವಾರ: ಕಾಜುಭಾಗದ ಸರ್ಕಾರಿ ಶಾಲೆಯೊಂದು ಪ್ರತಿ ವರ್ಷವೂ ಪರರಾಜ್ಯದ ಮಕ್ಕಳಿಗೆ ಕನ್ನಡ ಕಲಿಸುತ್ತದೆ. ಶಿಕ್ಷಕರ ಕಾಳಜಿಯಿಂದಾಗಿ ಬೇರೆ ಬೇರೆ ರಾಜ್ಯದ ಹಲವು ಮಕ್ಕಳು ಈ ಶಾಲೆಗೆ ದಾಖಲಾಗುತ್ತಿದ್ದಾರೆ.
ಕಳೆದ ವರ್ಷ 14 ಮಕ್ಕಳು ಕನ್ನಡ ಕಲಿತಿದ್ದಾರೆ. ಶಾಲೆಯ ಮೆಟ್ಟಿಲೇರಿರುವ ಈ ಮಕ್ಕಳು ಮುದ್ದು ಮುದ್ದಾಗಿ ಕನ್ನಡ ಪದ ಬರೆಯುತ್ತಾರೆ. ಕನ್ನಡ ಪತ್ರಿಕೆಗಳನ್ನು ಇವರು ಸರಾಗವಾಗಿ ಓದುತ್ತಾರೆ. ಕನ್ನಡ ಸಿನಿಮಾಗಳೆಂದರೆ ತಪ್ಪದೇ ನೋಡುತ್ತಾರೆ. ಕುವೆಂಪುರವರ ಪದ್ಯಗಳಿಗೆ ರಾಗ ಸೇರಿಸುತ್ತಾರೆ. ಬೇಂದ್ರೆಯವರ ಗದ್ಯಗಳಿಗೆ ಕಂಠ ನೀಡುತ್ತಾರೆ. ಕನ್ನಡದ ಲೇಖನಗಳನ್ನು ಚೌಕಟ್ಟಾಗಿ ಕತ್ತರಿಸಿ ಜೋಪಾನವಾಗಿರಿಸಿಕೊಳ್ಳುತ್ತಾರೆ. ಕನ್ನಡದ ಹಬ್ಬಗಳಲ್ಲಿ ಭಾಗವಹಿಸಿ ಅಭಿಮಾನವನ್ನು ವ್ಯಕ್ತಪಡಿಸುತ್ತಾರೆ. ಇಷ್ಟು ಮಾತ್ರವಲ್ಲ, ತಮ್ಮ ಪಾಲಕರಿಗೂ ಕನ್ನಡ ಕಲಿಸುತ್ತಿದ್ದಾರೆ. ಸಮಾಜದಲ್ಲಿ ಮಾತ್ರವಲ್ಲದೇ ಮನೆಯಲ್ಲಿಯೂ ಕನ್ನಡ ಮಾತನಾಡುತ್ತಾರೆ.
ಅಲೆಮಾರಿ ಜೀವನ ನಡೆಸಿ ಬದುಕು ಕಟ್ಟಿಕೊಳ್ಳುವ ಒಂದಷ್ಟು ಕುಟುಂಬಗಳು ಕಾರವಾರಕ್ಕೆ ಬಂದಿವೆ. ಆ ಕುಟುಂಬದಲ್ಲಿನ ಕೆಲ ಮಕ್ಕಳು ರಸ್ತೆ ಬದಿ ಆಟವಾಡುತ್ತಿದ್ದನ್ನು ಪೊಲಿಸ್ ಹೆಡ್ಕ್ವಾಟರ್ಸ ಶಾಲಾ ಶಿಕ್ಷಕಿ ಸಂಜಿವಿನಿ ನಾಯ್ಕ ಗಮನಿಸಿದರು. ಮಕ್ಕಳ ಬಗ್ಗೆ ವಿಚಾರಿಸಿದಾಗ ಅವರೆಲ್ಲ ಶಿಕ್ಷಣದಿಂದ ವಂಚಿತರಾಗುತ್ತಿರುವದನ್ನು ಅರಿತು ಮುಖ್ಯಾಧ್ಯಾಪಕಿ ಗೀತಾ ನೇತ್ರೆಕರ್ಗೆ ವಿಷಯ ತಿಳಿಸಿದರು. ಮಕ್ಕಳು ಅನಕ್ಷರತೆಯಲ್ಲಿ ಬದುಕುತ್ತಿರುವ ಸಂಗತಿ ಅಂದಿನ ಶಿಕ್ಷಣಾಧಿಕಾರಿಗಳಿಗೆ ತಲುಪಿತು. ಕರ್ನಾಟಕ ಸರ್ಕಾರದ ಶಿಕ್ಷಣ ನೀತಿಯನ್ನು ಸಮರ್ಫಕವಾಗಿ ಅನುಷ್ಠಾನಗೊಳಿಸಿದ ಇಲಾಖೆ ಅಧಿಕಾರಿಗಳು ಆ ಮಕ್ಕಳನ್ನು ಶಾಲೆಗೆ ಸೇರಿಸಲು ಮುಂದಾದರು.
ಶಿಕ್ಷಕಿ ಸಂಜಿವಿನಿ ನಾಯ್ಕ ಜೊತೆ ಮುಖ್ಯಾಧ್ಯಾಪಕಿ ಗೀತಾ ನೇತ್ರೆಕರ್ ಹಾಗೂ ಸಹ ಶಿಕ್ಷಕರಾದ ಪ್ರೇಮಾ ನಾಯ್ಕ, ಶೋಭಾ ವರ್ಣೆಕರ್, ದೇವಾಂಗಿ ನಾಯ್ಕ ಇನ್ನಿತರರು ಸ್ಥಳೀಯ ಎಸ್.ಡಿ.ಎಂ.ಸಿ ಉಪಾಧ್ಯಕ್ಷ ಮಾರುತಿ ರಾಯ್ಕರ್ ಜೊತೆ ಸೇರಿ ಮಕ್ಕಳ ಪಾಲಕರನ್ನು ಭೇಟಿ ಮಾಡಿದರು. ದಿನವಿಡಿ ಚರ್ಚಿಸಿ ಪಾಲಕರ ಮನವೊಲೈಸಿದರು. ಪಾಲಕರು ಒಪ್ಪದಿದ್ದಾಗ ಮಕ್ಕಳ ಸಂಪೂರ್ಣ ಜವಾಬ್ದಾರಿ ಹೋರುವ ಹೊಣೆಯನ್ನು ಹೊತ್ತರು. ಪಾಲಕರು ಕೂಲಿಗೆ ಹೋಗುವ ಮುನ್ನ ಮಕ್ಕಳನ್ನು ಮನೆಯಿಂದ ಕರೆದೊಯ್ದು ಸಂಜೆ ಪಾಲಕರು ಕೂಲಿ ಮುಗಿಸಿ ಬರುವ ವೇಳೆಗೆ ಅವರನ್ನು ಮನೆಗೆ ಮರಳಿಸುವ ಕೆಲಸವನ್ನು ಶಿಕ್ಷಕರೇ ವಹಿಸಿಕೊಂಡರು. ಅವರಿವರ ಕೈಕಾಲು ಹಿಡಿದು ಮಕ್ಕಳಿಗೆ ಬಟ್ಟೆ ಕೊಡಿಸಿದರು. ಸ್ವಂತ ಖರ್ಚಿನಲ್ಲಿ ಪಠ್ಯ-ಪುಸ್ತಕ ವಿತರಿಸಿದರು. ಸಮವಸ್ತ್ರ ನೀಡಿದರು. ಎಲ್ಲಾ ಮಕ್ಕಳಿಗೂ ಗುರುತಿನ ಪತ್ರ ಮಾಡಿಸಿಕೊಟ್ಟರು. ತಬ್ಬಲಿ ಮಗುವೊಂದಕ್ಕೆ ಪಾಲಕರೂ ಆದರು. ಇದರಿಂದ ಖುಷಿಯಾದ ಮಕ್ಕಳು ನಿತ್ಯ ಶಾಲೆಗೆ ಬರಲಾರಂಭಿಸಿದರು.
ಶಿಕ್ಷಕರ ಈ ಪ್ರಯತ್ನದಿಂದಾಗಿ ಬೇರೆ ರಾಜ್ಯದ ದೀಪಕ್ ಸಾಹಿಬ್ರಾಂ ಮುಕಂಪಲ್ಲಿ (12), ನಾಗೇಶ ಸಾಹಿಬ್ರಾಂ ಮುಕಂಪಲ್ಲಿ (9), ಆರತಿ ಸಾಹಿಬ್ರಾಂ ಮುಕಂಪಲ್ಲಿ (8), ಖಂಡು ಹನುಮಂತ ತಿರುವಡ್ಡ (9), ಬರಸಾದ್ ಚಂದಿದಂಡ (11), ಸವಿತಾ ಮಾರುತಿ ಪವಾರ (9) ಸಂಜನಾ ಸಂಜು ರಾತೋಡ್ (8) ಮಹೇಶ ವಿಜಯ ರೋತಾಡ್ (8) ಎಂಬ ಮಕ್ಕಳು ಕನ್ನಡಿಗರಾದರು. ಇದರೊಂದಿಗೆ ಸಮೀಪ ಇರುವ ಅಂಗನವಾಡಿಯಲ್ಲಿಯೂ ನಾಲ್ವರು ಕನ್ನಡ ಕಲಿತರು.
Leave a Comment