ಕಾರವಾರ: ಮಕ್ಕಳಲ್ಲಿ ಶ್ರದ್ದೆ ಹಾಗೂ ಭಕ್ತಿ ಹುಟ್ಟಿಸಲು ಆದ್ಯಾತ್ಮಿಕ ಚಿಂತನೆಯನ್ನು ಮೈಗೂಡಿಸಿಕೊಳ್ಳುವಂತೆ ಪ್ರೇರೇಪಿಸಬೇಕು ಎಂದು ಎಂದು ಸತ್ಯಸಾಯಿ ಸೇವಾ ಸಮಿತಿಯ ಪ್ರಮುಖ ಮಧುಸುಧನ್ ನಾಯ್ಡು ಹೇಳಿದರು.
ಬೇಳೂರಿನಲ್ಲಿ ಪ್ರಶಾಂತಿ ಬಾಲಮಂದಿರ ಟ್ರಸ್ಟ್ ವತಿಯಿಂದ ನಿರ್ಮಾಣಗೊಳ್ಳುತ್ತಿರುವ ಶ್ರೀ ಸತ್ಯಸಾಯಿ ಸತ್ವನಿಕೇತನಮ್ ಬಾಲಕರ ವಿದ್ಯಾನಿವೇಶನದ ಭೂಮಿ ಪೂಜೆ ನೆರವೆರಿಸಿ ಮಾತನಾಡಿದರು.
ಮಕ್ಕಳಿಗೆ ಓದಲು, ಬರೆಯಲು ಬಂದ ಮಾತ್ರಕ್ಕೆ ವಿದ್ಯಾವಂತರಾಗಲು ಸಾಧ್ಯವಿಲ್ಲ. ಅವರಿಗೆ ಆದ್ಯಾತ್ಮಿಕ ವಿದ್ಯೆಯನ್ನು ಬೋಧಿಸುವುದಲ್ಲಿ ತಮ್ಮನ್ನು ತಾವು ಪರಿವರ್ತಿಸಿಕೊಂಡು ಸಂಸ್ಕಾರಯುತ ಶಿಕ್ಷಣ ಪಡೆಯಲು ಸಾಧ್ಯವಿದೆ. ಚಿಕ್ಕ ವಯಸ್ಸಿನಲ್ಲಿಯೇ ಉನ್ನತವಾದ ನೈತಿಕ ಶಿಕ್ಷಣ ನೀಡಬೇಕು. ಅಂದಾಗ ಅವರು ಪ್ರಬುದ್ಧರಾಗಿ ಸಂಸ್ಕಾರಯುತ ಜೀವನ ನಡೆಸಲು ಸಾಧ್ಯವಿದೆ. ಆದರೆ ಪ್ರಸ್ತುತ ದಿನಗಳಲ್ಲಿ ಮನುಷ್ಯನ ಸ್ವಾರ್ಥ ಭಾವನೆಯು ಆತನ ಅಧಪತನಕ್ಕೆ ಕಾರಣವಾಗುತ್ತಿದೆ. ಮನುಷ್ಯ ಚಂದ್ರಯಾನವನ್ನು ಯಶಸ್ವಿಯಾಗಿ ನಡೆಸುವ ಮಟ್ಟಿಗೆ ಪ್ರಬುದ್ಧನಾಗಿದ್ದರು ತನ್ನ ಆತ್ಮವನ್ನು ಪರಮರ್ಶಿಸುತ್ತಿಲ್ಲ. ಇದೆಲ್ಲವನ್ನು ಸರಿಪಡಿಸಬೇಕಾದಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಅವಶ್ಯಕತೆ ಇದೆ ಎಂದು ಹೇಳಿದರು.
ಶಾಸಕ ಸತೀಶ್ ಸೈಲ್ ಮಾತನಾಡಿ, ಬೇಳೂರು ಸುತ್ತಮುತ್ತಲಿನ ಜಾಗದಲ್ಲಿ ಎಂಜಿನಿಯರಿಂಗ್ ಕಾಲೇಜು ಪ್ರಾರಂಭಿಸಲು ಪ್ರಯತ್ನಿಸಲಾಗಿತ್ತಾದರೂ ಅದು ಸಾಧ್ಯವಾಗಿರಲಿಲ್ಲ. ಆದರೆ ಇದೀಗ ಸತ್ಯ ಸಾಯಿಬಾಬ ಅವರ ಅನುಗ್ರಹದಿಂದ ಬೃಹತ್ ವಿದ್ಯಾಕೇಂದ್ರ ಆರಂಭವಾಗುತ್ತಿರುವ ಈ ಭಾಗದ ಜನರಿಗೆ ಹೆಚ್ಚು ಅನುಕೂಲವಾಗಲಿದೆ. ಈ ಉತ್ತಮ ಕಾರ್ಯಕ್ಕೆ ಅವಶ್ಯವಿರುವ ಎಲ್ಲ ಸೇವೆ ಹಾಗೂ ಸಹಕಾರವನ್ನು ಸದಾ ನೀಡಲು ಸಿದ್ದ ಎಂದು ಹೇಳಿದರು. ಶ್ರೀ ಸತ್ಯಸಾಯಿ ಲೋಕಸೇವಾ ಸಮೂಹ ವಿದ್ಯಾ ಸಂಸ್ಥೆಗಳ ಮಾರ್ಗದರ್ಶಕ ಬಿ.ಎನ್. ನರಸಿಂಹಮೂರ್ತಿ ಮಾತನಾಡಿ, ಶ್ರೀ ಸತ್ಯ ಸಾಯಿಬಾಬಾ ಅವರ ಆಶಿರ್ವಾದದಿಂದ ಬಡ ಹಾಗೂ ಗ್ರಾಮೀಣ ಮಕ್ಕಳಿಗೆ ಉತ್ತಮ ಹಾಗೂ ಸಂಸ್ಕಾರಯುತ ಶಿಕ್ಷಣ ನೀಡುವ ನಿಟ್ಟಿನಲ್ಲಿ ಒಟ್ಟು 23 ಶಾಲೆಗಳನ್ನು ನಡೆಸಲಾಗುತ್ತಿದೆ. ಇದಲ್ಲದೆ ಕಾರವಾರ ಸೇರಿದಂತೆ ಇನ್ನು ನಾಲ್ಕು ಜಿಲ್ಲೆಗಳಲ್ಲಿ ಮುಂಬರು ಶೈಕ್ಷಣಿಕ ವರ್ಷದೊಳಗೆ ಶಾಲೆಗಳನ್ನು ಪ್ರಾರಂಭಿಸುವ ಉದ್ದೇಶದಿಂದ ಎಲ್ಲ ತಯಾರಿ ನಡೆಸಲಾಗಿದೆ. ಗುರುಕುಲ ಮಾದರಿಯ ಮೌಲ್ಯಭರಿತ ಶಿಕ್ಷಣದ ಮೂಲಕ ವಿದ್ಯಾರ್ಥಿಗಳ ಚಾರಿತ್ರ್ಯ ನಿರ್ಮಾಣ ಮಾಡಲು ಶ್ರಮಿಸಲಾಗುತ್ತಿದೆ. ತನ್ಮೂಲಕ ಭಾರತೀಯ ಸಂಸ್ಕøತಿಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಎಲ್ಲ ರೀತಿಯ ಪ್ರಾಮಾಣಿಕ ಪ್ರಯತ್ನ ನಡೆಸಲಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಧಾರವಾಡ ಕ್ಷೇತ್ರದ ಶಾಸಕ ಅರವಿಂದ್ ಬೆಲ್ಲದ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮ್ರಾವ್ ರಾಯ್ಕರ್, ದೆವಳಮಕ್ಕಿ ಗ್ರಾ.ಪಂ ಅಧ್ಯಕ್ಷ ರೋಹಿದಾಸ ಬೇಳೂರಕರ್, ವಿದ್ಯಾ ಸಂಸ್ಥೆ ನಿರ್ಮಾಣಕ್ಕೆ ಭೂಮಿ ದಾನ ಮಾಡಿದ ಅನಂತ ರಾಯ್ಕರ್ ಹಾಗೂ ಸುನಿಲ್ ರಾಯ್ಕರ್, ಮಾಲತಿ, ಸಂಜೀವ, ರಮಾನಂದ, ಮಹೇಂದ್ರ, ರಾಜರಾಮ್ ಇನ್ನಿತರರು ಇದ್ದರು.
Leave a Comment