ಹಳಿಯಾಳ: ಯುವಕರು ರಾಜಕೀಯ ಜ್ಞಾನ ಪಡೆಯುವುದರ ಜೊತೆಗೆ ರಾಜ್ಯದಲ್ಲಿ ನಡೆಯುವ ರಾಜಕೀಯ ಬೆಳವಣಿಗೆಗಳ ಕುರಿತು ಹೆಚ್ಚಿನ ಗಮನ ಹರಿಸಿ ಮುಂದಿನ ದಿನಗಳಲ್ಲಿ ಅಭಿವೃದ್ದಿ ಪರ ಉತ್ತಮರಿಗೆ ಮತದಾನ ಮಾಡುವುದರ ಮೂಲಕ ರಾಜ್ಯದ ಅಭಿವೃದ್ದಿಗೆ ತಮ್ಮ ಅಮೂಲ್ಯ ಮತ ನೀಡಬೇಕೆಂದು ಕೆಪಿಸಿಸಿ ಸದಸ್ಯ ಪ್ರಶಾಂತ ಆರ್ ದೇಶಪಾಂಡೆ ಯುವಕರಿಗೆ ಕರೆ ನೀಡಿದರು. ಪಟ್ಟಣದ ಡಾ. ಬಾಬು ಜಗಜೀವನರಾಮ್ ಸಭಾಭವನದಲ್ಲಿ ನಡೆದ ಬ್ಲಾಕ್ ಕಾಂಗ್ರೇಸ್ ಕಮಿಟಿಯ ಹಳಿಯಾಳ ಮತ್ತು ಜೋಯಿಡಾ ಮತ ಕ್ಷೇತ್ರದ ಯುವ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ರಾಜಕೀಯ ಕ್ಷೇತ್ರವನ್ನು ಪ್ರವೇಶ ಮಾಡುವುದರ ಮೂಲಕ ಮೌಲ್ಯಯುತ ರಾಜಕೀಯಕ್ಕೆ ಮುನ್ನಡೆಯಬೇಕೆಂದ ಅವರು ಅಭಿವೃದ್ದಿಯು ಇಂದಿನ ಚಿಂತನೆಯಾಗಬೇಕಾಗಿದೆ. ಮುಂಬರುವ ದಿನಗಳಲ್ಲಿ ಕಾಂಗ್ರೇಸ್ ಪಕ್ಷವು ಗ್ರಾಮ ಪಂಚಾಯತ, ಜಿಪಂ ಮತ್ತು ಪುರಸಭೆಗಳ ಸ್ಥಾನಗಳಲ್ಲಿ ಶೇ 30 ರಷ್ಟು ಸ್ಥಾನಗಳನ್ನು ಯುವಕರಿಗೆ ಮೀಸಲಿಡಲಾಗುವುದೆಂದರು. ಬಿಜೆಪಿ ಪಕ್ಷವು ಜನರ ಮಧ್ಯೆ ಜಾತಿಯ ವಿಷ ಬೀಜವನ್ನು ಬಿತ್ತುತ್ತಾ ಸಾಗಿದೆ. ಅದನ್ನು ಸಹ ಇಂದಿನ ಯುವಕರ ಅರಿಯಬೇಕಾಗಿದೆ. ಧರ್ಮದ ಬಗ್ಗೆ ಆಸಕ್ತಿ ಇರುವುದರ ಜೊತೆಗೆ ಬೇರೆ ಧರ್ಮದ ಕುರಿತು ಗೌರವನ್ನು ಸಹ ಬೆಳೆಸಿಕೊಳ್ಳಬೇಕಾಗಿದ್ದು, ಬಿಜೆಪಿಯವರು ಹಿಂದೂಧರ್ಮವನ್ನು ಗುತ್ತಿಗೆ ಪಡೆದವರಂತೆ ವರ್ತಿಸುತ್ತಿರುವುದು ದೌರ್ಭಾಗ್ಯದ ಸಂಗತಿ ಎಂದರು. ಯುವ ಮತದಾರರು ಚುನಾವಣೆಯ ಸಮಯದಲ್ಲಿ ಯಾವುದೇ ರೀತಿಯ ಆಶೆ ಆಮಿಷಗಳಿಗೆ ಬಲಿಯಾಗದೇ ತಮ್ಮ ಪವಿತ್ರವಾದ ಮತವನ್ನು ಉತ್ತಮ ಚಾರಿತ್ರ ಮತ್ತು ಅಭಿವೃದ್ದಿಯನ್ನು ಮಾಡುವ ಅಭ್ಯರ್ಥಿಗೆ ನೀಡಬೇಕಾಗಿದೆ. ಕಾಂಗ್ರೇಸ್ ರಾಜ್ಯದಲ್ಲಿ ಮತ್ತೇ ಅಧಿಕಾರಕ್ಕೆ ಬರುವುದರ ಜೊತೆಗೆ ಯುವಕರಿಗಾಗಿ ಹೊಸ ಹೊಸ ಯೋಜನೆಗಳನ್ನು ನೀಡಲಿದೆ ಎಂದರು.ಇದೇ ಸಂದರ್ಭದಲ್ಲಿ ಹಳಿಯಾಳ ದಾಂಡೇಲಿ ಮತ್ತು ಜೋಯಿಡಾಗಳಿಂದ ಆಗಮಿಸಿದ್ದ ಸುಮಾರು ಐದು ನೂರಕ್ಕೂ ಅಧಿಕ ಯುವ ಮತದಾರರ ಜೊತೆ ಸಂವಾಧ ಕಾರ್ಯಕ್ರಮವನ್ನು ನಡೆಸಲಾಯಿತು. ಯುವ ಮತದಾರರ ಕೇಳಿದ ಹಲವಾರು ಪ್ರಶ್ನೆಗಳಿಗೆ ಪ್ರಶಾಂತ ದೇಶಪಾಂಡೆ ಉತ್ತರಿಸಿದರು. ಸಮಾವೇಶದಲ್ಲಿ ಜಿಪಂಉಪಾಧ್ಯಕ್ಷ ಸಂತೋಷರೇಣಕೆ, ಪುರಸಭೆಅಧ್ಯಕ್ಷ ಶಂಕರ ಬೆಳಗಾಂವಕರ, ಬ್ಲಾಕ್ಅಧ್ಯಕ್ಷ ಸುಭಾಶ ಕೋರ್ವೆಕರ, ಎಪಿಎಂಸಿ ಅಧ್ಯಕ್ಷ ಶ್ರೀನಿವಾಸ ಘೋಟ್ನೆಕರ, ಸತ್ಯಜೀತಗಿರಿ, ಉಮೇಶ ಬೋಳಶೆಟ್ಟಿ, ಯುವ ಮುಖಂಡರಾದ ಬಸೀರ್ ಗಿರಿಯಾಲ್, ರಾಜೇಶ ರುದ್ರಪಾಟಿ, ಮಾಲಾ ಬ್ರಿಗಾಂಜಾ, ರವಿ ತೋರಣಗಟ್ಟಿ, ರೋಹನ್ ಬ್ರಿಗಾಂಜಾ, ಅರುಣ ಬೂಬಾಟಿ, ಸುರೇಶ ತಳವಾರ, ಯಶವಂತ ಪಟ್ಟೇಕರ, ಅನಿಲ ಚವ್ಹಾಣ ಇತರರು ಇದ್ದರು.
Leave a Comment