ಹಳಿಯಾಳ :-
ಪಟ್ಟಣದ ಲೋಕೊಪಯೋಗಿ ಪ್ರವಾಸಿ ಮಂದಿರದ ಸಭಾ ಭವನದಲ್ಲಿ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡದವರಿಗೆ ದೌರ್ಜನ್ಯ ಕುರಿತು ಅಹವಾಲು ಸ್ವೀಕಾರ ಸಭೆ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಪೋಲಿಸ್ ವರಿಷ್ಠಾಧಿಕಾರಿ ವೇದಮೂರ್ತಿ ಅಧ್ಯಕ್ಷತೆಯಲ್ಲಿ ನಡೆಯಿತು.
ತಾಲೂಕಾಡಳಿತದ ಅಧಿಕಾರಿಗಳ ಉಪಸ್ಥಿತಿಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಎಸ್ಸಿಎಸ್ಟಿ ಪಂಗಡದ ಹಲವಾರು ಜನರು ತಮ್ಮ ಅಹವಾಲುಗಳನ್ನು, ದೂರುಗಳನ್ನು ವೇದಮೂರ್ತಿ ಅವರಿಗೆ ಸಲ್ಲಿಸಿದರು.
ತಾಲೂಕಿನ ಗೊಲೆಹಳ್ಳಿಯ ಸಮುದಾಯದ ಶಕಿನಾ ಮೌಲಾಲಿಜಮಾದಾರ ಸಿದ್ದಿ, ಫಾತಿಮಾ, ಯಾಸಿನ ನಾಯಕ ಸಿದ್ದಿ ಅವರುಗಳು ಅಹವಾಲು ಸಲ್ಲಿಸಿದರೇ ಸಿದ್ದಿ ಸಮುದಾಯದ ಮುಖಂಡ ಇಮಾಮ ಸಿದ್ದಿ ಸಮುದಾಯದ ನೇತೃತ್ವ ವಹಿಸಿ ಸಮುದಾಯಕ್ಕೆ ಆಗುತ್ತಿರುವ ಸಮಸ್ಯೆಗಳ ಕುರಿತು, ಸರ್ಕಾರದಿಂದ ಜಾರಿ ಆಗಬೇಕಿರುವ ಯೋಜನೆಗಳ ಕುರಿತು ಅಧಿಕಾರಿಯ ಗಮನ ಸೆಳೆದರು.
ಬಳಿಕ ಮಾಧ್ಯಮದವರೊಡನೆ ಮಾತನಾಡಿದ ಎಸ್ಪಿ ವೇದಮೂರ್ತಿ ಅವರು ಎಸ್ಇಪಿಟಿಎಸ್ಪಿ-ಎಸ್ಸಿಎಸ್ಟಿ ಅನುದಾನ ಅನುಷ್ಠಾನ ಆಗಿದೆಯೇ, ಸರಿಯಾಗಿ ಸದ್ಬಳಕೆ ಆಗುತ್ತಿದೆಯೇ ಎಂಬ ಬಗ್ಗೆ ಅಧಿಕಾರಿಗಳಿಂದ ಪ್ರಗತಿ ಪರಿಶೀಲನೆ ನಡೆಸಿರುವುದಾಗಿ ಹೇಳಿ ಸಂಬಂಧ ಪಟ್ಟ ಎಲ್ಲ ಅಧಿಕಾರಿಗಳಿಂದ 3 ವರ್ಷಗಳ ವರದಿಯನ್ನು ಪಡೆಯಲಾಗಿದೆ ಎಂದರು.
ಸುಳ್ಳು ಜಾತಿ ಪ್ರಮಾಣ ಪತ್ರಗಳನ್ನು ನೀಡಿದರೇ ಅಂತಹ ಪ್ರಕರಣ ಬೆಳಕಿಗೆ ಬಂದರೇ ತಹಶೀಲ್ದಾರ್ ಅವರ ಮೇಲೆ ಕ್ರಮ ಕೈಗೊಳ್ಳಲಾಗುತ್ತೆ ಎಂದು ತಿಳಿಸಿದ ಅವರು ಸುಳ್ಳು ಜಾತಿ ನಿಂದನೆ ಪ್ರಕರಣಗಳನ್ನು ದಾಖಲಿಸದಂತೆ ಮನವಿ ಮಾಡಿದರು. ಎಸ್ಸಿಎಸ್ಟಿ ಸಮುದಾಯದವರಿಗೆ ಅಧಿಕಾರಿಗಳಿಂದ ಏನೆ ಸಮಸ್ಯೆಗಳು ಉಂಟಾದಲ್ಲಿ, ದೂರುಗಳು, ಅಹವಾಲುಗಳು ಇದ್ದಲ್ಲಿ ತಮ್ಮ ಮೊಬೈಲ್ 9480806107ಗೆ ನೇರವಾಗಿ ಸಂಪರ್ಕಿಸುವಂತೆ ತಿಳಿಸಿದರು.
ಸಭೆಯ ಬಳಿಕ ಎಸ್ಪಿ ಹಳಿಯಾಳ ಪಟ್ಟಣದ ಬಾಲಕಿಯರ ವಸತಿ ನಿಲಯ, ಜಗಜ್ಜೀವನರಾವ ಭವನಗಳಿಗೆ ಭೆಟಿ ನೀಡಿದರು.
ಈ ಸಂದರ್ಭದಲ್ಲಿ ತಾಪಂ ಅಧಿಕಾರಿ ಲಕ್ಷ್ಮಣರಾವ ಯಕ್ಕುಂಡಿ, ಪಿಡಬ್ಲೂಡಿಯ ಆರ್.ಎಚ್.ಕುಲಕರ್ಣಿ, ಕೆಇಬಿ ಅಧಿಕಾರಿ ರವೀಂದ್ರ ಮೆಟಗುಡ್ಡ, ಸಿಡಿಪಿಓ ಶಾರದಾ, ಎಎಸ್ಐ ಆನಂದ ಪಾವಸ್ಕರ, ಸಮಾಜ ಕಲ್ಯಾಣ ಇಲಾಖೆಯ ಸಾವಕ್ಕಾ ಬನಪ್ಪನವರ, ಕೃಷಿ ಇಲಾಖೆ, ಬಿಇಓ ಇತರರು ಇದ್ದರು.
Leave a Comment