*ಹೊನ್ನಾವರ:* ಕರ್ಕಶ ಸದ್ದು ಮಾಡಿ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುವ ಸೈಲೆನ್ಸರ್ಗಳನ್ನು ಅಳವಡಿಸಿಕೊಂಡಿರುವ ಬೈಕ್ ಸವಾರರ ವಿರುದ್ಧ ಪಟ್ಟಣದ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದ್ದಾರೆ.
ಪಿಎಸ್ಐ ಸಂತೋಷ್ ಕಾಯ್ಕಿಣಿ ನೇತೃತ್ವದ ತಂಡ, ಪಟ್ಟಣದ ಆಯಕಟ್ಟಿನ ಸ್ಥಳಗಳಲ್ಲಿ ವಾಹನಗಳ ತಪಾಸಣೆ ನಡೆಸಿ, ದಿನದಲ್ಲೇ 15ಕ್ಕೂ ಹೆಚ್ಚು ವಾಹನಗಳ ಸೈಲೆನ್ಸರ್ಗಳನ್ನು ಕಿತ್ತು ಹಾಕಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹೊಸ ಬೈಕ್ಗಳು ಮಾರುಕಟ್ಟೆಗೆ ಬರುವಾಗ ನಿಯಮಾನುಸಾರ ಎಲ್ಲ ಮಾರ್ಗದರ್ಶಿಗಳನ್ನು ಪಾಲಿಸಿಕೊಂಡೇ ಬಂದಿರುತ್ತವೆ. ಸೈಲೆನ್ಸರ್ ಫಿಟ್ ಆಗಿಯೇ ಮಾರುಕಟ್ಟೆಗೆ ಬರುತ್ತವೆ. ಆದರೆ, ಅನೇಕ ಸವಾರರು ಉದ್ದೇಶಪೂರ್ವಕವಾಗಿ ಅದನ್ನು ಬದಲಾವಣೆ ಮಾಡಿಸಿಕೊಳ್ಳುತ್ತಾರೆ. ಇದರಿಂದ ಅತಿಯಾದ ಸದ್ದು ಉಂಟಾಗುತ್ತದೆ. ಈ ರೀತಿ ಶಬ್ದ ಮಾಲಿನ್ಯ ಉಂಟು ಮಾಡುತ್ತಿರುವುದು ಅಪರಾಧವಾಗಿದೆ. ಈ ನಿಟ್ಟಿನಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಇನ್ನುಮುಂದೆಯೂ ಮುಂದುವರಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
*ಕಾಲೇಜು ವಿದ್ಯಾರ್ಥಿಗಳಲ್ಲಿ ನಡುಕ:* ಲೈಸೆನ್ಸ್ ಸೇರಿದಂತೆ ಅಗತ್ಯ ದಾಖಲೆಗಳನ್ನು ಹೊಂದಿಲ್ಲದೇ ಬೈಕ್ಗಳನ್ನು ಎಲ್ಲೆಂದರಲ್ಲಿ ಚಲಾಯಿಸಿಕೊಂಡು ಹೋಗುವ ಕಾಲೇಜು ವಿದ್ಯಾರ್ಥಿಗಳಿಗೂ ಪೊಲೀಸರು ನಡುಕ ಹುಟ್ಟಿಸಿದ್ದಾರೆ. ಅಂಥವರ ವಾಹನಗಳ ತಪಾಸಣೆ ನಡೆಸಿ ದಂಡ ವಿಧಿಸಿ ಎಚ್ಚರಿಸಲಾಗುತ್ತಿದೆ.
*ಸಾರ್ವಜನಿಕರಿಂದ ಶ್ಲಾಘನೆ:* ಪಟ್ಟಣದಲ್ಲಿ ವಾಹನಗಳ ಸಂಖ್ಯೆ ದಿನೇದಿನೇ ಹೆಚ್ಚುತ್ತಿತ್ತು. ಅನೇಕರು ಲೈಸೆನ್ಸ್ಗಳನ್ನು ಹೊಂದಿರದೇ ರಸ್ತೆಗಳಲ್ಲಿ ಬೈಕ್ ಚಲಾಯಿಸಿ ಅಪಘಾತಗಳನ್ನು ಉಂಟು ಮಾಡಿರುವ ಘಟನೆಗಳೂ ನಡೆದಿದ್ದವು. ಇದೀಗ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸುತ್ತಿರುವುದರಿಂದ ಕಾನೂನು ಉಲ್ಲಂಘಿಸುವವರಲ್ಲಿ ಭಯ ಹುಟ್ಟಿಸಿದೆ. ಸೂಕ್ತ ದಾಖಲೆಗಳು ಇಲ್ಲದ ಅದೆಷ್ಟೊ ವಾಹನಗಳು ಇದೀಗ ಬೀದಿಗೆ ಇಳಿಯುತ್ತಿಲ್ಲ. ಇದರಿಂದಾಗಿ ಪಟ್ಟಣದಲ್ಲಿ ವಾಹನಗಳ ಸಂಚಾರ ಸರಾಗವಾಗಿ ನಡೆಯುವಂತಾಗಿದೆ ಎಂದು ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.
Leave a Comment