
ಸಿದ್ದಾಪುರ :-
ರಸ್ತೆಯ ತುಂಬೆಲ್ಲ ಗುಂಡಿಗಳು ಹೊಂಡ ತಪ್ಪಿಸಲು ವಾಹನ ಸವಾರರ ಪರದಾಟ,
ದ್ವಿಚಕ್ರ ವಾಹನ ಸವಾರರಂತು ಪ್ರಾಣವನ್ನು ಕೈಯಲ್ಲಿ ಹಿಡಿದು ಸವಾರಿ ಮಾಡುವ ಕಠಿಣ ಸ್ಥಿತಿ. ರಸ್ತೆಗೆ ಬಂದವರು ಮನೆಗೆ ಸರಿಯಾಗಿ ತಲುಪುವ ಗ್ಯಾರಂಟಿ ಇಲ್ಲ, ಇದು ಸಿದ್ದಾಪುರ-ಕುಮಟಾ ರಸ್ತೆಯ ಸದ್ಯದ ದುಸ್ಥಿತಿಯ ಚಿತ್ರಣ.
ಸಿದ್ದಾಪುರ-ಕುಮಟಾ ರಸ್ತೆಯಲ್ಲಿ ಸಿದ್ದಾಪುರದಿಂದ ದೊಡ್ಮನೆ ಘಟ್ಟದವರೆಗೆ ಸಿದ್ದಾಪುರ ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಗೆ ಬರುತ್ತದೆ. ಈ ರಸ್ತೆಯಲ್ಲಿ ಬಹುತೇಕ ಕಡೆಗಳಲ್ಲಿ ಗುಂಡಿಗಳೆ ತುಂಬಿ ಹೋಗಿದ್ದು ರಸ್ತೆ ಸಂಪೂರ್ಣ ಹದಗೆಟ್ಟು ನಿಂತಿದೆ.

ಗುಂಡಿಗಳ ದರ್ಬಾರ ಅಧಿಕಾರಿಗಳು ಫೇಲ್ :-
ಪ್ರತಿ ವರ್ಷ ಅಕ್ಟೊಬರ್-ನವಂಬರ್ ತಿಂಗಳಲ್ಲಿ ಗುಂಡಿ ಮುಚ್ಚುವ ಕೆಲಸ ಪುರ್ಣಗೊಳ್ಳುತಿತ್ತು ಆದರೆ ಈ ವರ್ಷ ಡಿಸೆಂಬರ್ ತಿಂಗಳು ಮುಗಿಯುತ್ತ ಬಂದರು ಗುಂಡಿ ಮುಚ್ಚುವ ಕೆಲಸ ಪ್ರಾರಂಭವಾಗಿಲ್ಲದಿರುವುದು ಅಧಿಕಾರಿಗಳ ನಿರ್ಲಕ್ಷ ಹಾಗೂ ಜನಪ್ರತಿನಿಧಿಗಳ ಇಚ್ಚಾಶಕ್ತಿಯ ಕೊರತೆಯನ್ನು ತೋರಿಸುತ್ತದೆ.
ಬೇಡ್ಕಣಿ, ಬಿಳಗಿ, ಕ್ಯಾದಗಿ, ವಂದಾನೆ, ದೊಡ್ಮನೆ ಊರುಗಳನ್ನು ಹಾದು ಹೋಗುವ ಈ ರಸ್ತೆಯು ಇಟಗಿ, ಲಂಬಾಪುರ, ಸೋವಿನಕೊಪ್ಪ, ಹಾವಿನಬೀಳು ಹೀಗೆ ಹಲವಾರು ಊರುಗಳಿಗೆ ಸಂಪರ್ಕ ರಸ್ತೆಯನ್ನು ಹೊಂದಿದೆ. ಇಲ್ಲಿಯ ಜನ ಪಟ್ಟಣಕ್ಕೆ ಬರಲು ಈ ರಸ್ತೆಯನ್ನೆ ಬಳಸುತ್ತಾರೆ.
ಪ್ರಯಾಣ – ನಿತ್ಯ ನರಕದ ಅನುಭವ:-
ಅಲ್ಲದೆ ಪ್ರಸಿದ್ದ ಯಾತ್ರಾ ಸ್ಥಳಗಳಾದ ಬಿಳಗಿ, ಭುವನಗಿರಿ ಹಾಗೂ ಪ್ರವಾಸಿ ತಾಣವಾದ ಬುರಡೆ ಫಾಲ್ಸ್ ಗಳಿಗೆ ಈ ರಸ್ತೆಯ ಮೂಲಕವೆ ಯಾತ್ರಾರ್ಥಿಗಳು ಮತ್ತು ಪ್ರವಾಸಿಗರು ಪ್ರಯಾಣಿಸುತ್ತಾರೆ. ಬೇಡ್ಕಣಿ ಕಾಲೇಜ್ ಮತ್ತು ಬಿಳಗಿ ಕಾಲೇಜಿನ ಸಾವಿರಾರು ವಿಧ್ಯಾರ್ಥಿಗಳು ಇಲ್ಲಿಯೆ ಸಾಗಬೇಕು. ದಿನಕ್ಕೆ ಸಾವಿರಾರು ವಾಹನಗಳು ಸಂಚರಿಸುವ ಈ ರಸ್ತೆಯಲ್ಲಿ ವಿಧ್ಯಾರ್ಥಿಗಳು, ರೋಗಿಗಳು, ಗರ್ಭಿಣಿ ಸ್ತ್ರೀಯರು, ಹೀಗೆ ಎಲ್ಲಾ ಸವಾರರು ನಿತ್ಯ ನರಕ ಅನುಭವಿಸುತ್ತಿದ್ದಾರೆ.

ಗುಂಡಿ ಮುಚ್ಚಿ ಇಲ್ಲವೇ ಪ್ರತಿಭಟನೆ ಎದುರಿಸಿ ;-
ಲೋಕೋಪಯೋಗಿ ಇಲಾಖೆಗೆ ಸಮಸ್ಯೆ ಸರಿಪಡಿಸುವಂತೆ ಹಲವಾರು ಬಾರಿ ಮನವಿ ನೀಡಲಾಗಿದೆ. ಆದರೆ ಅಧಿಕಾರಿಗಳು ಇತ್ತ ಗಮನಹರಿಸುತ್ತಿಲ್ಲ. ಕೂಡಲೆ ಸೂಕ್ತ ಕ್ರಮ ವಹಿಸಿ ರಸ್ತೆಯ ಮೇಲಿನ ಈ ಗುಂಡಿಗಳನ್ನು ಮುಚ್ಚಿ ಸಾರ್ವಜನಿಕರು, ಯಾತ್ರಾರ್ಥಿಗಳು, ಪ್ರವಾಸಿಗಳು, ರೋಗಿಗಳು ಹಾಗೂ ವಿಧ್ಯಾರ್ಥಿಗಳಿಗೆ ಆಗುತ್ತಿರುವ ಸಮಸ್ಯೆಯನ್ನು ಸರಿಪಡಿಸದಿದ್ದರೆ ಪ್ರತಿಭಟನೆ ನಡೆಸುವದಾಗಿ ಸ್ಥಳಿಯರು ಎಚ್ಚರಿಸಿದ್ದಾರೆ.




Leave a Comment