
ಬಗ್ಗೋಣದಲ್ಲಿ ನಿರ್ಮಾಣಗೊಳ್ಳಲಿರುವ ಒಳಚರಂಡಿ ಘಟಕವನ್ನು ವಿರೋಧಿಸಿ ಹಾಗೂ ಸ್ಥಳೀಯ ಹಲವು ಸಮಸ್ಯೆಗಳಿಗೆ ಪರಿಹಾರ ಒದಗಿಸುವಂತೆ ಒತ್ತಾಯಿಸಿ ಪುರಸಭೆ ವ್ಯಾಪ್ತಿಯ ಬಗ್ಗೋಣ ಗ್ರಾಮಸ್ಥರು ಭಾನುವಾರ ಪ್ರತಿಭಟನೆ ನಡೆಸಿ, ಬರುವ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ನಿರ್ಧರಿಸಿದರು.
ಸ್ಥಳೀಯ ಗ್ರಾಮಸ್ಥರಿಗೆ ಸರಿಯಾದ ಮಾಹಿತಿಯನ್ನು ನೀಡದೆ, ಕುಮಟಾ ಪುರಸಭೆ ವ್ಯಾಪ್ತಿಯ ಕೊಳಚೆ ನೀರಿನ ಶುದ್ಧಿಕರಣ ಘಟಕವನ್ನು ಬಗ್ಗೋಣದಲ್ಲಿ ನಿರ್ಮಿಸಲು ಸರ್ಕಾರ ಮುಂದಾಗಿದೆ. ಇದರಿಂದಾಗಿ ಕುಡಿಯಲೂ ನೀರಿಲ್ಲದೆ ಸುತ್ತಮುತ್ತಲಿನ ಸುಮಾರು ೬೦೦ ಕುಟುಂಬಗಳು ಈ ಸ್ಥಳವನ್ನು ಬಿಡಬೇಕಾದ ಪ್ರಸಂಗ ಎದುರಾಗುತ್ತದೆ. ೨೦೧೨ರಿಂದ ಈ ವಿಷಯಕ್ಕೆ ಸಂಬಂಧಿಸಿದಂತೆ ಎಸಿ, ಡಿಸಿ, ಉಸ್ತುವಾರಿ ಸಚಿವರು ಸೇರಿದಂತೆ ಬೆಂಗಳೂರು ಅಧೀನ ಕಾರ್ಯರ್ಶಿಯವರೆಗೂ ಮನವಿಯನ್ನು ನೀಡಿದ್ದೇವೆ. ಏಕಮುಖದ ನಿರ್ಧಾರವನ್ನು ಹೊರತುಪಡಿಸಿ, ಸರಿಯಾದ ಉತ್ತರ ಸ್ಥಳೀಯರಿಗೆ ದೊರೆತಿಲ್ಲ. ಇಲ್ಲಿನ ಜನತೆ ಇಷ್ಟೊಂದು ಹತಾಶರಾಗಲು ಸರ್ಕಾರವೇ ಕಾರಣ. ನಮ್ಮ ಸಮಸ್ಯೆಗೆ ಸ್ಫಂದನೆ ದೊರೆಯದಿದ್ದಾಗ ಪ್ರಜಾಪ್ರಭುತ್ವದ ಅತೀದೊಡ್ಡ ಹಕ್ಕಾದ ಮತದಾನವನ್ನು ಬಹಿಷ್ಕರಿಸುವ ನಿರ್ಧಾರ ಕೈಗೊಂಡಿದ್ದೇವೆ. ನಾವು ಇಲ್ಲಿನ ಪ್ರಜೆಗಳಲ್ಲ ಎಂದು ಭಾವಿಸಿಬಿಡಿ ಎಂದು ಸ್ಥಳೀಯ ನಿವಾಸಿ ಗೋಪಾಲಕೃಷ್ಣ ಉಗ್ರ ತಿಳಿಸಿದರು.
ನಂತರ ಸವಿತಾ ಮುಕ್ರಿ ಮಾತನಾಡಿ, ಒಳಚರಂಡಿ ಘಟಕದಿಂದ ಇಲ್ಲಿನ ಪರಿಸರಕ್ಕೆ ಹಲವು ದುಷ್ಪರಿಣಾಮಗಳು ಎದುರಾಗುತ್ತದೆ ಎಂಬ ವಿಷಯ ತಿಳಿದರೂ ಸಹ ಅಧಿಕಾರಿಗಳು ಈ ಕಾರ್ಯಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ. ಕೂಲಿಮಾಡಿ ಬದುಕುವ ಎಸ್‌ಸಿ ಕುಟುಂಬದವರೇ ಹೆಚ್ಚಾಗಿರುವ ಈ ಸ್ಥಳದಲ್ಲಿ ಇಂತಹ ಯೋಜನೆಯನ್ನು ರೂಪಿಸಿದರೆ ಬದುಕುವುದಾದರೂ ಹೇಗೆ. ಇದು ಭರತ ಇಳಿತದ ಪ್ರದೇಶವಾದ್ದರಿಂದ ಕುಡಿಯಲೂ ನೀರಿಲ್ಲದಂತಾಗುತ್ತದೆ. ಇಷ್ಟೊಂದು ಸಮಸ್ಯೆಗಳಿದ್ದರೂ ಸರ್ಕಾರ ಮಾತ್ರ ಇಲ್ಲಿಯೇ ಘಟಕ ನಿರ್ಮಾಣಕ್ಕೆ ಮುಂದಾಗಿದೆ. ಒಂದು ವೇಳೆ ಘಟಕ ನಿರ್ಮಿಸುವುದೇ ಆದರೆ ಇಲ್ಲಿನ ಗ್ರಾಮಸ್ಥರಿಗೆ ವಿಷಕೊಟ್ಟು ಕೊಂದುಬಿಡಿ ಎಂದರು.
ಶಾಂತಿ ಪ್ರಕಾಶ ಮುಕ್ರಿ ಮಾತನಾಡಿ, ಬಲತ್ಕಾರಯುತವಾಗಿ ಗ್ರಾಮಸ್ಥರಿಂದ ಸಹಿಪಡೆದು ಸರ್ಕಾರ ಒಳಚರಂಡಿ ಘಟಕವನ್ನು ನಿರ್ಮಿಸಲು ಮುಂದಾಗಿದೆ. ಗ್ರಾಮಸ್ಥರು ಮೂಲಭೂತ ಸೌಕರ್ಯ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಒಳಚರಂಡಿ ಘಟಕ ಹೊರತುಪಡಿಸಿ ಅದ್ಯಾವುದು ಸರ್ಕಾರದ ಕಣ್ಣಿಗೆ ಕಾಣುವುದಿಲ್ಲ. ಈ ಕುರಿತು ಹಲವು ಬಾರಿ ಪ್ರತಿಭಟನೆ ನಡೆಸಿ, ಸಂಬಂಧಪಟ್ಟವರಿಗೆ ಮನವಿಯನ್ನು ನೀಡಲಾಗಿದೆ. ನಮ್ಮ ಸಮಸ್ಯೆಗೆ ಪುರಸಭೆಯಾಗಲಿ, ಜನಪ್ರತಿನಿಧಿಯಾಗಲಿ ಉತ್ತರ ನೀಡಿಲ್ಲ. ಇದರಿಂದ ಬೇಸತ್ತು ಗ್ರಾಮಸ್ಥರೆಲ್ಲರೂ ಸೇರಿ ಚುನಾವಣೆ ಬಹಿಷ್ಕಾರಕ್ಕೆ ಮುಂದಾಗಿದ್ದೇವೆ ಎಂದರು.
ಪ್ರತಿಭಟನೆಯಲ್ಲಿ ರಾಜೇಶ ಮುಕ್ರಿ, ಮಂಜುನಾಥ ಮುಕ್ರಿ, ಸಾರಂಗ ಮುಕ್ರಿ, ನಾರಾಯಣ ಮುಕ್ರಿ, ರಾಮಚಂದ್ರ, ಮಂಜುನಾಥ ಎಚ್, ವೆಂಕಟ್ರಮಣ ಭಟ್ಟ, ಉದಯ ಪಂಡಿತ, ಗಂಗೂ ಮುಕ್ರಿ, ಲತಾ ಮುಕ್ರಿ, ಜಗದೀಶ ಹೆಗಡೆ ಸೇರಿದಂತೆ ನೂರಾರು ಗ್ರಾಮಸ್ಥರಿದ್ದರು.
ವಿಧಾನಸಭಾ ಚುನಾವಣೆಗೂ ಮುನ್ನ ಶಾಸಕ ದಿನಕರ ಶೆಟ್ಟಿಯವರು ನನ್ನನ್ನು ಆರಿಸಿ ತಂದಲ್ಲಿ ಬಗ್ಗೋಣ ಗ್ರಾಮದಲ್ಲಿ ನಿರ್ಮಾಣಗೊಳ್ಳಲಿರುವ ಒಳಚರಂಡಿ ಘಟಕವನ್ನು ರದ್ಧುಪಡಿಸುವುದಾಗಿ ತಿಳಿಸಿದ್ದರು. ಜನಪ್ರತಿನಿಧಿಯಾದ ಬಳಿಕ ನಮ್ಮ ಸಮಸ್ಯೆಗೆ ಉತ್ತರಿಸುತ್ತಿಲ್ಲ. ಶಾಸಕರು ಮನಸು ಮಾಡಿದರೆ ಒಳಚರಂಡಿ ಘಟಕ ರದ್ಧಾಗುವುದರಲ್ಲಿ ಸಂಶಯವಿಲ್ಲ ಎಂದು ಗಣೇಶ ಭಟ್ಟ ಬಗ್ಗೋಣ ತಿಳಿಸಿದರು.
Leave a Comment