ಹಳಿಯಾಳ:- ರೈತನೊರ್ವನಿಂದ ಪೊಡಿ (ವಾಟ್ನಿ) ಪ್ರಕರಣದಲ್ಲಿ ಲಂಚ ಪಡೆಯುತ್ತಿದ್ದ ತಾಲೂಕಿನ ತತ್ವಣಗಿ ಗ್ರಾಮ ಲೆಕ್ಕಾಧಿಕಾರಿ (ಶಾನಭೊಗ) ಗಿರಿಶ ರಣದೇವ ನನ್ನು ಕಾರವಾರದ ಎಸಿಬಿ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದು ತಮ್ಮ ವಶಕ್ಕೆ ಪಡೆದಿದ್ದಾರೆ.
ಹಳಿಯಾಳದ ತತ್ವಣಗಿ ಗ್ರಾಮದ ಭಿಮರಾವ ರಾಯಪ್ಪಾ ಕುರುಬರ ಎನ್ನುವ ಬಡ ರೈತ ತನ್ನ ಹೊಲದ ಪೊಡಿ( ವಾಟ್ನಿ) ಪ್ರಕರಣ ತೆಗೆದುಕೊಂಡು ಗಿರೀಶ ಹತ್ತಿರ ತೆರಳಿದಾಗ ಗಿರೀಶ ೫೦೦೦ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
೫೦೦೦ ರೂನಲ್ಲಿ ಒಂದೂ ರೂಪಾಯಿ ಕೂಡ ಕಡಿಮೆ ಆಗುವುದಿಲ್ಲ ೪ ಟೇಬಲ್ ಗೆ ಹಣ ನೀಡಬೇಕು ಎಂದು ತನ್ನ ಲಂಚಾವತಾರದ ಬಗ್ಗೆ
ರೈತ ಭಿಮರಾವ ಹತ್ತಿರ ಎಳೆ ಎಳೆಯಾಗಿ ಹೇಳಿದ್ದನೆಂದು ರೈತ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಗ್ರಾಮ ಲೆಕ್ಕಾಧಿಕಾರಿಯ ಭ್ರಷ್ಟಾಚಾರದ ನಡೆಯಿಂದ
ರೋಸಿಹೊದ ರೈತ ಭೀಮರಾವ ಕಾರವಾರದ ಎಸಿಬಿ ಅಧಿಕಾರಿಗಳಿಗೆ ಲಿಖಿತ ದೂರು ನೀಡಿದ್ದರು.
ಜಿಲ್ಲಾ ಕೇಂದ್ರ ಕಾರವಾರದ ಎಸಿಬಿ ಇಲಾಖೆ ಡಿವೈಎಸ್ಪಿ ಗಿರಿಶ ಅವರ ನೇತೃತ್ವದ ಸುಮಾರು ೭ ಕ್ಕೂ ಹೆಚ್ಚು ಅಧಿಕಾರಿಗಳ ತಂಡವು ಗುರುವಾರ ೧೨ ಗಂಟೆ ಸುಮಾರಿಗೆ ಹಳಿಯಾಳದ ಮಿನಿ ವಿಧಾನ ಸೌಧದಲ್ಲಿರುವ ತಹಶೀಲ್ದಾರ್ ಕಚೇರಿಯ ಗ್ರಾಮ ಲೆಕ್ಕಾಧಿಕಾರಿಗಳ ಕೊಠಡಿಯಲ್ಲಿ
ದಾಳಿ ನಡೆಸಿ ಗ್ರಾಮ ಲೆಕ್ಕಾಧಿಕಾರಿ ಗಿರಿಶ ಹಣ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದು ತಮ್ಮ ವಶಕ್ಕೆ ಪಡೆದಿದ್ದಾರೆ.
ಎಸಿಬಿ ಅಧಿಕಾರಿಗಳು ಭ್ರಷ್ಟ ಅಧಿಕಾರಿಯ ವಿಚಾರಣೆ ನಡೆಸುತ್ತಿದ್ದಾರೆ.


Leave a Comment