
ಖಾನಾಪುರ: ಕ್ಷೇತ್ರದ ಶಾಸಕಿ ಡಾ.ಅಂಜಲಿ ನಿಂಬಾಳಕರ ಅವರು ತಮ್ಮ ಪಟ್ಟಣದ ದುರ್ಗಾನಗರದ ನಿವಾಸವನ್ನು ಸ್ವಚ್ಛಗೊಳಿಸಲು ಸ್ಥಳೀಯ ಪಟ್ಟಣ ಪಂಚಾಯ್ತಿಯ ಪೌರಕಾರ್ಮಿಕರ ಸೇವೆಯನ್ನು ಪಡೆದಿದ್ದು, ಅವರ ಮನೆಯಲ್ಲಿದ್ದ ಹೂಳು ಮತ್ತು ಕೊಳಕು ತೆರವುಗೊಳಿಸಲು ಅಗ್ನಿಶಾಮಕ ವಾಹನಗಳನ್ನು ಬಳಸಿದ್ದಾರೆ ಎಂದು ತಾಲೂಕಿನ ಬಿಜೆಪಿ ಮತ್ತು ಎಂಇಎಸ್ ಪಕ್ಷಗಳು ಆರೋಪಿಸಿವೆ.
ಕಳೆದ ಆ.7 ಮತ್ತು 8ರಂದು ಪಟ್ಟಣದಲ್ಲಿ ಸುರಿದ ಮಳೆ ಮತ್ತು ಕುಂಬಾರ ಹಳ್ಳದ ಪ್ರವಾಹದಿಂದಾಗಿ ದುರ್ಗಾನಗರ ಬಡಾವಣೆಯ ಶಾಸಕರ ಮನೆ ಸಂಪೂರ್ಣ ಜಲಾವೃತಗೊಂಡಿತ್ತು. ಮನೆಯ ಕೆಳಮಹಡಿ ಪೂರ್ಣ ನೀರಲ್ಲಿ ಮುಳುಗಿತ್ತು ಮತ್ತು ಮೊದಲ ಮಹಡಿಯಲ್ಲಿ ಕೆಲ ಅಡಿಗಳವರೆಗೆ ನೀರು ನಿಂತಿತ್ತು. ಹೀಗಾಗಿ ಇದನ್ನು ತೆರವುಗೊಳಿಸಿ ಮನೆಯನ್ನು ಸ್ವಚ್ಛಗೊಳಿಸಲು ಶನಿವಾರ ಮತ್ತು ಭಾನುವಾರ ಪಟ್ಟಣ ಪಂಚಾಯ್ತಿಯ 20 ಪೌರ ಕಾರ್ಮಿಕರನ್ನು ನಿಯೋಜಿಸಲಾಗಿದೆ. ಅಗ್ನಿಶಾಮಕದ ಎರಡು ವಾಹನಗಳು ಕಟ್ಟಡ ಸ್ವಚ್ಛತೆಗೆ ಬಳಕೆಯಾಗಿವೆ. ತಾಲೂಕಿನಲ್ಲಿ ಸಧ್ಯ ಪ್ರವಾಹ ಪರಿಸ್ಥಿತಿಯಿಂದ ಜನರು ಕಂಗಾಲಾಗಿದ್ದು, ಜನರಿಗೆ ಸಾಂತ್ವನ ಹೇಳಬೇಕಾದ ಜನಪ್ರತಿನಿಧಿಗಳು ಸರ್ಕಾರಿ ಸೇವೆಯನ್ನು ತಮ್ಮ ವೈಯುಕ್ತಿಕ ಕೆಲಸಗಳಿಗಾಗಿ ಬಳಸಿಕೊಂಡಿದ್ದು ಎಷ್ಟರಮಟ್ಟಿಗೆ ಸರಿ ಎಂದು ತಾಲೂಕಿನ ಉಭಯ ಪಕ್ಷಗಳ ಮುಖಂಡರು ಪ್ರಶ್ನಿಸಿದ್ದಾರೆ.
ಕಳೆದ ವಾರದ ಮಳೆಗೆ ದುರ್ಗಾನಗರ ಪ್ರದೇಶದಲ್ಲಿ ಪ್ರವಾಹಕ್ಕೆ ಸಿಲುಕಿ ನೂರಾರು ಮನೆಗಳು ಜಲಾವೃತಗೊಂಡಿದ್ದವು. ಇದುವರೆಗೂ ಈ ಭಾಗದಲ್ಲಿ 19 ಮನೆಗಳು ಧರೆಗುರುಳಿವೆ. ಇಂತಹ ಸಂದರ್ಭದಲ್ಲಿ ನೊಂದವರಿಗೆ ಧೈರ್ಯ ತುಂಬುವ ಕೆಲಸವನ್ನು ಮರೆತ ಪಟ್ಟಣ ಪಂಚಾಯ್ತಿಯ ಅಧಿಕಾರಿಗಳು ಶಾಸಕರ ಮನವೊಲಿಸುವ ನಿಟ್ಟಿನಲ್ಲಿ ತನ್ನ ಕೂಲಿ ಕಾರ್ಮಿಕರ ಮೂಲಕ ಅವರ ಮನೆ ಸ್ವಚ್ಛಗೊಳಿಸಿದ್ದಾರೆ ಇದಕ್ಕೆ ಪಟ್ಟಣದ ದುರ್ಗಾನಗರ ನಿವಾಸಿಗಳು ಪ್ರತ್ಯಕ್ಷ ಸಾಕ್ಷಿಯಾಗಿದ್ದಾರೆ ಎಂದು ಹೆಸರು ಬಹಿರಂಗಪಡಿಸಲಿಚ್ಛಿಸದ ತಾಲೂಕಿನ ಮಾಜಿ ಜನಪ್ರತಿನಿಧಿಯೊಬ್ಬರು ದೂರಿದ್ದಾರೆ.
ಈ ವಿಷಯವಾಗಿ ಪ್ರತಿಕ್ರಿಯೆ ನೀಡಿರುವ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಬಿ.ಎಂ ಮಾನೆ, ಶನಿವಾರ ಮತ್ತು ಭಾನುವಾರ ಸರ್ಕಾರಿ ರಜೆ ಇದ್ದ ಕಾರಣ ಶಾಸಕರ ಮನೆಗೆ ತಮ್ಮ ಕಚೇರಿಯ ಪೌರ ಕಾರ್ಮಿಕರು ಹೋಗಿ ಸ್ವಚ್ಛತಾ ಕೆಲಸ ಮಾಡಿದ್ದಾರೆ. ಆದರೆ ಅವರಿಗೆ ಪಟ್ಟಣ ಪಂಚಾಯ್ತಿಯಿಂದ ಸಂಬಳ ಕಡಿತಗೊಳಿಸಿ ಶಾಸಕರ ಕಡೆಯಿಂದ ಪಾವತಿಸಲಾಗುತ್ತದೆ. ರಜಾ ದಿನಗಳಂದು ಪೌರ ಕಾರ್ಮಿಕರು ಎಲ್ಲಿಗೆ ಬೇಕಾದರೂ ಹೋಗಿ ಕೆಲಸ ಮಾಡಬಹುದು ಎಂದಿದ್ದಾರೆ. ಪಟ್ಟಣ ಪಂಚಾಯ್ತಿ ಆಡಳಿತಾಧಿಕಾರಿಯೂ ಆಗಿರುವ ತಹಸೀಲ್ದಾರ್ ಶಿವಾನಂದ ಉಳ್ಳೇಗಡ್ಡಿ ಈ ವಿಷಯವಾಗಿ ಮಾತನಾಡಿ, ಶಾಸಕರ ಮನೆ ಸ್ವಚ್ಛಗೊಳಿಸಲು ಪಪಂ ಕಾರ್ಮಿಕರನ್ನು ಮತ್ತು ಅಗ್ನಿ ಶಾಮಕ ವಾಹನಗಳನ್ನು ಬಳಸಿಕೊಂಡ ಬಗ್ಗೆ ತಮಗೆ ಮಾಹಿತಿಯಿಲ್ಲ. ಈ ವಿಷಯವಾಗಿ ಎರಡೂ ಕಚೇರಿಗಳಿಂದ ಮಾಹಿತಿ ಪಡೆದು ಪ್ರತಿಕ್ರಿಯೆ ನೀಡುವುದಾಗಿ ಹೇಳಿದ್ದಾರೆ.
ಒಟ್ಟಾರೆ ಕ್ಷೇತ್ರದ ಸಂತ್ರಸ್ತರಿಗೆ ಸಾಂತ್ವನ ಹೇಳಬೇಕಾದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ತಮ್ಮ ಸ್ವಾರ್ಥಕ್ಕಾಗಿ ಸರ್ಕಾರಿ ಸೇವೆಯನ್ನು ಬಳಸಿಕೊಂಡಿರುವ ಬಗ್ಗೆ ತಾಲೂಕಿನಾದ್ಯಂತ ಚರ್ಚೆ ನಡೆದಿದೆ. ಈ ಬಗ್ಗೆ ಜಿಲ್ಲಾಡಳಿತ ನಿಷ್ಪಕ್ಷಪಾತ ತನಿಖೆ ನಡೆಸಿ ನಿಜಾಂಶವನ್ನು ಜನರ ಮುಂದಿಡುವ ಅವಶ್ಯಕತೆಯಿದೆ.
Leave a Comment