
ಹಳಿಯಾಳ:- ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯಿಂದ ಪ್ರವಾಹ ಉಂಟಾಗಿ ಆಗಿರುವ ನಷ್ಟದ ಕುರಿತು ಜಿಲ್ಲಾದ್ಯಂತ ಸಮೀಕ್ಷೆ ನಡೆಸಲಾಗುತ್ತಿದೆ. ಸದ್ಯ ದುರಸ್ಥಿ ಕಾರ್ಯಕ್ಕೆ ಜಿಲ್ಲೆಗೆ 10 ಕೋಟಿ ರೂ. ತಕ್ಷಣಕ್ಕೆ ಮುಂಗಡ ಹಣ ಬಿಡುಗಡೆಯಾಗಿದ್ದು ಮುಂದಿನ ದಿನಗಳಲ್ಲಿ ದೊಡ್ಡ ಮೊತ್ತದ ಪರಿಹಾರ ಜಿಲ್ಲೆಗೆ ದೊರೆಯಲಿದೆ ಎಂದು ಸಂಸದ ಅನಂತಕುಮಾರ ಹೆಗಡೆ ಭರವಸೆ ನೀಡಿದರು.
ನೆರೆಹಾವಳಿಯಿಂದ ಹಳಿಯಾಳದಲ್ಲಿ ಉಂಟಾದ ಹಾನಿಯ ಕುರಿತು ಪರಿಶೀಲನೆ ನಡೆಸಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗೊಷ್ಠೀಯಲ್ಲಿ ಅವರು ಮಾತನಾಡಿದರು.
ನೆರೆ ಸಂತ್ರಸ್ಥರಿಗೆ ಹೆಚ್ಚಿನ ಪರಿಹಾರ ಒದಗಿಸುವಲ್ಲಿ ಸರ್ಕಾರ ಕೆಲಸ ಮಾಡುತ್ತಿದೆ. ಈಗಾಗಲೇ ಜಿಲ್ಲೆಯಲ್ಲಿ ಮಳೆಯಿಂದ ಮನೆಗಳಿಗೆ ಹಾನಿ ಅನುಭವಿಸಿದ 60-70ಶೇ. ಜನಕ್ಕೆ ಪರಿಹಾರದ ಹಣ ನೀಡಲಾಗಿದೆ. ನೇರವಾಗಿ ಆರ್ಟಿಜಿಎಸ್ ಮೂಲಕ ಅವರ ಖಾತೆಗೆ ಹಣ ಜಮಾ ಮಾಡಲಾಗುತ್ತಿದ್ದು 2 ದಿನಗಳಲ್ಲಿ ಉಳಿದವರಿಗೂ ಪರಿಹಾರದ ಹಣ ಸಿಗಲಿದೆ ಎಂದರು.
ಇನ್ನೂ ಯಾರು ಸಂಪೂರ್ಣ ಮನೆಯನ್ನು ಕಳೆದುಕೊಂಡಿದ್ದಾರೋ ಅವರಿಗೆ ಮಾನವೀಯ ನೆಲೆಯ ಮೇಲೆ ಅವರು ಮನೆ ಕಟ್ಟಿಕೊಳ್ಳುವವರೆಗೆ ಭಾಡಿಗೆ ಮನೆಯಲ್ಲಿ ನೆಲೆಸುವಂತೆ ಅದರ ಭಾಡಿಗೆ ಸರ್ಕಾರವೇ ಭರಿಸಲಿದೆ ಅಲ್ಲದೇ ಆಹಾರ ಕಿಟ್ ಅವರಿಗೆ ನೀಡುವ ಮೂಲಕ ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಇಂತಹ ನಿರ್ಣಯ ಕೈಗೊಳ್ಳಲಾಗಿದೆ ಎಂದರು.
ಮನೆ, ಜಾಗ ಸರ್ವಸ್ವವನ್ನು ಕಳೆದುಕೊಂಡ ನಿರಾಶ್ರಿತರಿಗೆ ಸರ್ಕಾರ ಮಾರುಕಟ್ಟೆ ದರದಲ್ಲಿಯೇ ಜಾಗ ಖರೀದಿಸಿ ಮನೆ ಕಟ್ಟಿಕೊಡುವ ಕೆಲಸವನ್ನು ಮಾಡಲಿದೆ ಎಂದ ಹೆಗಡೆ ಕೇಂದ್ರ ಮತ್ತು ರಾಜ್ಯ ಎರಡು ಸರ್ಕಾರಗಳು ಸಂತ್ರಸ್ಥರ ಕೈ ಹಿಡಿಯಲಿದ್ದು ಯಾರು ಭಯಪಡುವ ಅಗತ್ಯವಿಲ್ಲ ಎಂದರು.
ಇನ್ನೂ ಅಳ್ನಾವರ ತಾಲೂಕಿನ ಹುಲಿಕೇರಿ ಗ್ರಾಮದ ಇಂದ್ರಮ್ಮನ ಕೆರೆ ಒಡೆಯುವ ಅಪಾಯವಿಲ್ಲ. ಈ ಬಗ್ಗೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದು ಯಾವ ಸಮಸ್ಯೆ ಇಲ್ಲ ಹಳಿಯಾಳ-ಅಳ್ನಾವರ ಜನರು ಭಯಪಡಬೇಕಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ಅಲ್ಲದೇ ನೆರೆಯಿಂದ ಅರ್ಧ ರಾಜ್ಯವೇ ತತ್ತರಿಸಿದ್ದು ಸರ್ಕಾರದ ಜೊತೆಯಲ್ಲಿ ಸಾರ್ವಜನೀಕರು ಕೈಜೊಡಿಸಿದ್ದು ಅಪಾರ ಪ್ರಮಾಣದಲ್ಲಿ ಸಹಾಯದ ಹಸ್ತ ಚಾಚಿದ್ದು, ಸಾರ್ವಜನೀಕರ ಸಹಕಾರಕ್ಕೆ ಮುಕ್ತ ಮನಸ್ಸಿನಿಂದ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು. ಇದೇ ರೀತಿ ಸಹಕಾರ ಮುಂದುವರೆಯಲಿ ಎಂದು ಕೂಡ ಸಂಸದರು ಆಶೀಸಿದರು.
ಸುದ್ದಿಗೊಷ್ಠಿಯ ಬಳಿಕ ಸಂಸದರು ಸಾರ್ವಜನೀಕರನ್ನು ಭೇಟಿಯಾಗಿ ಅಹವಾಲುಗಳನ್ನು ಆಲಿಸಿದರು. ಮಾಜಿ ಶಾಸಕ ಸುನೀಲ್ ಹೆಗಡೆ, ಪ್ರಮುಖರಾದ ಮಂಗೇಶ ದೇಶಪಾಂಡೆ ಇತರರು ಇದ್ದರು.
Leave a Comment