
ಖಾನಾಪೂರ ತಾಲ್ಲೂಕಿನ ಕಕ್ಕೇರಿ ಗ್ರಾಮದ ಗೃಹಿಣಿ ಲಕ್ಷ್ಮೀ ಬಸವರಾಜ ಅಂಗಡಿ (22) ಶುಕ್ರವಾರ ರಾತ್ರಿ ವಿಷ ಸೇವಿಸಿ ಮೃತಪಟ್ಟಿದ್ದಾಳೆ.
ಪತಿ ಹಾಗೂ ಅವರ ಮನೆಯವರು ಕಿರುಕುಳ ನೀಡಿದ್ದರಿಂದ ಲಕ್ಷ್ಮೀ ಸಾವನ್ನಪ್ಪಿದ್ದಾರೆ ಎಂದು ಲಕ್ಷೀ ಅವರ ತವರು ಮನೆಯವರು ಶನಿವಾರ ನಂದಗಡ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದೂರು ಸ್ವೀಕರಿಸಿರುವ ನಂದಗಡ ಪೊಲೀಸರು ಲಕ್ಷ್ಮೀ ಅವರ ಪತಿ ಬಸವರಾಜ, ಅತ್ತೆ ಮಂಜವ್ವ, ಮಾವ ಶಿವಾನಂದ, ಮೈದುನ ಈರಣ್ಣ ಮತ್ತು ನಾದಿನಿ ಉಮಾಶ್ರೀ ವಿರುದ್ಧ ಪ್ರಕರಣದಾಖಲಿಸಿಕೊಂಡಿದ್ದಾರೆ.
ಘಟನೆಯ ವಿವರ:ಬೈಲಹೊಂಗಲ ತಾಲ್ಲೂಕು ಮುರಗೋಡ ಗ್ರಾಮದ ಲಕ್ಷ್ಮೀ 2 ವರ್ಷಗಳ ಹಿಂದೆ ತಾಲ್ಲೂಕಿನಕಕ್ಕೇರಿ ಗ್ರಾಮದ ಬಸವರಾಜ ಅವರನ್ನು ಮದುವೆಯಾಗಿದ್ದರು. ಈ ದಂಪತಿಗೆ ಈಗ ಒಂದು ವರ್ಷದಗಂಡು ಮಗುವಿದೆ.
ಮದುವೆಯಾದಾಗಿನಿಂದಲೂ ತಮ್ಮ ಪತಿಯ ಮನೆಯವರು ತಮಗೆ ತವರಿನಿಂದವರದಕ್ಷಿಣೆ ತರುವಂತೆ ಕಿರುಕುಳ ಮತ್ತು ಮಾನಸಿಕ ಹಿಂಸೆ ನೀಡುತ್ತಿರುವುದಾಗಿ ಲಕ್ಷ್ಮೀತನ್ನ ತಾಯಿಗೆ ತಿಳಿಸಿದ್ದರು.
ಈ ವಿಷಯವಾಗಿ ತವರುಮನೆಯವರು ಲಕ್ಷ್ಮೀ ಅವರ ಪತಿಯನ್ನು ಭೇಟಿಯಾಗಿ ಲಕ್ಷ್ಮೀಗೆ ತೊಂದರೆ ನೀಡದಂತೆ ಬುದ್ಧಿವಾದ ಹೇಳಿದ್ದರು. ಆದರೂ ಪತಿ ಹಾಗೂ ಅವರ ಮನೆಯವರು ಕಿರುಕುಳ ಮುಂದುವರೆಸಿದ್ದರಿಂದ ಬೇಸತ್ತ ಲಕ್ಷ್ಮೀ ಶುಕ್ರವಾರ ರಾತ್ರಿ ತಮ್ಮ ಮನೆಯಲ್ಲೇ ವಿಷ ಸೇವಿಸಿದ್ದರಿಂದ ಸ್ಥಳೀಯರು ಅವರನ್ನು ಆಸ್ಪತ್ರೆಗೆ ದಾಖಲಿಸಲು ಪ್ರಯತ್ನಿಸುವಾಗಲೇ ಮಾರ್ಗಮಧ್ಯದಲ್ಲಿ ಮೃತಪಟ್ಟಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಶನಿವಾರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಲಕ್ಷ್ಮೀ ಅವರ ಮರಣೋತ್ತರಪರೀಕ್ಷೆ ನಡೆದು ಶವವನ್ನು ಸಂಬಂಧಿಕರಿಗೆ ಹಸ್ತಾಂತರಿಸಿದ್ದು, ಸಿಪಿಐ ಮೋತಿಲಾಲ ಪವಾರಈ ಪ್ರಕರಣದ ತನಿಖೆಯನ್ನು ಕೈಗೊಂಡಿದ್ದಾರೆ.
Leave a Comment