ಶರಾವತಿ ಕೊಳ್ಳದಲ್ಲಿ ಕೃತಕ ನೆರೆ – ಗದ್ದೆ, ತೋಟ, ಮನೆಗಳು ಜಲಾವೃತ ಹೊನ್ನಾವರದಲ್ಲಿ ಮಳೆ ಪ್ರಮಾಣ ತಗ್ಗಿದ್ದರೂ ಮಲೆನಾಡಿನಲ್ಲಿ ಮಳೆ ಅಬ್ಬರ ಜೋರಾಗಿದ್ದು ಲಿಂಗನಮಕ್ಕಿ ನೀರು ಬಿಟ್ಟ ಪರಿಣಾಮ ಹೊಳೆಸಾಲು ತೀರ ಜಲಾವೃತಗೊಂಡಿದೆ.ಬುಧವಾರ ಮಧ್ಯಾಹ್ನದ ನಂತರ ಲಿಂಗನಮಕ್ಕಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆ ಸುರಿಯುತ್ತಿರುವ ಕಾರಣ 11ಗೇಟುಗಳ ಮೂಲಕ ದೊಡ್ಡ ಪ್ರಮಾಣದಲ್ಲಿ ನೀರು ಬಿಟ್ಟ ಕಾರಣ ಅಲ್ಲಿಂದ ಗೇರಸೊಪ್ಪಾ ಜಲಾಶಯವನ್ನು ತುಂಬಿಕೊಂಡ ನೀರನ್ನು ಬಿಡುವುದು ಅನಿವಾರ್ಯವಾಯಿತು. 5ಗೇಟ್ನಿಂದ 70 ಸಾವಿರ ಕ್ಯುಸೆಕ್ಸ್ ನೀರನ್ನು ಗೇರಸೊಪ್ಪಾ ಆಣೆಕಟ್ಟಿನಿಂದ ಬಿಟ್ಟ ಕಾರಣ ನೀರು ಶರಾವತಿ ಪಾತಳಿಮೀರಿ ತೋಟ, ಗದ್ದೆ, ಮನೆಯನ್ನು ಆವರಿಸಿ ನಿಂತಿದೆ. ಶರಾವತಿಕೊಳ್ಳದ ಎಡಬಲ ದಂಡೆಯ 35ಕಿಮೀ ಉದ್ದದ ಪ್ರದೇಶದಲ್ಲಿ ಶರಾವತಿ ಮೂರುಪಟ್ಟು ವಿಸ್ತೀರ್ಣಗೊಂಡು ಹರಿಯುತ್ತಿದೆ. ಕೊಡಾಣಿ ಗ್ರಾಮಪಂಚಾಯತ ವ್ಯಾಪ್ತಿಯಲ್ಲಿ ಎದೆಮಟ್ಟಕ್ಕೆ ನೀರು ಬಂದಿದ್ದು ತೋಟ ಹಾಗೂ ಮನೆಯೊಳಗೆ ನೀರು ನುಗ್ಗಿದೆ. ಅನಿಲಗೋಡ, ಮೂರ್ನಕುಳಿ, ಹೈಗುಂದ, ಹೊಸಾಡ ಶಾಲೆಗಳಲ್ಲಿ ಗಂಜಿಕೇಂದ್ರ ಆರಂಭಿಸಲಾಗಿದ್ದು 35ಕುಟುಂಬಗಳ 129ಜನ ಆಶ್ರಯಪಡೆದಿದ್ದಾರೆ. ಬಳಕೂರಿನಲ್ಲಿ ರಸ್ತೆಯ ಮೇಲೆ ನೀರು ಬಂದಿದೆ, ಮಾಗೋಡನಲ್ಲಿ ನಗರಬಸ್ತಿಕೇರಿ ಹೆದ್ದಾರಿಯ ಮೇಲೆ ನಾಲ್ಕು ಅಡಿ ನೀರು ನಿಂತಿದ್ದು ದೋಣಿ ಹಾಕಲಾಗಿದೆ. ಸಪ್ಟೆಂಬರ್ 3ರಂದು ಗೇರಸೊಪ್ಪಾವರೆಗೆ ಸ್ಥಳ ಪರಿಶೀಲನೆ ಮಾಡಿಬಂದ ಜಿಲ್ಲಾಧಿಕಾರಿಗಳು ಯಾವುದೇ ಕಾರಣಕ್ಕೂ ಪ್ರವಾಹ ಉಂಟಾಗಿ ಜನಕ್ಕೆ ತೊಂದರೆ ಉಂಟಾಗದಂತೆ ನೀರು ನಿರ್ವಹಣೆ ಮಾಡಿ, ತೊಂದರೆ ಉಂಟಾದಲ್ಲಿ ನೀವೇ ಹೊಣೆ ಎಂದು ಎಚ್ಚರಿಸಿ ಬಂದಿದ್ದರು.

ಲಿಂಗನಮಕ್ಕಿಯಲ್ಲಿರುವ ಕೆಪಿಸಿ ಅಧಿಕಾರಿಗಳಿಗೆ ಇದು ಅರ್ಥವಾಗಲಿಲ್ಲ, ಕಳೆದ ವರ್ಷಗಳಲ್ಲಿ ಮಾಡಿದಂತೆ 1817 ತುಂಬಿದಾಗ ಸ್ವಲ್ಪಸ್ವಲ್ಪ ನೀರು ಬಿಟ್ಟಿದ್ದರೆ ಹೀಗೆ ಆಗುತ್ತಿರಲಿಲ್ಲ. ಆದ್ದರಿಂದ ಕೆಪಿಸಿ ತನ್ನ ಲಾಭವನ್ನು ನೋಡಿ ಜನರನ್ನು ಮುಳುಗಿಸುತ್ತಿದೆ ಎಂದು ಶರಾವತಿ ಭಾಗದ ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ಮಳೆ ನಿಂತು ಹೋಯಿತು ಎನ್ನುವಾಗ ಮತ್ತೆ ಭಾರೀ ಮಳೆ ಸುರಿದ ಕಾರಣ ಕೆಪಿಸಿ ಲೆಕ್ಕಾಚಾರ ತಪ್ಪಿತು, ಶರಾವತಿಕೊಳ್ಳದ ಜನರೊಂದಿಗೆ ಸ್ಪಂದಿಸಲಿಲ್ಲ, ಆದ್ದರಿಂದ ಈ ಅನಾಹುತ ನಡೆದಿದೆ. ಕೆಪಿಸಿ ಹೆಚ್ಚು ಜವಾಬ್ಧಾರಿಯಿಂದ ವರ್ತಿಸಬೇಕಿತ್ತು, ಈ ಕೃತಕ ನೆರೆ ಹಾನಿಯನ್ನು ಕೆಪಿಸಿ ತುಂಬಿಕೊಡಲಿ ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ. ಹೊನ್ನಾವರಕ್ಕೆ ಬಂದ ಮೇಲೆ ಸಮುದ್ರ ಸೇರಲಾರದೆ ಕಳಸನಮೋಟೆ, ಕಾಸರಕೋಡು, ಮೊದಲಾದ ಗ್ರಾಮಗಳಲ್ಲಿ ಹರಡಿಕೊಂಡಿದೆ.
ಇನ್ನು ನೆರೆಯ ಪರಿಸ್ಥಿತಿ ನಿಭಾಯಿಸಲು ನೋಡಲ್ ಅಧಿಕಾರಿಗಳು, ವಿ.ಏ, ಪಿ.ಡಿ.ಓ ಸೇರಿದಂತೆ ಹಿರಿ ಕಿರಿಯ ಅಧಿಕಾರಿಗಳ ತಂಡ ಎದುರಾಗಬಹುದಾದ ಪ್ರವಾಹ ಪರಿಸ್ಥಿತಿ ತಡೆಯಲು ಹೆಣಗುತ್ತಿದ್ದಾರಾದರೂ ಸಾಗರ ಶಿವಮೊಗ್ಗದಲ್ಲಿ ಮಳೆ ಒಂದೇಸಮನೆ ಸುರಿಯುತ್ತಿರುವ ಕಾರಣ ಜಲಾಶಯದಿಂದ ಲಕ್ಷ ಕ್ಯೂಸೆಕ್ಗೂ ಅಧಿಕ ಪ್ರಮಾಣದ ನೀರು ಬಿಟ್ಟರೆ ಹೊಳೆಸಾಲಿನ ಪರಿಸ್ಥಿತಿ ಬಿಗಡಾಯಿಸಲಿದೆ ಎನ್ನಲಾಗುತ್ತಿದೆ.
ಪ್ರತಿ ಗಂಟೆಗೆ ಮಳೆಯ ಪ್ರಮಾಣ ಬದಲಾಗುತ್ತಿರುವುದರಿಂದ ಕೆಪಿಸಿ ನೀರು ಬಿಡುವ ಪ್ರಮಾಣವನ್ನು ಬದಲಾಯಿಸುತ್ತಲೇ ಇದೆ. ಮಧ್ಯಾಹ್ನ 3ಗಂಟೆಗೆ ಲಿಂಗನಮಕ್ಕಿ ಜಲಮಟ್ಟ 1818.65 ಅಡಿ ಇಳಿದಿದೆ. ಒಳಹರಿವು 46,372 ಕ್ಯುಸೆಕ್ಸ್, ವಿದ್ಯುತ್ ಉತ್ಪಾದಿಸಿ ಒಟ್ಟೂ 71,350 ಕ್ಯುಸೆಕ್ಸ್ ನೀರು ಹೊರಬಂದು ಗೇರಸೊಪ್ಪಾ ಆಣೆಕಟ್ಟನ್ನು ತುಂಬಿಕೊಳ್ಳುತ್ತಿದೆ. ಗೇರಸೊಪ್ಪಾ ಆಣೆಕಟ್ಟಿನ ಜಲಮಟ್ಟ 49.22ಮೀಟರ್ ಏರಿದೆ. ಮಳೆ ನೀರು ಸೇರಿ ತಾಸಿಗೆ 68,015 ಕ್ಯುಸೆಕ್ಸ್ ನೀರು ಒಳಹರಿವಾಗಿದೆ. 4ಘಟಕಗಳಲ್ಲಿ ವಿದ್ಯುತ್ ಉತ್ಪಾದಿಸಿ 63,028 ಕ್ಯುಸೆಕ್ಸ್ ನೀರು ಶರಾವತಿ ಸೇರುತ್ತಿತ್ತು. ನಂತರ 4 ಗಂಟೆಗೆ ಲಿಂಗನಮಕ್ಕಿ ಜಲಮಟ್ಟ 1818.60ಕ್ಕೆ ಬಂದಿದ್ದರೂ. ಒಳಹರಿವು 45,801 ಕ್ಯುಸೆಕ್ಸ್, ಹೊರಹರಿವು 67,800 ಕ್ಯುಸೆಕ್ಸ್. ಇದೆ. ಗೇರಸೊಪ್ಪಾ ಆಣೆಕಟ್ಟಿನ ಜಲಮಟ್ಟ 49.45ಮೀಟರ್ ಒಳಹರಿವು ಪ್ರತಿ ಗಂಟೆಗೆ 69,053 ಕ್ಯೂಸೆಕ್ಸ ಇದೆ. 3ಯುನಿಟ್ ವಿದ್ಯುತ್ ಉತ್ಪಾದಿಸಿ ಒಟ್ಟೂ ಬಿಡುವ ಪ್ರಮಾಣವನ್ನು ಕಡಿಮೆಮಾಡಿದ್ದು 57,592 ಕ್ಯುಸೆಕ್ಸ್ ನೀರು ಶರಾವತಿ ಸೇರುತ್ತಿದೆ.
Leave a Comment