
ಹಳಿಯಾಳ:- ಪಡಿತರ ಚೀಟಿ(ರೇಷನ್ ಕಾರ್ಡ)ಗಳನ್ನು ಮಾಡುವಾಗ ಅಂತರ್ಜಾಲ(ಸರ್ವರ್) ಸಮಸ್ಯೆ ಎಂದು ಆಹಾರ ಶಿರಸ್ತೆದಾರರು ನೆಪ ಹೇಳುತ್ತಾರೆ. ಆದರೇ ಕೆಲವರು ದುಡ್ಡು ನೀಡಿದರೇ ಯಾವುದೇ ಸಂದರ್ಭದಲ್ಲೂ ಪಡಿತರ ಕಾರ್ಡ ನೀಡುತ್ತಾರೆ ಇದು ಹೇಗೆ ಸಾಧ್ಯವೆಂಬ ಬಗ್ಗೆ ತಮಗೆ ದೂರು ಬಂದಿದೆ ಎಂದು ಉತ್ತರ ಕನ್ನಡ ಜಿಲ್ಲೆ ಲೋಕಾಯುಕ್ತ ಪೋಲಿಸ್ ಉಪ ಅಧೀಕ್ಷಕ(ಡಿವೈಎಸ್ಪಿ) ಅರವಿಂದ ಕಲಗುಜ್ಜಿ ಹೇಳಿದರು.
ಪಟ್ಟಣದ ಮಿನಿ ವಿಧಾನಸೌಧದ ಸಭಾ ಭವನದಲ್ಲಿ ನಡೆದ ಕರ್ನಾಟಕ ಲೋಕಾಯುಕ್ತ ಕಾರವಾರ ಅವರಿಂದ ಹಳಿಯಾಳ ತಾಲೂಕಿನ ಸಾರ್ವಜನೀಕರ ಕುಂದುಕೊರತೆಗಳ ಅಹವಾಲು ಸ್ವೀಕಾರ ಸಭೆಯ ಬಳಿಕ ಮಾಧ್ಯಮದವರು ಕೇಳಿದ ಪ್ರಶ್ನೇಗಳಿಗೆ ಪ್ರತಿಕ್ರಿಯಿಸಿದ ಅವರು ಲೋಕಾಯುಕ್ತದ ಕರ್ತವ್ಯಗಳು ಕುರಿತು ವಿವರಿಸಿದರು ಅಲ್ಲದೇ ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ತಿಂಗಳ ಕೊನೆಯ ವರೆಗೆ ನಡೆಯುವ ಸಭೆಗಳ ಕುರಿತು ಮಾಹಿತಿ ನೀಡಿದರು.
ಈಗಾಗಲೇ ಸೆಪ್ಟೆಂಬರ್ ದಿ. 5ರಿಂದ ರಿಂದ ಶಿರಸಿ, ಭಟ್ಕಳ, ಹೊನ್ನಾವರ, ಕಾರವಾರ ಮೊದಲಾದ ತಾಲೂಕುಗಳಲ್ಲಿ ಸಾರ್ವಜನೀಕರ ಕುಂದುಕೊರತೆಗಳ ಅಹವಾಲು ಸ್ವೀಕಾರ ಸಭೆ ನಡೆಸಲಾಗಿದ್ದು ದಿ.18ಕ್ಕೆ ಅಂಕೋಲಾ, ದಿ.20ಕ್ಕೆ ಮುಂಡಗೋಡ, ದಿ.23ಕ್ಕೆ ಸಿದ್ದಾಪುರ, ದಿ.25ಕ್ಕೆ ಯಲ್ಲಾಪುರ, ದಿ.30ಕ್ಕೆ ಜೋಯಿಡಾ ತಾಲೂಕುಗಳಲ್ಲಿಯೂ ಸರ್ಕಾರಿ ಕಚೇರಿಯ ಸಭಾಭವನಗಳಲ್ಲಿ ಸಭೆ ನಡೆಸಲಾಗುವುದು ಸಾರ್ವಜನೀಕರು ತಮ್ಮ ದೂರು ಮತ್ತು ಅಹವಾಲುಗಳೊಂದಿಗೆ ಸಭೆಗೆ ಹಾಜರಾಗುವಂತೆ ಕೊರಿದರು.
ಈವರೆಗೆ ಲೋಕಾಯುಕ್ತಕ್ಕೆ ವಿವಿಧ ಇಲಾಖೆಗಳ ಕುರಿತು ಸಾರ್ವಜನೀಕರಿಂದ 25ಕ್ಕೂ ಹೆಚ್ಚು ದೂರುಗಳು ಬಂದಿದ್ದು ಎಲ್ಲವನ್ನು ದಾಖಲಿಸಿಕೊಳ್ಳಲಾಗಿದ್ದು ತನಿಖೆ ನಡೆಸಲಾಗುತ್ತಿದೆ. ಕಾನೂನಾತ್ಮಕವಾಗಿ ನಿಗದಿತ ಅವಧಿಯ ಒಳಗೆ ಪರಿಶೀಲನೆ ಹಾಗೂ ತನಿಖೆ ನಡೆಸಿ ತೊಂದರೆಗೊಳಗಾದ ಜನರಿಗೆ ನ್ಯಾಯ ಒದಗಿಸುವ ಕೆಲಸ ಮಾಡಲಾಗುವುದು ಎಂದು ಡಿವೈಎಸ್ಪಿ ಸ್ಪಷ್ಟಪಡಿಸಿದರು.
ಈ ಮೊದಲು ಸ್ಥಳೀಯ ಪ್ರವಾಸಿ ಮಂದಿರಗಳಲ್ಲಿ ಲೋಕಾಯುಕ್ತರು ದೂರುದಾರರಿಂದ ದೂರು ಪಡೆದ ಅಲ್ಲಿಯೇ ಪರಿಶೀಲನೆ ನಡೆಸಲಾಗುತ್ತಿತ್ತು ಆದರೇ ಈಗ ಬದಲಾವಣೆಗಳಾಗಿದ್ದು ಸರ್ಕಾರಿ ಕಚೇರಿಯ ಸಭಾಂಗಣದಲ್ಲಿ ತಾಲೂಕಾಡಳಿತದ ಎಲ್ಲ ಇಲಾಖೆಯ ಅಧಿಕಾರಿಗಳನ್ನು ಕರೆದು ಸಭೆ ನಡೆಸಲಾಗುತ್ತದೆ. ಇದೆ ಸಭೆಯಲ್ಲಿ ಸಾರ್ವಜನೀಕರಿಂದ ಅಹವಾಲು, ದೂರುಗಳನ್ನು ಸ್ವೀಕರಿಸಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲೇ ಅದನ್ನು ಇತ್ಯರ್ಥ ಪಡಿಸುವ ಕಾರ್ಯವನ್ನು ಮಾಡಲಾಗುತ್ತದೆ ಎಂದರು.
ಲೋಕಾಯುಕ್ತಕ್ಕೆ ದೂರುಗಳು ಬರುವುದು ಕಡಿಮೆ ಆಗಿಲ್ಲಾ, ಅಧಿಕಾರಿಗಳ ಸಮ್ಮುಖದಲ್ಲಿ ಬಂದು ದೂರು ನೀಡಲು ಜನರು ಭಯಪಡುವುದರಿಂದ ಇಲಾಖೆಗೆ ಮುಕ ಅರ್ಜಿಗಳು ಸಾಕಷ್ಟು ಬರುತ್ತವೆ, ಇವುಗಳ ಸತ್ಯಾಸತ್ಯತೆ ಪರಿಶೀಲಿಸಿ ಕ್ರಮ ಜರುಗಿಸಲಾಗುತ್ತದೆ. ಅಲ್ಲದೇ ಲೋಕಾಯುಕ್ತಕ್ಕೆ ಕೆಲವರು ಉದ್ದೇಶಪೂರ್ವಕವಾಗಿ, ಸ್ವಹಿತಾಸಕ್ತಿಗಾಗಿ ಸಲ್ಲಿಸುವ ಕೆಲವೊಂದು ಸುಳ್ಳು ದೂರುಗಳ ಬಗ್ಗೆಯೂ ಕಾನೂನಿನ ಚೌಕಟ್ಟಿನಲ್ಲಿ ಸಮಾಲೋಚಿಸಿಯೇ ಕ್ರಮ ಕೈಗೊಳ್ಳುತ್ತೇವೆ ಎಂದು ಡಿವೈಎಸ್ಪಿ ಅರವಿಂದ ಅವರು ಸ್ಪಷ್ಟಪಡಿಸಿದರು.
ಹಳಿಯಾಳದಲ್ಲಿ ಸೋಮವಾರ ನಡೆದ ಈ ಸಭೆಯಲ್ಲಿ ಪಟ್ಟಣದ ಸುಭಾಷ ರೋಡ ನಿವಾಸಿ ಸಂತಾನ ಜುಜೆ ಡಿಸೋಜಾ ಅವರು 3 ತಿಂಗಳಿನಿಂದ ರೇಷನ್ ಕಾರ್ಡ ಮಾಡಿಕೊಡುತ್ತಿಲ್ಲ ಪ್ರತಿದಿನ ಇಲಾಖೆಗೆ ಅಲೆದಾಡಿಸುತ್ತಿದ್ದಾರೆಂದು ಹಳಿಯಾಳ ಆಹಾರ ಶೀರಸ್ತೆದಾರ ಶೋಭಾ ಹುಲ್ಲೇನ್ನವರ ವಿರುದ್ದ ದೂರು ನೀಡಿದ್ದಾರೆ. ಶೋಭಾ ಅವರನ್ನು ಕರೆಸಿ ವಿಚಾರಣೆ ಮಾಡಿದ್ದು 7 ದಿನಗಳ ಒಳಗಾಗಿ ಪಡಿತರ ಚೀಟಿ ಸಮಸ್ಯೆ ಇತ್ಯರ್ಥಪಡಿಸಿಕೊಡುವುದಾಗಿ ಹೇಳಿದ್ದಾರೆಂದು ಲೋಕಾಯುಕ್ತ ಅಧಿಕಾರಿ ಅರವಿಂದ ಅವರು ಮಾಹಿತಿ ನೀಡಿದರು.
ಸಭೆಯಲ್ಲಿ ಹಳಿಯಾಳ ತಾಪಂ ಅಧಿಕಾರಿ ಡಾ.ಮಹೇಶ ಕುರಿಯವರ, ತಹಶೀಲ್ದಾರ್ ರತ್ನಾಕರ, ಲೋಕಾಯುಕ್ತ ಸಿಪಿಐ ಮಂಜುನಾಥ ಬಡಿಗೇರ, ಸಿಬ್ಬಂದಿಗಳಾದ ರತನ ಗುನಗಿ, ನಾರಾಯಣ ನಾಯ್ಕ, ಪ್ರದೀಪ ರಾಣೆ, ಮಹೇಶ ನಾಯ್ಕ, ಗಣೇಶ ದಾಸರ ಇದ್ದರು.
Leave a Comment