
ಹೊನ್ನಾವರ: `ಸಹಕಾರಿ ಬ್ಯಾಂಕುಗಳು ಯಾವುದೇ ಒತ್ತಡವಿಲ್ಲದೇ ಶಿಸ್ತು, ಬದ್ದತೆ ಮತ್ತು ಪ್ರಾಮಾಣಿಕತೆಯಿಂದ ಜನರಿಗೆ ಸ್ಪಂದಿಸಿದಾಗ ಯಶಸ್ಸು ಸಾಧ್ಯವಾಗುವುದು’ ಎಂದು ಸಚಿವ ಜಗದೀಶ ಶೆಟ್ಟರ್ ಹೇಳಿದರು.
ಪ್ರಭಾತನಗರದ ಶ್ರೀ ಮೂಡಗಣಪತಿ ಸಭಾಭವನದಲ್ಲಿ ಭಾನುವಾರ ಆಯೋಜಿಸಿದ ಹೊನ್ನಾವರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿನ ಶತಮಾನೋತ್ಸವದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು ಹೊಸ ಉದ್ದಿಮೆದಾರರಿಗೆ, ಸಣ್ಣ ಕೈಕಾರಿಕೆ ಸ್ಥಾಪಿಸುವವರಿಗೆ ಬೆಂಬಲಿಸಿ ಸಾಲ ಸೌಲಭ್ಯ ನೀಡಿ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಕೆಲಸವನ್ನು ಸಹಕಾರಿ ಸಂಸ್ಥೆಗಳು ಮಾಡಬೇಕು. ಅಂಬ್ರೆಲಾ ಒರರ್ಗನೈಜೇಷನ್ ಕಾರ್ಯಗತಗೊಳಿಸಲು ಮುಖ್ಯಮಂತ್ರಿಗಳೊಂದಿಗೆ ಸಮಾಲೋಚಿಸಿ ಜಾರಿಗೊಳಿಸಲು ಸಹಕಾರ ನೀಡಲಾಗುವದು ಎಂದರು.

ಅರ್ಬನ್ ಬ್ಯಾಂಕುಗಳ ಮಹಾಮಂಡಳದ ನಿರ್ದೇಶಕ, ಮಾಜಿ ಸಚಿವ ಎಚ್.ಕೆ.ಪಾಟೀಲ್ ಮಾತನಾಡಿ, ಆರ್ಬಿಐ ಮತ್ತು ಸರ್ಕಾರಗಳು ಸಹಕಾರಿ ಕ್ಷೇತ್ರವನ್ನು ಬೆಳೆಸುವ, ಪ್ರೋತ್ಸಾಹಿಸುವ ಕಾರ್ಯ ಮಾಡಬೇಕು. ಆದರೆ ಸರ್ಕಾರಗಳು ಸಹಕಾರಿ ಬ್ಯಾಂಕುಗಳ ಮೇಲೆ ಅಪನಂಬಿಕೆಯನ್ನು ಹೊಂದಿದ್ದು, ಸರ್ಕಾರಿ ಹಣವನ್ನು ಡೆಪಾಸಿಟ್ ಕೂಡ ಮಾಡುವುದಿಲ್ಲ. ಸಾರ್ವಜನಿಕರ ವಿಶ್ವಾಸಾರ್ಹತೆಯಿಂದ ಸಹಕಾರಿ ಬ್ಯಾಂಕುಗಳು ಬೆಳೆದು ನಿಂತಿವೆ. ಅಂಬ್ರೆಲಾ ಒರರ್ಗನೈಜೇಷನ್ ಜಾರಿಗೊಳ್ಳಿಸಲು ಸರಕಾರಗಳು ಮುಂದಾಗಬೇಕು. ಈ ಜಿಲ್ಲೆಯಲ್ಲಿ ಸಹಕಾರಿಗಳ ಆರ್ಥಿಕ ಶಿಸ್ತು ಈ ಕ್ಷೇತ್ರ ಹೆಚ್ಚು ಬೆಳೆಯಲು ಕಾರಣವಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಶಾಸಕ ದಿನಕರ ಶೆಟ್ಟಿ ಮಾತನಾಡಿ ಸಂಸ್ಥೆ ಬೆಳೆಯಲು ಆಡಳಿತ ಮಂಡಳಿಯ ಪ್ರಾಮಾಣಿಕತೆ ಸಿಬ್ಬಂದಿಗಳ ಶ್ರಮ ಕಾರಣವಾಗುತ್ತದೆ ಉತ್ತಮ ಸೇವೆ ನೀಡಿ ಬ್ಯಾಂಕ್ ನೂರು ವರ್ಷ ಪೂರೈಸಿ ಸೇವೆ ನೀಡುತ್ತಿರುವುದು ಹೆಮ್ಮೆಯ ವಿಚಾರವಾಗಿದೆ ಎಂದರು.

ಶಾಸಕ ಸುನೀಲ್ ನಾಯ್ಕ ಮಾತನಾಡಿ ಅರ್ಬನ್ ಬ್ಯಾಂಕ್ ಜಿಲ್ಲೆಗೆ ಮಾದರಿಯಾಗಿದೆ. ಬ್ಯಾಂಕ್ ಪ್ರಗತಿಗೆ ಆಡಳಿತ ಮಂಡಳೀ ಜೊತೆ ಸದಸ್ಯರ ಸಹಕಾರ ಬೇಕು. ರಾಷ್ಟ್ರೀಕೃತ ಬ್ಯಾಂಕ್ಗಳು ಸರ್ಕಾರದ ವಿವಿಧ ಯೋಜನೆಗಳನ್ನು ಜನರಿಗೆ ನೀಡಲು ವಿಫಲವಾಗಿದೆ. ಅವರು ಜನತೆಗೆ ತಪ್ಪು ದಾರಿ ತೋರಿಸುತ್ತಿದ್ದಾರೆ. ಸಹಕಾರಿ ಬ್ಯಾಂಕ್ಗಳು ಜನರ ನಾಡಿಮಿಡಿತ ಅರಿತು ಸಾಗುತಿದೆ. ಜನರಿಗೆ ಸಹಕಾರಿ ಬ್ಯಾಂಕ್ಗಳ ಮೇಲೆ ಜನರಿಗೆ ವಿಶ್ವಾಸವಿದೆ ಅದಕ್ಕೆ ಸ್ಪಂದಿಸುವಂತಾಗಬೇಕು ಎಂದರು.
ಬ್ಯಾಂಕಿನ ಸ್ವಂತ ಎಟಿಎಂ ಘಟಕವನ್ನು ಉದ್ಘಾಟಿಸಿದ ಆರ್ಬಿಐ ಜನರಲ್ ಮ್ಯಾನೆಜರ್ ಕೆ. ಗಣೇಶ ಐತಾಳ, ಸಹಕಾರ ಸಂಘಗಳ ಸಹಾಯಕ ನಿಬಂಧಕ ನಾಗಪತಿ ಎನ್. ಹೆಗಡೆ, ಮೂಡಬಿದ್ರೆ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಪ್ರೊ. ಡಾ. ಜಿ.ವಿ.ಜೋಶಿ ಮಾತನಾಡಿದರು.
ಬ್ಯಾಂಕಿನ ಸಿಬ್ಬಂದಿಯ ಒಂದು ದಿನದ ವೇತನವನ್ನು 1.25ಲಕ್ಷರೂಗಳ ಚಕ್ನ್ನು ಮುಖ್ಯಮಂತ್ರಿ ನೆರೆ ಪರಿಹಾರ ನಿಧಿಗೆ ಸಚಿವ ಜಗದೀಶ ಶೆಟ್ಟರ್ ಮೂಲಕ ನೀಡಲಾಯಿತು.
ಬ್ಯಾಂಕಿನ ಅಧ್ಯಕ್ಷ ರಾಘವ ಬಾಳೇರಿ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ವ್ಯವಸ್ಥಾಪಕ ರಾಜೀವ್ ಜಿ ಶ್ಯಾನಭಾಗ ಬ್ಯಾಂಕಿನ ಪ್ರಗತಿಯ ವರದಿ ಪ್ರಸ್ತುತ ಪಡಿಸಿದರು. ಬ್ಯಾಂಕಿನ ಉಪಾಧ್ಯಕ್ಷ ವಸಂತ ಪ್ರಭು ಧನ್ಯವಾದ ಸಮರ್ಪಿಸಿದರು. ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ನಿವೃತ್ತ ಸಿಬ್ಬಂದಿ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.

Leave a Comment