
ಹಳಿಯಾಳ :- ತಾಲೂಕಾ ಕೇಂದ್ರ ಹಳಿಯಾಳ ಪಟ್ಟಣದಲ್ಲಿ ಈ ಬಾರಿ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನು ಅತ್ಯಂತ ಶ್ರದ್ದಾ-ಭಕ್ತಿ ಹಾಗೂ ವಿಜೃಂಭಣೆಯಿಂದ ಆಚರಿಸಲಾಯಿತು. ಪಟ್ಟಣ ಮಾತ್ರವಲ್ಲದೇ ಗ್ರಾಮಾಂತರ ಭಾಗದಲ್ಲಿ ಕೂಡ 64 ನೇ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮ-ಸಡಗರದಿಂದ ಆಚರಿಸಲಾಗಿದೆ.
ಪಟ್ಟಣದ ಮಿನಿ ವಿಧಾನಸೌಧದ ಎದುರು ಬೆಳಿಗ್ಗೆ ತಾಲೂಕಾ ದಂಡಾಧಿಕಾರಿಯು ಆಗಿರುವ ತಹಶೀಲ್ದಾರ್ ವಿದ್ಯಾಧರ ಗುಳಗುಳಿಯವರು ಧ್ವಜಾರೋಹಣಗೈದು ಮಾತನಾಡಿ ನಾಡು ನುಡಿ, ರಾಷ್ಟ್ರದ ಬಗ್ಗೆ ಎಲ್ಲರು ಅಭಿಮಾನ ಹೊಂದಿರಬೇಕು ನೆಲ,ಜಲ ರಕ್ಷಣೆ ಹಾಗೂ ಅಭಿವೃದ್ದಿಗೆ ಎಲ್ಲರೂ ಕೈಜೋಡಿಸಿ ಶ್ರಮಿಸಬೇಕು ಮತ್ತು ರಾಜ್ಯದಲ್ಲಿ ಜಲಪ್ರವಾಹದಿಂದ ಸಂತ್ರಸ್ಥರಾಗಿರುವವರಿಗೆ ಸಹಾಯ ಹಸ್ತ ಚಾಚುವ ಮೂಲಕ ನೇರವಾಗಬೇಕೆಂದು ಕರೆ ನೀಡಿದರು.

ಉ.ಕ. ಜಿಲ್ಲಾ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ಮಾತನಾಡಿ ಜಗತ್ತಿನಲ್ಲೇ ಕರ್ನಾಟಕ ಹೆಸರುವಾಸಿಯಾಗಿದೆ. ಕನ್ನಡ ನಾಡು ನುಡಿಯ ಬಗ್ಗೆ ಗೌರವ ಇರಲಿ ಹಾಗೆಯೇ ಕನ್ನಡಿಗರೆಂಬ ಹೆಮ್ಮೆ ನಮಗಿರಲಿ ಎಂದ ಅವರು ಹಳಿಯಾಳದ ಅರ್ಬನ್‍ಬ್ಯಾಂಕ್(ಸಂಗೋಳ್ಳಿ) ರಾಯಣ್ಣ ವೃತ್ತದಲ್ಲಿ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಬೃಹತ್ ಪ್ರತಿಮೆ ಹಾಗೂ ವನಶ್ರೀ ವೃತ್ತದ ಬಳಿಯ ಮಾರ್ಕೆಟಿಂಗ್ ಸೋಸೈಟಿ ಎದುರಿನ ಜಾಗದಲ್ಲಿ ಮಾತೆ ಕಿತ್ತೂರು ರಾಣಿ ಚೆನ್ನಮ್ಮಳ ಬೃಹತ್ ಪ್ರತಿಮೆಯನ್ನು ಸ್ಥಾಪಿಸಲಾಗುವುದು ಹಾಗೂ 2020 ರ ಜನೆವರಿ 26 ಗಣರಾಜ್ಯೋವ ದಿನದಂದು ಲೋಕಾರ್ಪಣೆ ಮಾಡುವ ಪ್ರಯತ್ನವನ್ನು ಮಾಡಲಾಗವುದು ಎಂದು ಘೋಷಿಸಿದರು.

ಕನಾಟಕ ರಕ್ಷಣಾ ವೇದಿಕೆಯವರು 64 ಮೀಟರ್ ಉದ್ದದ ಬೃಹತ್ ಕನ್ನಡ ಬಾವುಟದ ಪ್ರದರ್ಶನ ಹಾಗೂ ಬೃಹತ್ ಆನೆಯ ಪ್ರತಿಕೃತಿಯೊಂದಿಗೆ ಕನ್ನಡಾಂಬೆಯ ಅಂಬಾರಿ ಮೇರವಣಿಗೆ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಸಾಕಷ್ಟು ಮೇರಗು ನೀಡಿತು.
ಪಟ್ಟಣದ ಯಲ್ಲಾಪೂರ ನಾಕಾದಲ್ಲಿರುವ ಡಾ. ಬಾಬಾಸಾಹೇಬ ಅಂಬೇಡ್ಕರ ಪುತ್ಥಳಿ, ಅರ್ಬನ್ ವೃತ್ತದಲ್ಲಿರುವ ಸಂಗೋಳ್ಳಿ ರಾಯಣ್ಣ ಪುಥ್ಥಳಿ, ಶಿವಾಜಿ ವೃತ್ತದಲ್ಲಿರುವ ಶ್ರೀ ಛತ್ರಪತಿ ಶಿವಾಜಿ ಪ್ರತಿಮೆ, ಬಸವೇಶ್ವರ ಪುಥ್ಥಳಿ ಮತ್ತು ಕನ್ನಡಾಂಬೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಜಯ ಕರ್ನಾಟಕ ಸಂಘಟನೆಯವರು ರಾಜ್ಯೋತ್ಸವವನ್ನು ವಿಭಿನ್ನವಾಗಿ ಆಚರಿಸಿದರು.

ಕಾರ್ಯಕ್ರಮದಲ್ಲಿ ರಾಷ್ಟ್ರಮಟ್ಟದಲ್ಲಿ ಕುಸ್ತಿ ಪಂದ್ಯಾವಳಿಯಲ್ಲಿ ಚಿನ್ನದ ಪದಕ ಪಡೆದ ಶಿವಾಜಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಲೀನಾ ಸಿದ್ದಿ, ಪಟ್ಟಣದ ವಿಡಿ ಹೆಗಡೆ ಕಾಲೇಜಿನ ವಿದ್ಯಾರ್ಥಿನಿ ಅಂತರಾಷ್ಟ್ರೀಯ ಮಟ್ಟದಲ್ಲಿ ಕಂಚಿನ ಪದಕ ಪಡೆದ ಸೂರಜ ಸಂಜು ಅಣ್ಣಿಕೇರಿ, ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ರಾಜ್ಯಮಟ್ಟದ ಸುವರ್ಣಶ್ರೀ ಪ್ರಶಸ್ತಿ ಪಡೆದ ಕರ್ನಾಟಕ ರಕ್ಷಣಾ ವೇದಿಕೆ ಹಳಿಯಾಳ ಅಧ್ಯಕ್ಷ ಬಸವರಾಜ ಬೆಂಡಿಗೇರಿಮಠ, ಕರ್ನಾಟಕ ಬಯಲಾಟ ಅಕಾಡೆಮಿಗೆ ಸದಸ್ಯರಾಗಿ ಆಯ್ಕೆಯಾಗಿರುವ ಶಿಕ್ಷಕ ಸಿದ್ದಪ್ಪಾ ಬಿರಾದಾರ ಹಾಗೂ ಜನಸ್ಪಂದನ ಸಂಸ್ಥೆಯ ಮೂಲಕ ಸಾಮಾಜಿಕ ಬದಲಾವಣೆ ಕಾರ್ಯಕ್ಕೆ ರಾಜ್ಯಮಟ್ಟದ ಪ್ರಶಸ್ತಿ ಪಡೆದಿರುವ ಮಧುರಾ ಬಡಿಗೇರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಬಳಿಕ ಕನ್ನಡಾಂಬೆ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಮೇರವಣಿಗೆಗೆ ಚಾಲನೆ ನೀಡಲಾಯಿತು. ಪಥ ಸಂಚಲನ, ಪ್ರಭಾತ ಪೇರಿ ಹಾಗೂ 64ಮೀ. ಉದ್ದದ ಕನ್ನಡ ಬಾವುಟ ಹಾಗೂ ವಿವಿಧ ಸ್ತಬ್ದ ಚಿತ್ರಗಳ ಮೇರವಣಿಗೆ ಎಲ್ಲರ ಗಮನ ಸೆಳೆಯಿತು.
ಬಿಇಓ ಸಮೀರಅಮ್ಮದ ಮುಲ್ಲಾ, ಜಯ ಕರ್ನಾಟಕ ಸಂಘಟನೆಯ ವಿಲಾಸ ಕಣಗಲಿ, ಜೀಜಾಮಾತಾ ಸಂಘಟನೆಯ ಮಂಗಲಾ ಕಶೀಲಕರ, ತಾಪಂ ಸದಸ್ಯರು, ಪುರಸಭೆ ಎಲ್ಲ ನೂತನ ಸದಸ್ಯರು, ಹಿರಿಯ ನಾಗರಿಕ ಕ್ಷೇಮಾಭಿವೃದ್ದಿ ಸಂಘದವರು, ಸಿಂಹಕೂಟದವರು, ತಾಪಂ ಅಧಿಕಾರಿ ಹಾಗೂ ಎಲ್ಲ ಇಲಾಖೆಯ ಸಿಬ್ಬಂದಿಗಳು, ಶಿಕ್ಷಕರು ಮೊದಲಾದವರು ಇದ್ದರು.





Leave a Comment