
ಡಿ. 3ರಂದು ಬೆಳಿಗ್ಗೆ 10 ಗಂಟೆಗೆ ದೇವರ ಪ್ರಾರ್ಥನೆ, ನೂತನ ರಜತ ಪಲ್ಲಕ್ಕಿ ಸಮರ್ಪಣೆ, ಮಧ್ಯಾಹ್ನ ಅನ್ನ ಸಂತರ್ಪಣೆ ರಾತ್ರಿ ಪುಷ್ಪ ರಥೋತ್ಸವ ನಡೆಯಿತು. ಡಿ.4 ರಂದು ನವಗ್ರಹ ಶಾಂತಿ, 108 ಬ್ರಹ್ಮಕಲಶಾಭಿಷೇಕ, ಮಧ್ಯಾಹ್ನ ರಥಾರೋಹಣ, ತದನಂತರ ಅನ್ನ ಸಂತರ್ಪಣೆ, ಸಂಜೆ 6 ಗಂಟೆಗೆ ಬ್ರಹ್ಮರಥೋತ್ಸವ ನಡೆಯಿತು. ತಾಲೂಕಿನ ವಿವಿದೆಡೆಯಿಂದ ಭಕ್ತಾಧಿಗಳು ಶ್ರೀ ಕ್ಷೇತ್ರಕ್ಕೆ ಆಗಮಿಸಿ ಹಣ್ಣು,ಕಾಯಿ, ರಥ ಕಾಣಿಕೆ ಸೇರಿದಂತೆ ವಿವಿಧ ಸೇವೆ ಸಲ್ಲಿಸಿ ದೇವರ ದರ್ಶನ ಪಡೆದು ಪುನಿತರಾದರು.
ಆಡಳಿತ ಮಂಡಳಿಯ ಅಧ್ಯಕ್ಷ ಆರ್.ಎಸ್ ರಾಯ್ಕರ್ ಮಾದ್ಯಮದವರೊಂದಿಗೆ ಮಾತನಾಡಿ ಗೇರುಸೊಪ್ಪಾ ಸೀಮೆಯ ಶ್ರೀ ಮುಖ್ಯಪ್ರಾಣ ದೇವರು ಐತಿಹಾಸಿಕ ಹಿನ್ನಲೆಯುಳ್ಳ ದೇವಾಲಯವಾಗಿದೆ. ಕೆಳದಿ ಸಂಸ್ಥಾನ ಹಿಡಿದು ನಗರ ಸಂಸ್ಥಾನ ಕಾಲದಲ್ಲಿ ಜೈನ ಪರಂಪರೆಯ ಚತುರ್ಮುಖ ಬಸ್ತಿಯಲ್ಲಿ ಇದರ ಮೂಲ ಸ್ಥಾನವಿತ್ತು.ತದನಂತರದ ಅವಧಿಯಲ್ಲಿ ಈ ದೇವರ ಶಕ್ತಿ ಕುಂದಿಸುವ ಷಡ್ಯಂತ್ರವು ನಡೆದಿತ್ತು. ವಿವಿಧ ಸಮಾಜಭಾಂದವರು ಸೇರಿ ದೇವಾಲಯವನ್ನು ಅಭಿವೃದ್ದಿಪಡಿಸುವ ಕಾರ್ಯ ನಡೆಯಿತು. ಶರಾವತಿ ಎಡಬಲದಂಡೆಯ 12 ಗ್ರಾಮಗಳು ಈ ಸೀಮೀಗೆ ಒಳಪಟ್ಟಿದೆ ಎಂದರು.
ದೇವಾಲಯದ ಪ್ರಧಾನ ಅರ್ಚಕ ಸೂರಾಲು ಚಂದ್ರಶೇಖರ ಭಟ್ಟ ಮಾತನಾಡಿ ಶ್ರೀ ಕ್ಷೇತ್ರದಿಂದ ಅನೇಕ ಅಚ್ಚರಿಗಳು,ಪವಾಡಗಳು ನಡೆದಿದೆ, ನಡೆಯುತ್ತಲಿದೆ. ಅನೇಕ ಭಕ್ತಾಧಿಗಳು ಆಶ್ಚರ್ಯಕರ ರೀತಿಯಲ್ಲಿ ಒಳಿತನ್ನು ಕಂಡಿದ್ದಾರೆ. ಭಕ್ತಿಗೆ ಬೆಲೆಕಟ್ಟಲು ಸಾಧ್ಯವಿಲ್ಲ. ಹಣದಿಂದ ಎಲ್ಲವೂ ಅಲ್ಲ. ನಿಷ್ಕಲ್ಮಶವಾದ ಭಕ್ತಿ ಮುಖ್ಯ ಎಂದರು.
Leave a Comment