
ಹಳಿಯಾಳ:- ಸರಾಯಿ ವ್ಯಸನಕ್ಕೆ ತುತ್ತಾಗುತ್ತಿದ್ದ ರೈತರು, ಕೂಲಿಕಾರರು ಹಾಗೂ ಯುವಕರನ್ನು ಗಮನಿಸಿ ಕೆಲವು ಗ್ರಾಮದ ಜನರು ತಮ್ಮ ಗ್ರಾಮಗಳಲ್ಲಿ ಮಧ್ಯಪಾನ ಹಾಗೂ ಮಧ್ಯ(ಸರಾಯಿ) ಮಾರಾಟಕ್ಕೆ ಸಂಪೂರ್ಣ ನಿಷೇಧ ಹೇರಿದ್ದರೆ ಇನ್ನೂ ಕೆಲವು ಹಳ್ಳಿಗಳಲ್ಲಿ ಹಳಿಯಾಳದಿಂದ ಕೆಲವು ಮನೆ ಹಾಗೂ ಅಂಗಡಿಗಳ ಬಾಗಿಲಿಗೆ ಅವ್ಯಾಹತವಾಗಿ ಸರಾಯಿ ಸರಬರಾಜು ಆಗುತ್ತಿರುವ ಆಘಾತಕಾರಿ ಬೆಳವಣಿಗೆ ಬಗ್ಗೆ ಹಳ್ಳಿಗರು ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಜಾಣಕುರುಡುತನ :– ಪಟ್ಟಣದಲ್ಲಿ ಸರ್ಕಾರದಿಂದ ಮಧ್ಯ ಮಾರಾಟಕ್ಕೆ ಸಿಎಲ್-2 ಲೈಸನ್ಸ್ ಇರುವ 6 ಅಂಗಡಿಗಳು, ಒಂದು ಸಿಎಲ್-4 ಹಾಗೂ ಸಿಎಲ್-7 ಪರವಾನಿಗೆ ಇರುವ 4 ಒಟ್ಟೂ 11 ಅಂಗಡಿಗಳಿಗೆ ಪರವಾನಿಗೆ ಇದೆ ಬಿಟ್ಟರೇ ಉಳಿದೆಲ್ಲವು ಅನಧಿಕೃತ ಹಾಗೂ ಅಕ್ರಮ ಮಾರಾಟ ಎಂಬುದು ಸ್ಪಷ್ಟವಾಗಿದೆ. ಪರವಾನಿಗೆ ಹೊಂದಿರುವ ಬಾರ್ಗಳನ್ನು ಹೊರತು ಪಡಿಸಿ ಬಾಡೂಟದ ಹೊಟೆಲ್ಗಳು, ದಾಬಾಗಳು ಸೇರಿದಂತೆ ಹಲವು ಕಡೆಗಳಲ್ಲಿ ಎಗ್ಗಿಲ್ಲದೇ ಮಧ್ಯ ಮಾರಾಟ ನಡೆಯುತ್ತದೆ ಆದರೇ ಸಂಬಂಧಪಟ್ಟ ಅಬಕಾರಿ ಇಲಾಖೆಯವರು ಮಾತ್ರ ಜಾಣಕುರುಡುತನ ಪ್ರದರ್ಶಿಸುತ್ತಾ ಬರುತ್ತಿರುವುದು ಇದೇ ಮೊದಲೇನು ಅಲ್ಲ ತಮಗೆ ಸೇರುವುದು ಸೇರಿದರೇ ಮುಗಿಯಿತು ಎನ್ನುವ ಲೆಕ್ಕಕ್ಕೆ ಸಾಗುತ್ತಾರೆ.
ಯಕ್ಷ ಪ್ರಶ್ನೇ :- ಮಧ್ಯ ಮಾರಾಟದ ಅಂಗಡಿಗಳಿಗೆ ಪರವಾನಿಗೆ ನೀಡುವಾಗ ಸಂಬಂಧಿಸಿದವರು ದೇವಸ್ಥಾನ, ಶಾಲೆಗಳು ಇತ್ಯಾದಿ ಸಾರ್ವಜನೀಕ ಸ್ಥಳಗಳನ್ನು ಬಿಟ್ಟು 100 ಮೀಟರ್ ಕಾಯ್ದುಕೊಂಡು ಪರವಾನಿ ಮಂಜೂರು ಮಾಡಬೇಕಾಗುತ್ತದೆ ಆದರೇ ಇದು ಎಲ್ಲಿ ಎಷ್ಟರ ಮಟ್ಟಿಗೆ ಪಾಲನೆ ಆಗುತ್ತಿದೆ ಎಂಬುವುದು ಯಕ್ಷ ಪ್ರಶ್ನೇಯಾಗಿದೆ.
ಮಾದರಿ ಗ್ರಾಮಗಳು:- ಸದ್ಯಕ್ಕೆ ತೇರಗಾಂವ, ಯಡೋಗಾ, ನಿರಲಗಾ ಸೇರಿದಂತೆ ಕೆಲವು ಹಳ್ಳಿಗಳು ಮಧ್ಯ ಮಾರಾಟಕ್ಕೆ ಬ್ರೇಕ್ ಹಾಕಿದ್ದು ಗ್ರಾಮದ ಯಾರಾದರೂ ಮಧ್ಯಮಾರಾಟ ಮಾಡಿದ್ದು ಕಂಡು ಬಂದಲ್ಲಿ ಅವರಿಗೆ ಬಹಿರಂಗ ಸಭೆಯಲ್ಲಿ ಭಾರಿ ಪ್ರಮಾಣದ ದಂಡ ವಿಧಿಸುವ ಕಾನೂನನ್ನು ಜಾರಿಗೊಳಿಸಿಕೊಂಡಿದ್ದು ಇತರರಿಗೂ ಮಾದರಿ ಗ್ರಾಮಗಳಾಗಿವೆ.
ಅಕ್ರಮ ಸರಾಯಿ -ಡಬಲ್ ದರಕ್ಕೆ ಮಾರಾಟ:– ಇವುಗಳನ್ನು ಹೊರತು ಪಡಿಸಿ ಗ್ರಾಮಾಂತರ ಭಾಗದಲ್ಲಿ ಕೆಲವು ಕಡೆಗಳಲ್ಲಿ ಕಿರಾಣಿ ಅಂಗಡಿ, ಸಣ್ಣ ಬಿಡಾ ಅಂಗಡಿಗಳು, ಚಹಾ ಅಂಗಡಿಗಳಲ್ಲಿ ಹಾಗೂ ಹಲವು ಮನೆಗಳಲ್ಲಿ ಕೂಡ ಅಕ್ರಮ ಸರಾಯಿ ಮಾರಾಟವು ನಡೆಯುತ್ತಿದೆ ಅಲ್ಲದೇ ಎಮ್.ಆರ್.ಪಿ ದರಕ್ಕಿಂತ ಎರಡೂ ಪಟ್ಟು(ಡಬಲ್) ಹೆಚ್ಚಿನ ಬೆಲೆಯಲ್ಲಿ ಮದ್ಯವನ್ನು ಮರಾಟ ಮಾಡುತ್ತಿರುವುದು ಹೆಚ್ಚಿನ ಬೆಲೆಗೆ ಮಧ್ಯ ಕೊಳ್ಳುತ್ತಿರುವ ಕೆಲವರಿಂದ ಈಗ ಈ ಎಲ್ಲ ವ್ಯವಹಾರಗಳು ಬಹಿರಂಗಗೊಳ್ಳುತ್ತಿದ್ದು ಕ್ರಮ ಕೈಗೊಳ್ಳಬೇಕಾದ ಅಬಕಾರಿ ಇಲಾಖೆಯವರು ಮಾತ್ರ ಕಣ್ಣು ಮುಚ್ಚಿ ಕುಳಿತಿರುವುದು ವ್ಯಾಪಕ ಟೀಕೆಗಳಿಗೆ ಗುರಿಯಾಗಿದೆ.
ಗ್ರಾಮಾಂತರ ಭಾಗದಲ್ಲಿ ಜನವಸತಿ ಕಡಿಮೆ ಇರುವುದರಿಂದ ಮೂರು-ನಾಲ್ಕೂ ಗಲ್ಲಿಗಳಿಗೆ ಗ್ರಾಮಗಳ ವಿಸ್ತಾರ ಮುಗಿಯುತ್ತದೆ. ಇಲ್ಲಿ ಶಾಲೆ, ದೇವಸ್ಥಾನಗಳು ಅತ್ಯಂತ ಸನಿಹದಲ್ಲಿಯೇ ಇರುತ್ತವೆ. ಇಂತಹ ಪ್ರದೇಶಗಳಲ್ಲಿಯೂ ದೇವಸ್ಥಾನ-ಶಾಲೆಯನ್ನು ಲೆಕ್ಕಿಸದೆ ಸನಿಹದಲ್ಲೇ ಅವ್ಯಾಹತವಾಗಿ ಅಕ್ರಮ ಸರಾಯಿ ಮಾರಾಟ ನಡೆಸಲಾಗುತ್ತಿದೆ ಎಂಬ ಬಗ್ಗೆ ಗ್ರಾಮಸ್ಥರು ಮಾಧ್ಯಮದವರಿಗೆ ದೂರುತ್ತಿದ್ದಾರೆ.
ಅನಾಯಾಸವಾಗಿ ಮಧ್ಯ ದೊರೆಯುತ್ತೆ :- ತಾಲೂಕಿನ ಬೊಮ್ಮನಳ್ಳಿ, ಕೆಸರೊಳ್ಳಿ, ಮುರ್ಕವಾಡ, ಕರ್ಲಕಟ್ಟಾ, ಭಾಗವತಿ, ಕಾಳಗಿನಕೊಪ್ಪ ಇತರ ಹಲವು ಗ್ರಾಮಗಳಲ್ಲಿ ಹಾಗೂ ಅಕ್ರಮ ಸರಾಯಿ ಮಾರಾಟ ಈ ಹಿಂದೆ ಸಂಪೂರ್ಣವಾಗಿ ಬಂದ್ ಆಗಿದ್ದ ದುಸಗಿ, ಮಂಗಳವಾಡ, ಸಾತನಳ್ಳಿ, ಅರ್ಲವಾಡ, ಮದನಳ್ಳಿ ಗ್ರಾಮಗಳಲ್ಲಿ ಮತ್ತೇ ಸರಾಯಿ ಹಳಿಯಾಳದಿಂದ ಸರಬರಾಜು ಆಗುತ್ತಿರುವ ಕಾರಣ ಹಳ್ಳಿಗಳಲ್ಲೂ ಮತ್ತೇ ಅನಾಯಾಸವಾಗಿ ಮಧ್ಯ ಮಾರಾಟ ನಡೆಯುತ್ತಿದೆ.
ಸಂಶಯಕ್ಕೆ ಕಾರಣ :- ಅಕ್ರಮ ಸರಾಯಿ ಮಾರಾಟ ಕುರಿತು ಹಾಗೂ ಗ್ರಾಮದ ರೈತರು, ಯುವಕರು, ಕೂಲಿಕಾರರು ಈ ವ್ಯಸನಗಳಿಗೆ ಬಲಿಯಾಗುತ್ತಿರುವ ಬಗ್ಗೆ ಜನಪ್ರತಿನಿಧಿಗಳು, ಸಂಬಂಧಿಸಿದ ಇಲಾಖೆಯವರಿಗೆ ಮೌಖಿಕವಾಗಿ ದೂರಿದರು ಸಹಿತ ಈವರೆಗೆ ಯಾವುದೇ ಕ್ರಮ ಜರುಗಿಸದೆ ಇರುವುದು ಸಂಶಯಕ್ಕೆ ಎಡೆಮಾಡಿದೆ.
ಇನ್ನೂ ಬೊಮ್ಮನಳ್ಳಿ ಗ್ರಾಮದ ಅಕ್ರಮ ಸರಾಯಿ ಮರಾಟದ ಬಗ್ಗೆ ಕಳೆದ 2 ವರ್ಷಗಳಿಂದ ಗ್ರಾಮಸ್ಥರು ಶಾಸಕ ಆರ್.ವಿ.ದೇಶಪಾಂಡೆ, ಮಾಜಿ ಶಾಸಕರಿಗೆ, ವಿಧಾನ ಪರಿಷತ್ ಸದಸ್ಯರ ಹಾಗೂ ಸಂಬಂಧಪಟ್ಟ ಇಲಾಖೆಯವರ ಗಮನಕ್ಕೆ ತಂದರೂ ಕೂಡ ಈವರೆಗೆ ಅಕ್ರಮ ಚಟುವಟಿಕೆ ನಡೆಸುವವರ ಮೇಲೆ ಕ್ರಮ ಜರುಗಿಸದೆ ಇರುವುದು ದುರ್ದೈವದ ಸಂಗತಿಯಾಗಿದೆ.
ಈ ಕುರಿತು ಪ್ರತಿನಿಧಿಯೊಂದಿಗೆ ಮಾತನಾಡಿದ ಅಬಕಾರಿ ಇಲಾಖೆ ದಾಂಡೇಲಿ ವಿಭಾಗದ ಪಿಎಸ್ಐ ವೈದ್ಯ ಅವರು ಹಳ್ಳಿಗಳಲ್ಲಿ ಅಕ್ರಮ ಸರಾಯಿ ಮಾರಾಟದ ಕುರಿತು ಮಾಹಿತಿ ನೀಡಿದರೇ ಕ್ರಮ ಜರುಗಿಸಲಾಗುವುದು. ಮಾಹಿತಿ ನೀಡುವವರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು ಹಾಗೂ ಅಕ್ರಮ ತಡೆಗೆ ಇಲಾಖೆಯೊಂದಿಗೆ ಸಾರ್ವಜನೀಕರ ಸಹಕಾರವು ಮುಖ್ಯವಾಗಿದ ಎಂದರು.
ಗ್ರಾಮಾಂತರ ಭಾಗಗಳಲ್ಲಿ ರಾಜಾರೋಷವಾಗಿ ನಡೆಯುತ್ತಿದೆ ಎನ್ನಲಾಗುತ್ತಿರುವ ಈ ಅಕ್ರಮ ಮಧ್ಯ ಮಾರಾಟದ ಜಾಡನ್ನು ಹಿಡಿದು ಅವರ ಹೆಡೆಮುರಿ ಕಟ್ಟಿ ಹೆಚ್ಚಾಗಿ ರೈತ ಸಮುದಾಯವನ್ನೇ ಒಳಗೊಂಡಿರುವ ಗ್ರಾಮಗಳ ಜನರನ್ನು ಈ ಕೆಟ್ಟ ವ್ಯಸನದಿಂದ ಮುಕ್ತವಾಗಿಸಬೇಕು ಎನ್ನುವುದು ಸಾರ್ವಜನೀಕರ ಆಗ್ರಹಪೂರ್ವಕ ವಿನಂತಿಯಾಗಿದೆ
Leave a Comment