
ಹೊನ್ನಾವರ ತಾಲೂಕಿನ ಹೊಸಾಕುಳಿ ಲಕ್ಷ್ಮೀನಾರಾಯಣ, ಉಮಾಮಹೇಶ್ವರ ದೇವರ ಸನ್ನಿಧಿಯಲ್ಲಿ ಜನವರಿ 15ರಿಂದ ಆರಂಭಿಸಿ 21ರವರೆಗೆ 7ದಿನಗಳ ಕಾಲ ನಡೆಯುವ ಅಖಂಡ ಭಜನಾ ಸಪ್ತಾಹ ಮತ್ತು ಧಾರ್ಮಿಕ ಕಾರ್ಯಕ್ರಮಗಳಿಗೆ ಶಾಸಕ ದಿನಕರ ಶೆಟ್ಟಿ ದೀಪ ಬೆಳಗುವ ಮೂಲಕ ಚಾಲನೆ ನೀಡಿದರು.
ನಂತರ ಮಾತನಾಡಿ ಜಪತಪ, ಭಜನೆ, ಹೋಮಹವನ, ಮೊದಲಾದ ದೇವತಾರಾಧನೆಗಳು ಮನುಷ್ಯನ ಮನಸ್ಸನ್ನು ಶುದ್ಧಗೊಳಿಸಿ ಸಾಮರಸ್ಯ ಬೆಳೆಸಿ, ಸಮಾಜಕ್ಕೆ ನೆಮ್ಮದಿ, ಶಕ್ತಿ ನೀಡುತ್ತದೆ. ತಮ್ಮ ಕ್ಷೇತ್ರದ ಪಂಚಗ್ರಾಮ ಭಾಗಕ್ಕೆ 2ಕೋಟಿ ರೂಪಾಯಿಗಳ ಕಾಮಗಾರಿಗಳನ್ನು ಸದ್ಯ ಮಂಜೂರುಮಾಡಿರುವುದಾಗಿ ವಿವರ ನೀಡಿ ಜನರಿಗಾಗಿ ನನ್ನ ಮನೆಬಾಗಿಲು ಸದಾ ಕಾಲ ತೆರೆದಿರುತ್ತದೆ. ಯಾವುದೇ ಒಳ್ಳೆಯ ಅಭಿವೃದ್ಧಿ ಕೆಲಸಗಳಿಗೆ ತನ್ನ ಸಹಕಾರ ಇದೆ, ಇಂದು ನಾವು ಧಾರ್ಮಿಕ, ಸಾಮಾಜಿಕ ಕಾರ್ಯಗಳನ್ನು ಮಾಡಬೇಕು. ಧಾರ್ಮಿಕ ಕಾರ್ಯಕ್ರಮಗಳಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಇಂದು ಈ ಗ್ರಾಮದಲ್ಲಿ ನನ್ನ ನಿರಿಕ್ಷೆಗೂ ಮೀರಿ ಸಾರ್ವಜನಿಕರು ಸೇರಿರುವುದು ಸಂತಸ ತಂದಿದೆ. ಮುಂದಿನ ದಿನದಲ್ಲಿಯೂ ಸಮಸ್ಯೆ ಬಗ್ಗೆ ಗಮನಹರಿಸಿ ಅದರ ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೆನೆ ಎಂದರು.

ಜಿಲ್ಲಾ ಪಂಚಾಯತ ಸದಸ್ಯೆ ಶ್ರೀಕಲಾ ಶಾಸ್ತ್ರಿ ಮಾತನಾಡಿ ಅಖಂಡ ಭಜನಾ ಸಪ್ತಾಹ ಒಂದು ಉತ್ತಮ ಧಾರ್ಮಿಕ ಕಾರ್ಯಖ್ರಮ. ಹಿಂದೆ ಪ್ರತಿ ಮನೆಗಳಲ್ಲಿ ಪ್ರತಿನಿತ್ಯ ಭಜನೆ ನಡೆಯುತ್ತಿತ್ತು. ಆದರೆ ಇಂದು ಕಡಿಮೆಯಾಗಿದೆ. ದೇವಾಲಯದಲ್ಲಿ ಒಂದು ವಾರಗಳ ಕಾಲ ಅಖಂಡಭಜನಾ ಸೇವೆಯಲ್ಲಿ ನಾವೆಲ್ಲರೂ ಭಕ್ತಿಯಿಂದ ಭಾಗವಹಿಸಬೇಕಿದೆ. ಧರ್ಮವನ್ನು ನಾವು ರಕ್ಷಿಸಿದರೆ ಧರ್ಮ ನಮ್ಮನ್ನು ರಕ್ಷಣೆ ಮಾಡುತ್ತದೆ. ಧಾರ್ಮಿಕ ಕಾರ್ಯಕ್ರಮಗಳು ಹೆಚ್ಚುಹೆಚ್ಚು ನಡೆದಾಗ ಮಾತ್ರ ಸಮಾಜ ಶಾಂತಿ ಗುರುಹಿರಿಯರ ಭಕ್ತಿ ಭಾವನೆ ಮೂಡಲಿದೆ ಎಂದರು.
ಗ್ರಾಮ ಪಂಚಾಯತ ಅಧ್ಯಕ್ಷ ಸುರೇಶ ಶೆಟ್ಟಿ ಮಾತನಾಡಿ ನನ್ನ ಅಧ್ಯಕ್ಷ ಅವಧಿಯಲ್ಲಿ ಇಂತಹ ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿರುವುದು ನನಗೆ ಸಂತಸ ತಂದಿದೆ. ಈ ದೇವಾಲಯ ಪುರಾಣ ಪ್ರಸಿದ್ದವಾಗಿದ್ದು ಅನೇಕ ಹಿರಿಮೆಗಳನ್ನು ಹೊಂದಿದೆ. ಸಂಕ್ರಾತಿಯ ಈ ಶುಭ ಸಮಯದಲ್ಲಿ 7 ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮದ ಜೊತೆ ಭಜನಾ ಸಪ್ತಾಹ ನಡೆಯುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.
ವೇದಿಕೆಯಲ್ಲಿ ಜಿ.ಜಿ.ಸಭಾಹಿತ್, ಜಿಯುಭಟ್, ಟಿಎಸ್ ಹೆಗಡೆ, ಉಮೇಶ ನಾಯ್ಕ, ಸುಬ್ರಹ್ಮಣ್ಯ ಶಾಸ್ತ್ರಿ, ಉಮೇಶ ಹೆಗಡೆ, ಲಲಿತಾ ನಾಯ್ಕ, ಶ್ರೀಧರ ಭಟ್, ಜಿ.ಎಸ್.ಹೆಗಡೆ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಿತು.

Leave a Comment