
ಕಾರವಾರ, / ಕೇರಳದಲ್ಲಿ ಸಿಆರ್ ಝೆಡ್ ನಿಯಮ ಉಲ್ಲಂಘಿಸಿ ಕಟ್ಟಲಾಗಿದ್ದ ಕಟ್ಟಡವನ್ನು ಕೋರ್ಟ್ ಆದೇಶದ ಮೇರೆಗೆ ತೆರವು ಮಾಡಿದ ಪ್ರಕರಣದ ಬೆನ್ನಲ್ಲೇ ಉತ್ತರ ಕನ್ನಡ ಜಿಲ್ಲೆಯಲ್ಲಿ ಕರಾವಳಿ ಭಾಗದಲ್ಲೂ ಸಿಆರ್ ಝೆಡ್ ನಿಯಮ ಉಲ್ಲಂಘಿಸಿದವರಿಗೆ ನಡುಕ ಹುಟ್ಟಿಸಿದೆ.
ರಾಜ್ಯದ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿಯಲ್ಲಿ ಸಿಆರ್ ಝೆಡ್ ನಿಯಮ ಉಲ್ಲಂಘಿಸಿದ ಸುಮಾರು 170 ಪ್ರಕರಣಗಳು ದಾಖಲಾಗಿವೆ.
ಇದರಲ್ಲಿ ಉತ್ತರ ಕನ್ನಡ ಜಿಲ್ಲೆಯೊಂದರಲ್ಲಿಯೇ ಸುಮಾರು 106 ಪ್ರಕರಣಗಳು ದಾಖಲಾಗಿದ್ದು, ಆ ಮೂಲಕ ಸಿಆರ್ ಝೆಡ್ ನಿಯಮ ಉಲ್ಲಂಘಿಸಿದ ರಾಜ್ಯದಲ್ಲೇ ಅತಿ ಹೆಚ್ಚು ಪ್ರಕರಣ ದಾಖಲಾಗಿರುವ ಜಿಲ್ಲೆ ಎನ್ನುವ ಪಟ್ಟ ಉತ್ತರ ಕನ್ನಡ ಪಡೆದುಕೊಂಡಿದೆ.

ಜಿಲ್ಲೆಯ ಗೋಕರ್ಣ ಒಂದರಲ್ಲಿಯೇ ಸುಮಾರು 76 ಪ್ರಕರಣಗಳು ದಾಖಲಾಗಿದ್ದರೆ, ಕಾರವಾರ ನಗರದಲ್ಲಿ ಅಜ್ವಿ ಓಷಿಯನ್ ಹಾಗೂ ರಾಕ್ಗಾರ್ಡನ್ ಸಿಆರ್ ಝೆಡ್ ನಿಯಮ ಉಲ್ಲಂಘಿಸಿ ಕಟ್ಟಲಾಗಿದೆ ಎಂದು ಪ್ರಕರಣ ದಾಖಲಾಗಿದೆ.
ಮುರ್ಡೇಶ್ವರ, ಅಂಕೋಲಾ, ಹೊನ್ನಾವರ, ಕುಮಟಾ ಹಾಗೂ ಭಟ್ಕಳದಲ್ಲೂ ಕೆಲವು ಪ್ರಕರಣಗಳು ದಾಖಲಾಗಿವೆ. ಜಿಲ್ಲೆಯಲ್ಲಿ ಸಿಆರ್ ಝೆಡ್ ನಿಯಮ ಉಲ್ಲಂಘಿಸಿ ಬಹುಮಹಡಿ ಕಟ್ಟಡ ಕಟ್ಟದಿದ್ದರೂ, ನಿಯಮದ ಪ್ರಕಾರ ಶಾಶ್ವತ ಕಟ್ಟಡ ಕಾಮಗಾರಿ ಮಾಡಲು ಸಾಧ್ಯವಿಲ್ಲ. ಹೀಗಿದ್ದರೂ ಇದನ್ನು ಉಲ್ಲಂಘಿಸಿ ಶಾಶ್ವತ ಕಟ್ಟಡ ಕಟ್ಟಿರುವುದರಿಂದ ಪ್ರಕರಣ ದಾಖಲಾಗಿದೆ.

Leave a Comment